More

    ಆರೋಗ್ಯದೆಡೆಗೆ ಕಾಳಜಿಯಿರಲಿ

    ಚಾಮರಾಜನಗರ: ಪೌರ ಕಾರ್ಮಿಕರು ನಿತ್ಯ ಊರನ್ನೇ ಸ್ವಚ್ಛಗೊಳಿಸುವ ಕೆಲಸ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ಇವರೇ ಮೊದಲ ವೈದ್ಯರಾಗಿದ್ದು, ಇವರನ್ನು ಗೌರವಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅಭಿಪ್ರಾಯಪಟ್ಟರು.
    ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಪೌರ ಕಾರ್ಮಿಕರು ನಮ್ಮ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುವವರು. ಯೋಧರಂತೆ ಕೆಲಸ ಮಾಡುವ ಇವರಿಗೆ ಎಲ್ಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ ಎಂದರು.

    ಪೌರಕಾರ್ಮಿಕರು ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವಿದ್ದು, ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು. ಉಚಿತ ಆರೋಗ್ಯ ಸೇವೆಗಳಿದ್ದು ಇದರ ಲಾಭ ಪಡೆದುಕೊಳ್ಳಬೇಕು. ಜತೆಗೆ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
    ಈಗಿರುವ ಮನೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದಕ್ಕೆ ತಾತ್ಕಾಲಿಕವಾಗಿ ರಿಪೇರಿ ಮಾಡಿಸುವ ಕೆಲಸಕ್ಕೆ ಪಂಚಾಯಿತಿ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ, ಗೃಹಭಾಗ್ಯ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೂ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸದಸ್ಯ ವೈ.ಜಿ ರಂಗನಾಥ ಮಾತನಾಡಿ, ಪೌರ ಕಾರ್ಮಿಕರು ಮಾಡುವ ವೃತ್ತಿ ಶ್ರೇಷ್ಟವಾಗಿದ್ದು, ಹಿಂಜರಿಕೆ ಸ್ವಭಾವ ಬಿಟ್ಟು ತಮಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಅಲ್ಲದೆ, ವೈ.ಜಿ.ರಂಗನಾಥ ಪೌರಕಾರ್ಮಿಕರ ಸೇವೆ ಕುರಿತು ಸ್ವರಚಿತ ಕವನ ವಾಚಿಸಿ ಗಮನ ಸೆಳೆದರು.

    ಸದಸ್ಯ ಮಹೇಶ್ ಮಾತನಾಡಿ, ಪೌರಕಾರ್ಮಿಕರಿಗೆ ಮನೆ, ಅಂಗನವಾಡಿ ಕಟ್ಟಡ, ರೆಸ್ಟ್ ರೂಂನ ಅವಶ್ಯಕತೆ ಇದ್ದು, ಇದನ್ನು ಪಂಚಾಯಿತಿ ವತಿಯಿಂದ ಮಾಡಿಕೊಡಬೇಕು. ಆರೋಗ್ಯ ದೃಷ್ಟಿಯಿಂದ ಕಡ್ಡಾಯವಾಗಿ ಪಂಚಾಯಿತಿ ವತಿಯಿಂದ ನೀಡಲಾಗಿರುವ ಕಿಟ್‌ಗಳಲ್ಲಿನ ಪರಿಕರಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಆಡಳಿತಾಧಿಕಾರಿ ತಹಸೀಲ್ದಾರ್ ಜಯಪ್ರಕಾಶ್ ಮಾತನಾಡಿದರು. ಇದೇ ವೇಳೆ ಪೌರಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ತರಿಸಲಾಯಿತು. ಅಲ್ಲದೆ, ಆರೋಗ್ಯ ಕಿಟ್‌ಗಳನ್ನು ವಿತರಿಸಲಾಯಿತು. ಪೌರ ಕಾರ್ಮಿಕರಾದ ನಾಗರಾಜು, ಶೋಭಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪಪಂ ಸದಸ್ಯರಾದ ಮಹದೇವನಾಯಕ, ಮಂಜು, ರವಿ, ಸುಶೀಲಾ ಪ್ರಕಾಶ್, ಲಕ್ಷ್ಮಿಮಲ್ಲು ಹಾಗೂ ಮಲ್ಲಿಕಾರ್ಜುನ, ಲಕ್ಷ್ಮಿ, ಜಯಲಕ್ಷ್ಮಿ, ರೇಖಾ, ರಘು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts