More

    ಕುಡಿಯುವ ನೀರಿನ ಸಮಸ್ಯೆ ಆಗದಿರಲಿ

    ಸೇಡಂ: ಬೇಸಿಗೆಯಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಬಹುದು ಎಂಬುದರ ಬಗ್ಗೆ ಮಾಹಿತಿ ಪಡೆದು, ಈಗಿನಿಂದಲೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಾಕೀತು ಮಾಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮತಕ್ಷೇತ್ರದ ಟಾಸ್ಕ್​ಫೋರ್ಸ್​ ಸಮಿತಿ ಸಭೆ ನಡೆಸಿ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಡಬಾರದು. ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ನಿತ್ಯ ಭೇಟಿ ನೀಡಿ ಕುಡಿವ ನೀರು ಸೇರಿ ಏನೆಲ್ಲ ಸಮಸ್ಯೆ ಇದೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ ಹೊಸ ಬೋರ್‌ವೆಲ್ ಕೊರೆಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿಗಳಿಗೆ ಕಳಿಸಿ ಎಂದು ಸೂಚನೆ ನೀಡಿದರು.

    ತಾಲೂಕಿನ ಬಹುತೇಕ ಕಡೆ ಜೆಜೆಎಂ ಕಾಮಗಾರಿ ಕಳಪೆಯಿಂದ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಷಗಳೇ ಕಳೆದರೂ ಅನೇಕ ಕಡೆ ಕಾಮಗಾರಿಗಳು ಆರಂಭಗೊಂಡಿಲ್ಲ. ಆದರು ನೀವೇಕೆ ಸುಮ್ಮನೆ ಕುಳಿತಿದ್ದೀರಿ ? ನಿಮಗೂ ಕಮಿಷನ್ ಕೊಡ್ತಿದ್ದಾರಾ ಎಂದು ಕಿಡಿಕಾರಿದರು.

    ಗ್ರಾಮೀಣ ಕುಡಿವ ನೀರು ಇಲಾಖೆ ಎಇಇ ವಿಜಯಕುಮಾರ ಯಾದಗಿರ ಮಾತನಾಡಿ, ಕಾರಣಾಂತರಗಳಿಂದ ಕೆಲವೆಡೆ ಮಾತ್ರ ಕಾಮಗಾರಿ ಆರಂಭಗೊಂಡಿಲ್ಲ. ಬರುವ ಮಾರ್ಚ್​ನೊಳಗೆ ತಾಲೂಕಿನಲ್ಲಿರುವ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಪಂ ಇಒಗಳಾದ ಚನ್ನಪ್ಪ ರಾಯಣ್ಣವರ್ (ಸೇಡಂ), ಶಂಕರ ರಾಠೋಡ್ (ಚಿಂಚೋಳಿ), ಗ್ರೇಡ್-೨ ತಹಸೀಲ್ದಾರ್ ಸಿದ್ರಾಮ್ ನಾಚವಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವೈ.ಹಂಪಣ್ಣ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ನಾಯಕ ಇತರರಿದ್ದರು.

    ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬೋಗಸ್ ಬಿಲ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದ್ಯಾವುದು ನಮ್ಮಲ್ಲಿ ನಡೆಯುವುದಿಲ್ಲ, ಇಲ್ಲಿಗೆ ಎಲ್ಲ ಅವ್ಯವಹಾರ ನಿಲ್ಲಬೇಕು. ಇಲ್ಲವಾದಲ್ಲಿ ತನಿಖೆ ಮಾಡಿಸಿ, ಜೈಲಿಗೆ ಕಳಿಸಬೇಕಾಗುತ್ತದೆ.
    | ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts