More

    ಕುಡಿವ ನೀರಿನ ವಿಷಯದಲ್ಲಿ ನಿಷ್ಕಾಳಜಿ ಬೇಡ

    ತಾಳಿಕೋಟೆ: ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಸಂಬಂಧಿತ ತಾಲೂಕಿನ 18 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ವಿದ್ಯುತ್ ನೆಪದ ಮೇಲೆ ನಿಷ್ಕಾಳಜಿ ತೋರಿದ ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ಜೆ.ಪಿ.ಶೆಟ್ಟಿ ಅವರನ್ನು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಶನಿವಾರ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಪಂ, ತಾಪಂ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡ 2019-20ನೇ ಸಾಲಿನ ತ್ರ್ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕುಡಿವ ನೀರಿನ ಸಮಸ್ಯೆ ಈಗಲೇ ಬಹಳಷ್ಟಿದೆ. ಅದನ್ನು ದೂರಮಾಡಲು ಸರ್ಕಾರದಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡಿ ಕಾಮಗಾರಿ ಮುಕ್ತಾಯಗೊಳಿಸಿದ್ದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರನು ನಿದ್ದೆ ಮಾಡುತ್ತಿದ್ದಿರೇನು? ಎಂದು ಪ್ರಶ್ನಿಸಿದರು.

    ಕೃಷಿ ಅಧಿಕಾರಿ ಯರಝರಿ ಮಾತನಾಡಿ, 681 ಕೃಷಿ ಹೊಂಡಗಳನ್ನು ತೋಡಲಾಗಿದೆ. ಇದಕ್ಕೆ ಸಂಬಂಧಿಸಿ 531 ಹೊಂಡಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.

    ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ ಹುಕ್ಕೇರಿ ಮಾತನಾಡಿ, ಇಲಾಖೆಯಿಂದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಕುಷ್ಠರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಟಿಬಿ, ಕುಷ್ಠರೋಗ ಇನ್ನಿತರ ರೋಗಗಳಿಗೆ ಸಂಬಂಧಿಸಿ ರಕ್ತಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

    ಅಬಕಾರಿ ಇಲಾಖೆ ಪ್ರಗತಿ ಪರಿಶೀಲಿಸಿದ ಶಾಸಕರು, ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿ, ಪಾನಬೀಡಾ ಅಂಗಡಿಗಳಲ್ಲಿಯೂ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ಕಾಣುತ್ತಿದ್ದೇವೆ. ಅಧಿಕಾರಿಗಳಾದ ತಾವು ಏನು ಮಾಡುತ್ತಿದ್ದೀರಿ ಎಂದಾಗ ಅಬಕಾರಿ ಅಧಿಕಾರಿ ಹಂದ್ರಾಳ ಅವರು, ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಾರಾಯಿ ಮಾರುವುದನ್ನು ನಿಲ್ಲಿಸಲಾಗಿದೆ. ಕೇಸು ಕೂಡ ಕೊಟ್ಟಿದ್ದೇವೆ ಎಂದರು. ಇದಕ್ಕೆ ಸಿಟ್ಟಾದ ಶಾಸಕ ಸೋಮನಗೌಡ ಪಾಟೀಲರು, ನಾನೇ ಖುದ್ದಾಗಿ ಬರುತ್ತೇನೆ ನಡ್ರೀ, ಪ್ರತಿಯೊಂದು ಹಳ್ಳಿಗಳಲ್ಲಿಯೂ ತೋರಿಸುತ್ತೇನೆ. ಕಿರಾಣಿ ಅಂಗಡಿ, ಬೀಡಾ ಅಂಗಡಿ, ಕೆಲವು ಮನೆಗಳಲ್ಲಿ ಅಕ್ರಮ ಸಾರಾಯಿ ಮಾರುತ್ತಿದ್ದಾರೆ. ಅಲ್ಲದೆ ಕಳ್ಳಬಟ್ಟಿ ಸಾರಾಯಿ ಕೆಲವು ಹಳ್ಳಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿದೆ, ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದರು. ಕಳ್ಳಬಟ್ಟಿ ಮತ್ತು ಅಕ್ರಮ ಸಾರಾಯಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಸರ್ಕಾರ ಸೂಚಿತ ಸಮಯಕ್ಕೆ ಸಾರಾಯಿ ಅಂಗಡಿಗಳು ತೆಗೆಯಬೇಕು. ಇವೆಲ್ಲವೂ ಪ್ರಗತಿ ಕಾಣದೇ ಹೋದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ, ಲೋಕೋಪಯೋಗಿ ಕಿರಿಯ ಅಭಿಯಂತರ ಜಿ.ಎಸ್.ಪಾಟೀಲ, ಪಶು ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಸ್.ಸಿಂದಗಿ, ಬಸ್ ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ, ಎಪಿಎಂಸಿ ಕಾರ್ಯದರ್ಶಿ ಅವಟಿ, ಎಡಿಎಲ್‌ಆರ್ ಮಧುಭಾವಿ, ಸಿಂಧಗಿ ತಾಪಂ ಇಒ ಸುರೇಶ, ಸಿಂದಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಭಾನಿ, ಗ್ರಾಪಂ ಪಿಡಿಒಗಳು, ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿಗಳು ಮಾಹಿತಿ ಸಲ್ಲಿಸಿದರು.

    ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ತಾಪಂ ಪ್ರಭಾರಿ ಇಒ ದೇಸಾಯಿ ಅವರಿಗೆ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಸೂಚಿಸಿದರು.

    ಕೊಣ್ಣೂರ ಜಿಪಂ ಸದಸ್ಯರ ಪ್ರತಿನಿಧಿ ಬಸವರಾಜ ಅಸ್ಕಿ, ತಾಪಂ ಸದಸ್ಯ ಸೋಮನಗೌಡ ಹಾದಿಮನಿ, ರಾಜುಗೌಡ ಕೊಳೂರ, ಬಸನಗೌಡ ಬಿರಾದಾರ, ಪ್ರಶಾಂತ ಹಾವರಗಿ, ಎಂ.ಎಂ.ಪಾಟೀಲ, ಸಂಗನಗೌಡ ಹೆಗರಡ್ಡಿ, ಎಚ್.ಎಸ್.ಢವಳಗಿ, ಶೇಖರಗೌಡ ತಂಗಡಗಿ, ಶಾಸಕರ ಆಪ್ತಸಹಾಯಕ ಸಿದ್ದು ಇಂಗಳೇಶ್ವರ ಉಪಸ್ಥಿತರಿದ್ದರು. ತಹಸೀಲ್ದಾರ್ ಅನೀಲಕುಮಾರ ಢವಳಗಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts