More

    ತೆರಿಗೆ ವಸೂಲಿ ಮಾಡದ ಗ್ರಾಪಂ !

    ಬೆಳಗಾವಿ: ಲಾಕ್‌ಡೌನ್ ಮತ್ತು ಕರೊನಾ ವೈರಸ್ ನೆಪದಲ್ಲಿ ಗ್ರಾಪಂ ಸಿಬ್ಬಂದಿ ತೆರಿಗೆ ವಸೂಲಿ ಕೈ ಬಿಟ್ಟಿದ್ದು, ಇತ್ತ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವೇತನವೂ ದೊರೆಯುತ್ತಿಲ್ಲ.

    ಬೆಳಗಾವಿ ಜಿಲ್ಲಾ ವ್ಯಾಪ್ತಿಯ 506 ಗ್ರಾಪಂಗಳಲ್ಲಿ ಲಾಕ್‌ಡೌನ್ ಬಳಿಕ ಮಾ. 14ರಿಂದ ಸಿಬ್ಬಂದಿ ತೆರಿಗೆ ವಸೂಲಿಗೆ ಮುಂದಾಗಿಲ್ಲ. ಇದರಿಂದ ಮಾಸಿಕ ಲಕ್ಷಾಂತರ ರೂ. ತೆರಿಗೆ ಸಂಗ್ರಹವಾಗಿಲ್ಲ. ಲಾಕ್‌ಡೌನ್ ಸಡಿಲುಗೊಂಡು ತಿಂಗಳಾಗುತ್ತ ಬಂದರೂ ಯಾವುದೇ ಗ್ರಾಪಂನಲ್ಲಿ ತೆರಿಗೆ ವಸೂಲಿ ಕಾರ್ಯ ಆರಂಭವಾಗಿಲ್ಲ. ಅಲ್ಲದೆ, ತೆರಿಗೆ ವಸೂಲಿ ಸಿಬ್ಬಂದಿ ವಿವಿಧ ಕಾರಣ ಮುಂದಿಟ್ಟು ವಸೂಲಿ ಮಾಡದ್ದರಿಂದ ಗ್ರಾಪಂಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿವೆ.

    ಖರ್ಚು-ವೆಚ್ಚಕ್ಕೂ ಇಲ್ಲ ಹಣ: ಪ್ರತಿವರ್ಷ ಜಿಲ್ಲೆಯ 506 ಗ್ರಾಪಂಗಳಿಂದ ವಾರ್ಷಿಕ 46ರಿಂದ 54 ಕೋಟಿ ರೂ. ತೆರಿಗೆ ವಸೂಲಿ ಗುರಿ ಹಾಕಿಕೊಳ್ಳಲಾಗುತ್ತಿದೆ. ಅದರಲ್ಲಿ ಶೇ. 40ರಷ್ಟು ಸಿಬ್ಬಂದಿ ವೇತನ ಪಾವತಿಸಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ತೆರಿಗೆ ವಸೂಲಿಯಲ್ಲಿ ಸಿಬ್ಬಂದಿ ನಿರ್ಲಕ್ಷೃ ಹಾಗೂ ಇನ್ನಿತರ ಕಾರಣಗಳಿಂದ ಕೇವಲ 18ರಿಂದ 20 ಕೋಟಿ ರೂ. ಮಾತ್ರ ವಾರ್ಷಿಕ ತೆರಿಗೆ ಸಂಗ್ರಹವಾಗಿದ್ದು, ಗ್ರಾಪಂ ಸಿಬ್ಬಂದಿ ವೇತನ ಹಾಗೂ ಇನ್ನಿತರ ಖರ್ಚು-ವೆಚ್ಚಗಳಿಗೂ ನೀಡಲು ಹಣ ಇಲ್ಲ. ಇದರಿಂದ ವಿವಿಧ ಅಭಿವೃದ್ಧಿ ಕೆಲಸಗಳೂ ಸ್ಥಗಿತಗೊಂಡಿದ್ದು, ಅಭಿವೃದ್ಧಿ ಕುಂಠಿತವಾಗಿದೆ.

    6 ತಿಂಗಳಿಗೊಮ್ಮೆ ವೇತನ: ರಾಜ್ಯ ಸರ್ಕಾರ ಶಾಸನಬದ್ಧ ಅನುದಾನ ಯೋಜನೆಯಡಿ ಗ್ರಾಪಂಗಳಿಗೆ 10ರಿಂದ 30 ಲಕ್ಷ ರೂ. ವರೆಗೆ ನೀಡುತ್ತಿದೆ. ಈ ಹಣದಲ್ಲಿ ಶೇ. 40ರಷ್ಟು ಹೆಸ್ಕಾಂ ವಿದ್ಯುತ್ ಬಿಲ್ ಪಾವತಿಗೆ ಹಾಗೂ ಇನ್ನುಳಿದ ಶೇ. 60ರಷ್ಟು ಅನುದಾನದಲ್ಲಿ ಕುಡಿಯುವ ನೀರು, ವಿದ್ಯುತ್ ಬಲ್ಬ್ ಅಳವಡಿಕೆ ಸೇರಿ ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ತೆರಿಗೆ ಆದಾಯವನ್ನೇ ನಂಬಿಕೊಂಡ ಗ್ರಾಪಂಗೆ, ಹೊರಗುತ್ತಿಗೆ ಸಿಬ್ಬಂದಿಗೆ 5-6 ತಿಂಗಳಿಗೊಮ್ಮೆ ವೇತನ ನೀಡುತ್ತಿದೆ ಎಂದು ಜಿಪಂ ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರು ದೂರಿದ್ದಾರೆ.

    ಗ್ರಾಪಂಗಳಿಗಿಲ್ಲ ನಿರೀಕ್ಷಿತ ಆದಾಯ !

    506 ಗ್ರಾಪಂ ವ್ಯಾಪ್ತಿಯಲ್ಲಿ ಕೈಗಾರಿಕೆಗಳು, ಕಲ್ಲು-ಕಡಿ ಘಟಕಗಳು, ಸೋಲಾರ್ ವಿದ್ಯುತ್ ಯೋಜನೆ ಸೇರಿ ವಿವಿಧ ರೀತಿಯ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ತೆರಿಗೆ ವಸೂಲಿ ಕೈಬಿಟ್ಟಿದ್ದರಿಂದ ಗ್ರಾಪಂಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಗ್ರಾಪಂ ನಿರ್ಲಕ್ಷೃದಿಂದ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ಆದಾಯ ಕಂಡವರ ಪಾಲಾಗುತ್ತಿದೆ. ಕೆಲ ಗ್ರಾಪಂಗಳ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯ ಆಸ್ತಿಗಳ ಬಗ್ಗೆಯೇ ಮಾಹಿತಿ ಇಲ್ಲ. ಕೆಲವರು ವಾಣಿಜ್ಯ ಚಟುವಟಿಕೆಗಳಿಗೆ ಪರವಾನಗಿ ಪಡೆದು ನಾಲ್ಕೈದು ವರ್ಷ ಕಳೆದರೂ ನವೀಕರಣ ಕೆಲಸ ಆಗಿಲ್ಲ ಎಂದು ಅವರಾದಿ ಗ್ರಾಪಂ ಸದಸ್ಯ ಭೀಮಶಿ ಅರಕೇರಿ ದೂರಿದ್ದಾರೆ.

    ಲಾಕ್‌ಡೌನ್ ಸಡಿಲುಗೊಂಡ ಬಳಿಕ ಕರ ವಸೂಲಿ ಆರಂಭಿಸುವಂತೆ ಎಲ್ಲ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಕರ ವಸೂಲಿ ಮಾಡದೆ ನಿರ್ಲಕ್ಷಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಲಾಗಿದೆ.
    | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts