ದೆಹಲಿ: ನಿಜಾಮುದ್ದೀನ್ ಮಾರ್ಖಜ್ ಕರೊನಾ ವೈರಸ್ ಹಾಟ್ಸ್ಫಾಟ್ ಆಗಲು ಕಾರಣವಾದ ತಬ್ಲಿಘಿ ಜಮಾತ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್ ಖಂಡಲ್ವಿ ಸೇರಿ ಒಟ್ಟು ಏಳು ಜನರ ಕ್ವಾರಂಟೈನ್ ಅವಧಿ ಸೋಮವಾರ ಮುಕ್ತಾಯಗೊಂಡಿದೆ.
ಹೀಗಾಗಿ ದೆಹಲಿ ಪೊಲೀಸರು ಮೌಲಾನಾ ಸಾದ್ ಅವರನ್ನು ಶೀಘ್ರವೇ ವಿಚಾರಣೆಗೆ ಹಾಜರಾಗಲು ಹೇಳಲಿದ್ದಾರೆ ಎನ್ನಲಾಗಿದೆ.
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್ನಲ್ಲಿ ದೆಹಲಿ ಸರ್ಕಾರ ಗುಂಪುಗೂಡುವುದನ್ನು ನಿರ್ಬಂಧಿಸಿದ್ದರೂ, ಅದನ್ನು ಲೆಕ್ಕಿಸದೆ ತಬ್ಲಿಘಿ ಜಮಾತ್ ಸಭೆ ನಡೆಸಿತ್ತು. ಅದರಲ್ಲಿ ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಈಗ ಬಹುತೇಕ ಅವರಿಗೆಲ್ಲ ಕರೊನಾ ವೈರಸ್ ತಗುಲಿದೆ. ಆದರೆ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ಮಾ.28ರಿಂದಲೇ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಮಾ.28ರಿಂದಲೂ ನಾಪತ್ತೆಯಾಗಿರುವ ಮೌಲಾನಾ ಸಾದ್ ತಾವು ಕ್ವಾರಂಟೈನ್ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಸಾದ್ ಅವರು ಕ್ವಾರಂಟೈನ್ ಅವಧಿ ಮುಗಿದ ತಕ್ಷಣ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಏ.8ರಂದು ಅವರ ವಕೀಲರು ಹೇಳಿದ್ದರು. ಈಗ ಏ.13ರಂದು ಕ್ವಾರಂಟೈನ್ ಮುಗಿದಿದೆ.
ಧಾರ್ಮಿಕ ಸಭೆ ಮುಗಿದ ಬಳಿಕ ದೆಹಲಿ ನಿಜಾಮುದ್ದೀನ್ ಮರ್ಖಜ್ನಲ್ಲೇ ಬೀಡು ಬಿಟ್ಟಿದ್ದ ಸಾದ್ ಅವರಿಗೆ ಸ್ಥಳ ಖಾಲಿ ಮಾಡುವಂತೆ, ಅಲ್ಲಿಂದ ತೆರಳುವಂತೆ ಎರಡು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಮೌಲಾನಾ ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವಿಲ್ಲ. ಆದರೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಅವರೇ ಹೇಳಿದಂತೆ ವಿಚಾರಣೆಗೆ ಆಗಮಿಸಬೇಕಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)