More

    ಸಭೆಗೆ ಅಧಿಕಾರಿಗಳು ಗೈರಾದರೆ ಶಿಸ್ತು ಕ್ರಮ ಕೈಗೊಳ್ಳಿ; ಶಾಸಕ ಪ್ರಕಾಶ ಕೋಳವಾಡ ಸೂಚನೆ

    ರಾಣೆಬೆನ್ನೂರ: ತಾಲೂಕಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಯಲಾಗಿರುವ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುವ ಪ್ರವೃತ್ತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆಗಬಾರದು ಎಂದು ಶಾಸಕ ಪ್ರಕಾಶ ಕೋಳಿವಾಡ ಕಟ್ಟು ನಿಟ್ಟಿನ ಸೂಚನೆ ನೀಡಿದರು.
    ನಗರದ ತಾಪಂ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಭೆ ಪ್ರಾರಂಭಿಸುವ ಮುನ್ನ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಕಳೆದ ತಿಂಗಳು ನಗರದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ಸಭೆಗೆ ತಿಳಿಸಬೇಕು ಎಂದು ಸೂಚಿಸಿದರು.
    ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಮಾತನಾಡಿ, ಜನತಾ ದರ್ಶನದಲ್ಲಿ ಸ್ವೀಕೃತಿ ಆಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.
    ಜಿಪಂ ಇಂಜಿನಿಯರಿಂಗ್ ಇಲಾಖೆಗೆ 8, ನಗರಸಭೆಗೆ 25, ಹೆಸ್ಕಾಂಗೆ 13 ಅರ್ಜಿಗಳು ಸಲ್ಲಿಕೆಯಾಗಿದ್ದು ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
    ಗೊಂದಲದ ಮಾಹಿತಿ…
    ಇಲಾಖೆವಾರು ಪ್ರಗತಿ ಪರಿಶೀಲನೆ ಪ್ರಾರಂಭಿಸಿದಾಗ ಜಿಪಂ ಇಂಜಿನಿಯರಿಂಗ್ ಅಧಿಕಾರಿ ರಾಮಣ್ಣ ಬಜಾರಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಗೊಂದಲದ ಮಾಹಿತಿ ನೀಡಿದರು. ಆಗ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮಂತ್ರದ ಹಾಗೆ ಮಾಹಿತಿ ಹೇಳಿದರೆ ಏನು ಗೊತ್ತಾಗಲಿಲ್ಲ. ನಮಗೆ ತಿಳಿಯುವ ಹಾಗೆ ಹೇಳಬೇಕು ಎಂದರು. ಆಗ ಅಧಿಕಾರಿ ನಮ್ಮದು ದೊಡ್ಡ ಇಲಾಖೆ, ಎಲ್ಲ ಕಾಮಗಾರಿಗಳನ್ನು ಹೇಳಿದರೆ ಸುಮಾರು ಎರಡು ಗಂಟೆಯಾಗುತ್ತದೆ ಎಂದರು. ಕೊನೆಗೆ ಶಾಸಕರು ನಮಗೆ ಅರ್ಥವಾಗುವ ಹಾಗೆ ಮಾಹಿತಿ ನೀಡಿ ಸಾಕು ಎಂದರು.
    ಜಲಜೀವನ ಮಿಷನ್ ಯೋಜನೆಯಡಿ ಸಮರ್ಪಕವಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಬಹಳಷ್ಟು ಗ್ರಾಮಗಳಿಂದ ಕೆಲವು ಗುತ್ತಿಗೆದಾರರ ವಿರುದ್ಧ ದೂರುಗಳು ಕೇಳಿಬಂದಿವೆ. ಅವರಿಗೆ ಹಣ ಪಾವತಿಸಬಾರದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲವು ಕಡೆ ಹಳೆ ಟ್ಯಾಂಕ್‌ಗಳಿಗೆ ಬಣ್ಣ ಹೊಡೆದು ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಅಂತಹ ಯಾವುದೇ ಕಾಮಗಾರಿ ಆಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
    ಸರ್ಕಾರಿ ಶಾಲೆಯ ರೇಷನ್ ಕಳ್ಳತನದ ವಿಷಯ ಕಳವಳಕಾರಿಯಾಗಿದೆ. ಇದರ ಬಗ್ಗೆ ಯಾವ ಕ್ರಮ ಜರುಗಿಸಿದ್ದೀರಿ? ಎಂದು ಶಾಸಕರು ಅಕ್ಷರ ದಾಸೋಹ ಅಧಿಕಾರಿ ಲಿಂಗರಾಜ ಸುತ್ತಕೋಟಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಈಗಾಗಲೇ ರೇಷನ್ ಕಳ್ಳರನ್ನು ಬಂಧಿಸಲಾಗಿದೆ. ಭದ್ರತಾ ದೃಷ್ಠಿಯಿಂದ ಶಾಲಾ ಮುಖ್ಯ ಗುರುಗಳಿಗೆ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
    ತಾಪಂ ಇಒ ಸುಮಲತಾ ಎಸ್.ಪಿ. ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts