More

    ತಹಸೀಲ್ದಾರ್ ಮೇಲಿನ ಹಲ್ಲೆಗೆ ಖಂಡನೆ: ಕಾರಟಗಿಯಲ್ಲಿ ಲಿಂಗಾಯತ ಸಮುದಾಯದಿಂದ ಬೃಹತ್ ಪ್ರತಿಭಟನೆ

    ಕಾರಟಗಿ: ಬಸವಾದಿ ಶರಣರ ಮಾರ್ಗವನ್ನು ಇಂದಿಗೂ ಪಾಲಿಸುತ್ತಿರುವ ಲಿಂಗಾಯತ ಸಮುದಾಯವು ನಾಡಿಗೆ ಅಕ್ಷರ, ಅನ್ನ ಹಾಗೂ ಆರೋಗ್ಯ ದಾಸೋಹ ನೀಡಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಶಿಧರಗೌಡ ಪಾಟೀಲ್ ಹೇಳಿದರು.

    ಬೀದರ್ ಜಿಲ್ಲೆಯ ಹುಮನಾಬಾದ್ ತಹಸೀಲ್ದಾರ್ ಡಾ.ಪ್ರದೀಪ್ ಹಿರೇಮಠ ಮೇಲಿನ ಹಲ್ಲೆ ಖಂಡಿಸಿ ಶನಿವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ತಹಸೀಲ್ದಾರ್ ಮೇಲಿನ ಹಲ್ಲೆ ಖಂಡನೀಯ. ಸಮುದಾಯದವರನ್ನು ಗುರಿಯಾಗಿಸಿ ದಬ್ಬಾಳಿಕೆ, ಹಲ್ಲೆಗಳಂತಹ ಘಟನೆಗಳು ಮರುಕಳಿಸುತ್ತಿವೆ. ಇದು ಕೊನೆಯಾಗಲಿ ಎಂದರು.

    ಪಟ್ಟಣದ ಪುರಸಭೆ ಬಳಿ ಪ್ರತಿಭಟನಾ ಮೆರವಣಿಗೆಗೆ ಹಿರೇಮಠದ ಸಿದ್ರಾಮಯ್ಯಸ್ವಾಮಿ ಚಾಲನೆ ನೀಡಿದರು. ಕಾರಟಗಿ ತಾಲೂಕಿನ ಹಳ್ಳಿಗಳು, ಗಂಗಾವತಿ, ಕನಕಗಿರಿ, ಸಿಂಧನೂರಿನಿಂದ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ರವಿ ಅಂಗಡಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಮೂರೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಹೆಬ್ಬಾಳ ಬೃಹನ್ಮಠದ ಡಾ.ನಾಗಭೂಷಣ ಶಿವಾಚಾರ್ಯ, ಸುಳೇಕಲ್‌ನ ಪದ್ಮಾಕ್ಷರಯ್ಯಸ್ವಾಮಿ, ಏಲೆಕೂಡ್ಲಿಗಿಯ ಅಮರಯ್ಯಸ್ವಾಮಿ, ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ತಲೇಖಾನ ಮಠದ ವೀರಭದ್ರಯ್ಯಸ್ವಾಮಿ ಇತರರಿದ್ದರು.

    ಮಾನವೀಯತೆ ಮೆರೆದರು: ಪ್ರತಿಭಟನೆಯ ವೇಳೆ ರೋಗಿ ಹೊತ್ತ ಆಂಬುಲೆನ್ಸ್ ಆಗಮಿಸಿತು. ರಸ್ತೆಯಲ್ಲಿ ಮೂರೂವರೆ ಸಾವಿರಕ್ಕೂ ಅಧಿಕವಿದ್ದ ಪ್ರತಿಭಟನಾನಿರತರು ಕೇವಲ 30 ಸೆಕೆಂಡ್‌ಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಮಾನವೀಯತೆ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts