More

    ನೈಋತ್ಯ ರೈಲ್ವೆಯಿಂದ ಗಣರಾಜ್ಯೋತ್ಸವ ಆಚರಣೆ

    ಹುಬ್ಬಳ್ಳಿ : ಗಣರಾಜ್ಯೊತ್ಸವ ಅಂಗವಾಗಿ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ ಅವರು ಇಲ್ಲಿನ ಕ್ಲಬ್ ರಸ್ತೆಯ ರೈಲ್ವೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೈಋತ್ಯ ರೈಲ್ವೆಯು ಕಳೆದ ಎರಡು ವರ್ಷಗಳಿಂದ ಸ್ವಚ್ಛತಾ ಪಕ್ವಾಡಾದಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದೆ. ಇದು ವಲಯದ ಸಿಬ್ಬಂದಿಗೆ ಹೆಮ್ಮೆಯ ಸಂಗತಿ ಎಂದರು.

    ಕಬ್ಬಿಣದ ಅದಿರು, ಕಲ್ಲಿದ್ದಿಲು, ಸ್ಟೀಲ್ ಮತ್ತಿತರ ಕಚ್ಚಾವಸ್ತುಗಳನ್ನು ಕೈಗಾರಿಕೆಗಳಿಗೆ ಸಾಗಿಸುವ ಮೂಲಕ ಈ ಭಾಗದ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ನೈಋತ್ಯ ರೈಲ್ವೆ ವಲಯ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

    ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆಯು 6,480.05 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆದಾಯ ಶೇ. 11.57ರಷ್ಟು ಹೆಚ್ಚಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಕಳೆದ ಡಿಸೆಂಬರ್​ವರೆಗೆ ಪ್ರಯಾಣಿಕರ ಸಂಚಾರ 111.51 ದಶಲಕ್ಷದಿಂದ 122.78 ದಶಲಕ್ಷಕ್ಕೆ ಏರಿಕೆಯಾಗಿದ್ದು, ಪ್ರಯಾಣಿಕರ ಸಂಚಾರ ಶೇ. 10.11ರಷ್ಟು ಹೆಚ್ಚಿದೆ ಎಂದರು.

    ಭಾರತೀಯ ರೈಲ್ವೆಯಲ್ಲಿಯೇ ನೈಋತ್ಯ ರೈಲ್ವೆ ಸುರಕ್ಷತೆ ದೃಷ್ಟಿಯಲ್ಲಿ ದಾಖಲೆಯನ್ನು ಕಾಯ್ದುಕೊಂಡಿದೆ. ಸಮಯ ಪಾಲನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.

    ಅಪರ ಮಹಾಪ್ರಬಂಧಕ ಯು. ಸುಬ್ಬರಾವ್, ವಲಯದ ಮಹಿಳಾ ಕಲ್ಯಾಣಾಧಿಕಾರಿ ಡಾ. ವಂದನಾ ಶ್ರೀವಾತ್ಸವ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts