More

    ನಿಯಮ ಮೀರಿದ ಗೋದಾಮಿಗೆ ಬೀಗ

    ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

    ಲಾಕ್​ಡೌನ್ ನಿಯಮ ಉಲ್ಲಂಘಿಸಿ ಪಾನ್​ವುಸಾಲಾ, ತಂಬಾಕು ಉತ್ಪನ್ನಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಗುರುವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದ್ದ 5 ಗೋದಾಮುಗಳಿಗೆ ಬೀಗ ಜಡಿಯಲಾಯಿತು.

    ಪಟ್ಟಣ ಸೇರಿ ತಾಲೂಕಿನಲ್ಲಿ 15 ದಿನಗಳಿಂದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಪದಾರ್ಥಗಳ ಮಾರಾಟ ನಿಷೇಧಿಸಲಾಗಿದೆ. ಹೀಗಿದ್ದರೂ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಖರೀದಿ ನಿಂತಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಹೋಲ್​ಸೇಲ್ ವ್ಯಾಪಾರಿಗಳು ಕದ್ದುಮುಚ್ಚಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ದರ ಕೊಟ್ಟು ಖರೀದಿಸಿದ ಚಿಲ್ಲರೆ ವ್ಯಾಪಾರಸ್ಥರು ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಗ್ರಾಹಕರಿಗೆ ಎರಡುಮೂರು ಪಟ್ಟ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 5 ರೂ. ಬೆಲೆಯ ಚೀಟಿಗೆ 12-15 ರೂ. ಹಾಗೂ 15 ರೂ. ಬೆಲೆಯ ತಂಬಾಕು ಉತ್ಪನ್ನಗಳಿಗೆ 30-40 ರೂ. ಪಡೆದು ಮಾರಾಟ ಮಾಡಲಾಗುತ್ತಿದೆ.

    ದಿನಸಿ, ತರಕಾರಿ ಹೊರತುಪಡಿಸಿ ಎಲ್ಲ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದ್ದರೂ ಕಳ್ಳದಾರಿಯಲ್ಲಿ ದಂಧೆ ಅವ್ಯಾಹತವಾಗಿ ಸಾಗಿದೆ. ಈ ಕುರಿತು ಅಧಿಕಾರಿಗಳು, ತಹಸೀಲ್ದಾರರು, ಪೊಲೀಸ್, ಪುರಸಭೆಗೆ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ ದಾಸ್ತಾನು ಮಾಡಲಾಗಿದ್ದ ಗೋದಾಮುಗಳಿಗೆ ಬೀಗ ಜಡಿದು ಎಚ್ಚರಿಕೆ ನೀಡಲಾಗಿದೆ.

    ವಿಜಯವಾಣಿ ಜೊತೆ ಮಾತನಾಡಿದ ತಹಸೀಲ್ದಾರರು, ನಿಯಮ ಮೀರಿ ಅಧಿಕ ದರಕ್ಕೆ ಪಾನ್ ಮಸಾಲಾ ಸೇರಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಹಾಗೂ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿ ಗೋದಾಮುಗಳಿಗೆ ಬೀಗ ಜಡಿಯಲಾಗಿದೆ. ಪಟ್ಟಣದಲ್ಲಿ ಕಿರಾಣಿ, ಜನರಲ್ ಸ್ಟೋರ್ಸ್ ಸೇರಿ ಇತರೆ ಅಂಗಡಿಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಲಾಕ್​ಡೌನ್ ಅವಧಿ ಮುಗಿದ ನಂತರ ದಾಸ್ತಾನು ಹಾಗೂ ಲೈಸನ್ಸ್ ವಗೈರೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಗೋದಾಮಿನಲ್ಲಿರುವ ದಾಸ್ತಾನು ಮಾರಾಟಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪಿಎಸ್​ಐ ಶಿವಯೋಗಿ ಲೋಹಾರ, ಪುರಸಭೆಯ ಮಂಜುನಾಥ ಮುದಗಲ್, ಬಸವಣ್ಣೆಪ್ಪ ನಂದೆಣ್ಣವರ, ಬಿ.ಎಸ್. ಬಳಗಾನೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts