More

    ಕರೊನಾಗೆ ಅನಾಥವಾದ ಬಾಲಕ..!

    ಜಿ.ಪಿ. ಘೋರ್ಪಡೆ
    ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ಎಂಟು ವರ್ಷದ ಬಾಲಕನೋರ್ವ ತನ್ನ ಹೆತ್ತವರನ್ನು ಕಳೆದುಕೊಂಡು ಅನಾಥನಾಗಿದ್ದು, ಸದ್ಯ ತಾಯಿಯ ತವರು ಮನೆ ವಡವಡಗಿಯಲ್ಲಿನ ಅಜ್ಜಿ ಮನೆಯಲ್ಲಿ ಆಸರೆ ಪಡೆದಿದ್ದಾನೆ.

    ಮೈಲೇಶ್ವರದ ಮಾನಪ್ಪ ಬಡಿಗೇರ ಹಾಗೂ ಸರೋಜಿನಿ ದಂಪತಿ ಮಗ ಬಸವರಾಜ (ಅಪ್ಪಾಜಿ) ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿರುವ ನತದೃಷ್ಟ ಬಾಲಕ.

    ಮನೆಯಲ್ಲಿ ಕಡುಬಡತನವಿದ್ದರೂ ಮಾನಪ್ಪನ ಕುಟುಂಬ ಸಂತಸದಿಂದ ಬಾಳ್ವೆ ಮಾಡುತ್ತಿತ್ತು. ಆದರೆ ಕರೊನಾ ಮಹಾಮಾರಿಗೆ ಮೊದಲು ಸರೋಜಿನಿಯನ್ನು ಬಲಿ ಪಡೆಯಿತು. ನಂತರ ಪತ್ನಿಯ ಅಂತ್ಯಸಂಸ್ಕಾರ ಮುಗಿಸಿದ ಒಂದೇ ವಾರದಲ್ಲಿ ಮಾನಪ್ಪನಿಗೂ ಕರೊನಾ ಲಕ್ಷಣಗಳು ಕಂಡುಬಂದು, ಪತ್ನಿ ಸತ್ತ 22 ದಿನಗಳ ಅಂತರದಲ್ಲಿ ಪುಟ್ಟ ಬಾಲಕ ಬಸವರಾಜನನ್ನು ಅನಾಥನನ್ನಾಗಿ ಮಾಡಿ ಮಾನಪ್ಪನವರೂ ಇಹಲೋಕ ತ್ಯಜಿಸಿದರು.

    ಬಾಲಕನಿಗೆ ಬೇಕು ಸಹಾಯಹಸ್ತ
    ಮಾನಪ್ಪ ಬಡಿಗೇರ ಕರಕುಶಲಕರ್ಮಿಯಾಗಿದ್ದು ಕೂಲಿ ಮಾಡುತ್ತಿದ್ದರೂ ಮಗ ಬಸವರಾಜನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದರು. ಪಟ್ಟಣದ ವಿಪಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿ ಮುಗಿಸಿ 4 ನೇ ತರಗತಿಗೆ ಕಾಲಿಡಲು ಅಣಿಯಾಗಿದ್ದಾನೆ. ಈಗ ಅನಿವಾರ್ಯವಾಗಿ ವಡವಡಗಿಯಲ್ಲಿರುವ ಅಜ್ಜಿ ಮನೆಯಲ್ಲಿ ಆಸರೆ ಪಡೆದಿದ್ದು ಆ ಕುಟುಂಬವೂ ಕಡುಬಡತನದಲ್ಲಿದೆ. ಹೀಗಾಗಿ ಬಾಲಕನ ಭವಿಷ್ಯಕ್ಕಾಗಿ ಸಹಾಯಹಸ್ತದ ಅವಶ್ಯಕತೆ ಇದೆ. ಬಸವರಾಜನ ಪೋಷಣೆಗೆ ಸಹಾಯ ಮಾಡುವ ಮನಸ್ಸುಳ್ಳವರು ಆತನ ಎಸ್‌ಬಿಐ ಬ್ಯಾಂಕ್ ಖಾತೆ ನಂ. 38727014246 (ಐಎ್ಎಸ್‌ಸಿ ಕೋಡ್: ಎಸ್‌ಬಿಐನಂ: 40313) ಗೆ ಸಹಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 99026 06415ಗೆ ಸಂಪರ್ಕಿಸಲು ಪೋಷಕರು ಕೋರಿದ್ದಾರೆ.

    ಜಿಲ್ಲಾಡಳಿತಕ್ಕಿಲ್ಲ ಮಾಹಿತಿ
    ಕರೊನಾದಿಂದ ಅನಾಥರಾದ ಮಕ್ಕಳ ಸಂಖ್ಯೆಯ ಪಟ್ಟಿಯಲ್ಲಿ ವಿಜಯಪುರದಲ್ಲಿ ದಿ. 9-6-2021ರವರೆಗೆ ಒಂದೂ ಮಗುವಿಲ್ಲ ಎಂದು ವರದಿಯಾಗಿದೆ. ಹಾಗಾದರೆ ಈ ಬಾಲಕ ಅನಾಥನಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದಾಯಿತು. ತಕ್ಷಣವೇ ಈ ನಿಟ್ಟಿನಲ್ಲಿ ಸಂಬಂಧಿತ ಜಿಲ್ಲಾಡಳಿತದ ಅಧಿಕಾರಿಗಳು ಪರಿಶೀಲನೆ ನಡೆಸಿ, ಅನಾಥನಾಗಿರುವ ಬಾಲಕನಿಗೆ ಸೂಕ್ತ ಸಹಾಯ, ಸಹಕಾರ ನೀಡಬೇಕಿದೆ.

    ಸರ್ಕಾರ ಸಹಾಯಕ್ಕೆ ಧಾವಿಸಲಿ
    ಕೋವಿಡ್‌ನಿಂದ ಅನಾಥವಾದ ಮಕ್ಕಳಿಗೆ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆ ಜಾರಿಗೊಳಿಸಿ ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸ ಹೊಣೆ ಹೊತ್ತುಕೊಳ್ಳುವುದಾಗಿ ಘೋಷಿಸಿದ್ದು, ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕ ಆಸರೆ ಪಡೆದಿರುವ ಬಸವರಾಜನಿಗೆ ಸರ್ಕಾರ ನೆರವಿಗೆ ಧಾವಿಸಬೇಕಿದೆ. ಯೋಜನೆಯಂತೆ ಮಾಸಿಕ 3,500 ರೂ. ನೀಡಲು ಮುಂದಾಗಬೇಕಿದೆ.

    ಜಿಲ್ಲೆಯಲ್ಲಿ ಕರೊನಾದಿಂದ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಸರ್ವೇ ನಡೆಯುತ್ತಿದೆ. ಮೈಲೇಶ್ವರದ ಎಂಟು ವರ್ಷದ ಬಾಲಕ ಅನಾಥವಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ಶೀಘ್ರವೇ ಪರಿಶೀಲನೆ ನಡೆಸಿ ನಮ್ಮ ಇಲಾಖೆಯಿಂದ ಅನುಕೂಲ ಮಾಡಲಾಗುವುದು.
    ಸಾವಿತ್ರಿ ಗುಗ್ಗರಿ ಸಿಡಿಪಿಒ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts