More

    ಮಕ್ಕಳಲ್ಲಿರುವ ಪ್ರತಿಭೆ ದೇಶದ ಆಸ್ತಿ: ಮಧು ಬಂಗಾರಪ್ಪ

    ಶಿವಮೊಗ್ಗ: ನಾನು ಜವಾಬ್ದಾರಿ ವಹಿಸಿಕೊಂಡಿರುವ ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಹಂತವಾಗಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲಾಗುವುದು. ದೈಹಿಕ ಶಿಕ್ಷಣ, ಕಲೆ, ಸಂಗೀತ, ಶಿಕ್ಷಕರ ನೇಮಕಾತಿಗೆ ಕ್ರಮೇಣ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ಡಿವಿಎಸ್ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 53 ಸಾವಿರ ಶಿಕ್ಷಕರ ಕೊರತೆಯಿತ್ತು. ಈಗಾಗಲೇ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 4 ರಿಂದ 5 ಸಾವಿರ ದೈಹಿಕ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು.
    ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರವನ್ನೂ ಒದಗಿಸಲಾಗುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯ ಬೆಳವಣಿಗೆಗೂ ಪ್ರೋತ್ಸಾಹ ನೀಡಲಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ದೇಶದ ಆಸ್ತಿ. ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುವುದು. ಶಿಕ್ಷಣದೊಂದಿಗೆ ಮಕ್ಕಳಲ್ಲಿರುವ ಕ್ರೀಡಾ ಸಾಮರ್ಥ್ಯವನ್ನೂ ಗುರುತಿಸಿ ಸೂಕ್ತ ಉತ್ತೇಜನ ನೀಡಲಾಗುವುದು ಎಂದರು.
    ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಮೂರು ಸಾವಿರ ಕೆಪಿಎಸ್ ಆರಂಭಿಸಲಾಗುವುದು. ಆ ಮೂಲಕ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಕಲೆ, ಸಂಗೀತ, ಕ್ರೀಡಾ ಚಟುವಟಿಕೆಗಳನ್ನೊಳಗೊಂಡ ಗುಣಮಟ್ಟದ ಶಿಕ್ಷಣ ಇಲ್ಲಿ ಲಭಿಸಲಿದೆ. ಮುಂದಿನ ವರ್ಷ 500 ಶಾಲೆಗಳನ್ನು ಕೆಪಿಎಸ್ ಹಂತಕ್ಕೆ ಉನ್ನತೀಕರಿಸಲಾಗುವುದು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 4-6 ಶಾಲೆಗಳು ಉನ್ನತೀಕರಣಗೊಳ್ಳಲಿವೆ ಎಂದು ಹೇಳಿದರು.
    ರೆಡ್‌ಕ್ರಾಸ್ ವತಿಯಿಂದ ನೀಡಲಾದ ಮಾಸ್ಕ್‌ಗಳನ್ನು ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಕಲಿಕೆಯಲ್ಲಿ ಹಿಂದುಳಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿದ್ಧಪಡಿಸಿರುವ ವಿಷನ್-95 ಪುಸ್ತಕವನ್ನು ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
    ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಗೌಡ, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts