More

    ಚಿಹ್ನೆ ಆಧಾರದಲ್ಲಿ ಪಾಲಿಕೆ ದಂಗಲ್!

    ಬೆಳಗಾವಿ: ಲೋಕಸಭೆ ಉಪ ಚುನಾವಣೆ ಹೊಸ್ತಿಲಲ್ಲೇ ಜರುಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಈಗ ಹೈವೋಲ್ಟೇಜ್ ಸ್ವರೂಪ ಪಡೆದುಕೊಂಡಿದೆ. ಚುನಾವಣೆ ಇಲ್ಲದೆ, ವಾರ್ಡ್‌ಗಳಿಗೆ ಸದಸ್ಯರಿಲ್ಲದೆ ಒಂದು ವರ್ಷದಿಂದ ಮಂಕಾಗಿದ್ದ ಪಾಲಿಕೆಗೆ ಚುನಾವಣೆಯಲ್ಲಿ ಚಿಹ್ನೆಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಳಿಸುವುದಾಗಿ ರಾಜಕೀಯ ಪಕ್ಷಗಳು ಹೇಳಿರುವುದರಿಂದ ಕಣ ರಂಗೇರುವ ಮುನ್ಸೂಚನೆ ಸಿಕ್ಕಿದೆ.
    ಹಲವು ದಶಕಗಳಿಂದ ಮಹಾನಗರ ಪಾಲಿಕೆ ಚುನಾವಣೆಯು ಕನ್ನಡ, ಮರಾಠಿ ಮತ್ತು ಉರ್ದು ಭಾಷಿಕ ಆಧಾರದ ಮೇಲೆ ನಡೆದುಕೊಂಡು ಬರುತ್ತಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ರಾಜಕೀಯ ಪಕ್ಷಗಳು ಚಿಹ್ನೆ ಆಧಾರದ ಮೇಲೆ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿಕೊಂಡಿವೆ. ಇದು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರು ಸೂಕ್ಷ್ಮವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

    ಕರ್ನಾಟಕ ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರದಲ್ಲಿ ಮರಾಠಿ ಮತ್ತು ಕನ್ನಡಿಗರ ಮಧ್ಯೆ ವೈಮನಸ್ಸು, ಪ್ರತಿಭಟನೆಗಳು ನಡೆದುಕೊಂಡು ಬರುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಚಿಹ್ನೆ ಅಡಿ ಚುನಾವಣೆ ಎದುರಿಸಲು ಸಜ್ಜಾಗಿವೆ. ನಾಲ್ಕೈದು ದಶಕಗಳಿಂದ ಮಹಾನಗರ ಪಾಲಿಕೆ ಆಡಳಿತವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಈ ಬಾರಿ ಅಧಿಕಾರ ಪಡೆದುಕೊಳ್ಳಲು ಕಸರತ್ತು ಆರಂಭಿಸಿದೆ.

    2014ರ ಚುನಾವಣೆಯಲ್ಲಿ ಆಯ್ಕೆಯಾದ 58 ಸದಸ್ಯರಲ್ಲಿ 32 ಎಂಇಎಸ್ ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಎಂಇಎಸ್ ಬೆಂಬಲಿತರೇ ನಾಲ್ಕು ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಆಗಿದ್ದರು. ಬಳಿಕ ಮೀಸಲಾತಿ ಬಲದಿಂದಾಗಿ ಕೊನೆಯ ಅವಧಿಯಲ್ಲಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್ ಗಾದಿ ಒಲಿದಿತ್ತು. ಬಳಿಕ ಚುನಾವಣೆ ಘೋಷಣೆ ಆಗಿಲ್ಲ. ಪರಿಣಾಮ ಮಾಜಿಗಳು ಹಾಗೂ ಹೊಸ ಆಕಾಂಕ್ಷಿಗಳು ಚುನಾವಣೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಅಭ್ಯರ್ಥಿಗಳು ಪಕ್ಷದ ಚಿಹ್ನೆ ಆಧಾರದಲ್ಲಿ ಚುನಾವಣೆ ಎದುರಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ.

    ಹೈಕೋರ್ಟ್ ಆದೇಶ: ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ವಾರ್ಡ್ ಮರು ವಿಂಗಡಣೆ, ವಾರ್ಡ್ ಮೀಸಲು ಅಧಿಸೂಚನೆ, ಮತದಾರರ ಪಟ್ಟಿ, ವೇಳಾಪಟ್ಟಿ ಪ್ರಕಟಿಸಿದ ನಂತರದ 45 ದಿನಗಳಲ್ಲಿ ಚುನಾವಣೆ ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮತ್ತು ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ತಾಲೀಮು ಆರಂಭಿಸಿವೆ.
    ಕಾಂಗ್ರೆಸ್, ಬಿಜೆಪಿ ಎಚ್ಚರಿಕೆ ಹೆಜ್ಜೆ ಮಹಾನಗರ ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 38ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬಲಿಷ್ಠವಾಗಿದೆ. ಹಾಗಾಗಿ ಕನ್ನಡ ಮತ್ತು ಮರಾಠಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಕಷ್ಟ. ಯಾರೇ ಸ್ಪರ್ಧಿಸಿದರೂ ಮರಾಠಿಗರ ಬೆಂಬಲ ಅವಶ್ಯ. ಈ ಹಿನ್ನೆಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಶಾಸಕರು ಬಹಳ ಎಚ್ಚರಿಕಯಿಂದ ಚುನಾವಣೆ ಎದುರಿಸಲು ಸಿದ್ಧತೆ ಆರಂಭಿಸಿದ್ದಾರೆ.

    ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಸೇರಿ ಎಲ್ಲವನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರೇ ನಿರ್ಣಯಿಸುತ್ತಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ವಿಷಯ ಸೂಕ್ಷ್ಮ ವಿಚಾರವಾಗಿರುವುದರಿಂದ ಬೇರೆ ಮಹಾನಗರ ಪಾಲಿಕೆ ಚುನಾವಣೆಗೆ ಹೋಲಿಕೆ ಮಾಡಲು ಬರುವುದಿಲ್ಲ.
    ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts