More

    ಸ್ವಸ್ತಿ ಅಸ್ತು ವಿಶ್ವಸ್ಯ… ಮೋದಿ ಮಂತ್ರ

    ನವದೆಹಲಿ: ಜಿ-20 ಗುಂಪಿನ ಹಾಲಿ ಅಧ್ಯಕ್ಷ ಆಗಿರುವ ಭಾರತ, ನಿರೀಕ್ಷೆಯಂತೆ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಬ್ರೆಜಿಲ್​ಗೆ ಹಸ್ತಾಂತರಿಸಿದೆ. ಇದೇ ನವೆಂಬರ್ 30ಕ್ಕೆ ಭಾರತದ ಅಧ್ಯಕ್ಷಾವಧಿ ಅಂತ್ಯಗೊಳ್ಳಲಿದೆ. ಡಿ.2ರಿಂದ ಬ್ರೆಜಿಲ್ ಜಿ-20 ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದೆ.

    ಅದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ಜಿ-20 ರಾಷ್ಟ್ರಗಳ ಮುಖಂಡರೊಂದಿಗೆ ಭಾರತ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯೊಂದನ್ನು ನಡೆಸಬೇಕೆಂಬ ಆಶಯ ನಮ್ಮಲ್ಲಿದೆ. ನವದೆಹಲಿ ಶೃಂಗಸಭೆಯಲ್ಲಿ ನೀಡಲಾದ ಸಲಹೆಗಳ ಮೇಲೆ ನಾವು ಮಾಡಿರುವ ಪ್ರಗತಿಗಳ ಪರಿಶೀಲಿಸಲು ಈ ಸಭೆ ಎಂದು ಹೇಳಿದ್ದಾರೆ.

    ಬ್ರೆಜಿಲ್ ಅಧ್ಯಕ್ಷರಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿ ಮಾತನಾಡಿದ ಪಿಎಂ ಮೋದಿ, ಬ್ರೆಜಿಲ್​ಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಮತ್ತು ಆ ದೇಶದ ನಾಯಕತ್ವದಲ್ಲಿ, ಜಿ-20 ನಮ್ಮ ಅಭಿವೃದ್ಧಿಯ ಗುರಿಗಳನ್ನು ಹೆಚ್ಚಿಸುವ ವಿಶ್ವಾಸವಿದೆ ಎಂದರು. ಸ್ವಸ್ತಿ ಅಸ್ತು ವಿಶ್ವಸ್ಯ (ಇಡೀ ಜಗತ್ತಿನಲ್ಲಿ ಭರವಸೆ ಮತ್ತು ಶಾಂತಿ ನೆಲೆಸಬೇಕು) ಸಂಸ್ಕೃತ ನುಡಿಗಟ್ಟಿನೊಂದಿಗೆ ಅವರು ತಮ್ಮ ಮಾತುಗಳನ್ನು ಅಂತ್ಯಗೊಳಿಸಿದರು.

    ಜೈವಿಕ ಇಂಧನ ಒಕ್ಕೂಟ ಮತ್ತೊಂದು ಗರಿ

    ಭಾರತದ ನಾಯಕತ್ವದಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆಯಾಗಿರುವುದು ಭಾರತದ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಎಂದೇ ಹೇಳಲಾಗಿದೆ. ಶೃಂಗಸಭೆಯಲ್ಲಿ ಒಕ್ಕೂಟಕ್ಕೆ ಪಿಎಂ ಚಾಲನೆ ನೀಡಿ ಪ್ರಮುಖ ರಾಷ್ಟ್ರಗಳ ಮನ್ನಣೆಗೆ ಪಾತ್ರವಾಗಿದೆ. ಇದು ಸುಸ್ಥಿರ ಜೈವಿಕ ಇಂಧನಗಳನ್ನು ಉತ್ತೇಜಿಸಲಿದ್ದು, ವಿಶೇಷವಾಗಿ ಸಾರಿಗೆ ವಲಯದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನೂ ಹೆಚ್ಚಿಸಲಿದೆ. ಹಲವು ಜಿ20 ರಾಷ್ಟ್ರಗಳು ಈ ಮೈತ್ರಿಕೂಟಕ್ಕೆ ಸೇರಲು ಆಸಕ್ತಿ ಹೊರಹಾಕಿವೆ. ಜೈವಿಕ ಅಥವಾ ಸಾವಯವ ವಸ್ತುಗಳಿಂದ ಜೈವಿಕ ಇಂಧನಗಳ ಉತ್ಪಾದನೆಯು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲಿದೆ. ಜಗತ್ತು 2070ಕ್ಕೆ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ತಲುಪಲು ಇದು ನೆರವಾಗಬಹುದು. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕಳೆದ ಫೆಬ್ರವರಿಯ ಇಂಡಿಯಾ ಎನರ್ಜಿ ವೀಕ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಜೈವಿಕ ಇಂಧನದಲ್ಲಿ ಜಾಗತಿಕ ವಾಣಿಜ್ಯ ವ್ಯವಹಾರ ಉತ್ತೇಜಿಸುವುದು, ಜೈವಿಕ ಇಂಧನ ಮಾರುಕಟ್ಟೆ ಅಭಿವೃದ್ಧಿಪಡಿಸುವುದು, ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮಗಳಿಗೆ ತಾಂತ್ರಿಕ ನೆರವು ನೀಡುವ ಉದ್ದೇಶವನ್ನು ಒಕ್ಕೂಟ ಹೊಂದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೇರಿ ವಿವಿಧ ಮುಖಂಡರೊಂದಿಗಿನ ಮಾತುಕತೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಗಳಿವೆ.

    biofuel

    ಚುನಾವಣೆ ಮೇಲೆ ಬೀರೀತೆ ಪರಿಣಾಮ?

    2024ರ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿದ್ದು, ದೇಶದ ರಾಜಕೀಯದ ಮೇಲೆ ನವದೆಹಲಿ ಜಿ-20 ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಖಚಿತತೆ ಇಲ್ಲ. ವಿರೋಧಿಗಳ ಕೂಟ ಪ್ರಧಾನಿ ಮೋದಿ ವಿರುದ್ಧ ಎಂದಿನಂತೆ ವಾಗ್ದಾಳಿ ಮುಂದುವರಿಸಬಹುದು. ಜಿ-20 ಶೃಂಗಸಭೆ ಮೂಲಕ ಪ್ರಧಾನಿ ಮೋದಿ ವರ್ಚಸ್ಸು ವೃದ್ಧಿಯಾಗಿದೆ. ದೇಶದ ರಾಜಕೀಯದಲ್ಲಿ ಮೋದಿಯವರಿಗೆ ಇದು ಎಷ್ಟು ಲಾಭ ತಂದೀತು ಎನ್ನುವುದಕ್ಕೆ 2024ರ ಮೇ ಅಂತ್ಯಕ್ಕೆ ಉತ್ತರ ಸಿಗಬಹುದು.

    ಮಾನವ ಕೇಂದ್ರಿತ ಅಭಿವೃದ್ಧಿ ಅಗತ್ಯ: ಪ್ರಧಾನಿ ಮೋದಿ

    ನಾವು ಹೊಸ ಪೀಳಿಗೆಯ ತಂತ್ರಜ್ಞಾನದಲ್ಲಿ ಊಹಿಸಲಾಗದ ಪ್ರಮಾಣ, ವೇಗ ನೋಡುತ್ತಿದ್ದೇವೆ. ಕೃತಕ ಬುದ್ಧಿಮತ್ತೆಯ ಉದಾಹರಣೆಯೇ ನಮ್ಮ ಮುಂದಿದೆ. 2019ರಲ್ಲಿ ಜಿ-20 ಕೃತಕ ಬುದ್ಧಿಮತ್ತೆ ಮೇಲಿನ ತತ್ವಗಳನ್ನು ಅಳವಡಿಸಿಕೊಂಡಿತ್ತು. ಈಗ ನಾವು ಮತ್ತೊಂದು ಹೆಜ್ಜೆ ಮುಂದೆ ಹೋಗಬೇಕಿದೆ. ಜವಾಬ್ದಾರಿಯುತ ಮಾನವ-ಕೇಂದ್ರಿತ ಕೃತಕ ಬುದ್ಧಿಮತ್ತೆ ಆಡಳಿತಕ್ಕಾಗಿ ಚೌಕಟ್ಟನ್ನು ರಚಿಸಬೇಕು. ಭಾರತವೂ ಈ ನಿಟ್ಟಿನಲ್ಲಿ ತನ್ನ ಸಲಹೆಗಳನ್ನು ನೀಡಲಿದೆ. ಎಲ್ಲಾ ದೇಶಗಳು ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಜಾಗತಿಕ ಕಾರ್ಯಪಡೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪಡೆಯ ಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

    ಜಿ-20 ಶೃಂಗಸಭೆಯ 2ನೇ ದಿನವಾದ ಭಾನುವಾರ ‘ಭವಿಷ್ಯ’ ಕಲಾಪ ಉದ್ದೇಶಿಸಿ ಮಾತನಾಡಿದ ಅವರು, ‘ಜಿಡಿಪಿ ಕೇಂದ್ರಿತ ದೃಷ್ಟಿಕೋನದ ಬದಲಿಗೆ ಮಾನವ ಕೇಂದ್ರಿತ ದೃಷ್ಟಿಕೋನ ಹೊಂದಬೇಕೆಂದು ನಾನು ಹಲವು ಬಾರಿ ಹೇಳಿದ್ದೇನೆ. ಇಂದು ಭಾರತದಂತಹ ಅನೇಕ ದೇಶಗಳು ತಮ್ಮಲ್ಲಿರುವ ಜ್ಞಾನ, ಸಂಪನ್ಮೂಲಗಳನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿವೆ. ಭಾರತವು ಮಾನವೀಯತೆಯ ಹಿತಾಸಕ್ತಿಗಾಗಿ ಚಂದ್ರಯಾನ ಮಿಷನ್​ನ ಡೇಟಾವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಪ್ರಸ್ತಾಪಿಸಿದೆ. ಇದು ಮಾನವ ಕೇಂದ್ರಿತ ಬೆಳವಣಿಗೆಯ ಕಡೆಗೆ ನಮ್ಮ ಬದ್ಧತೆಯ ಪುರಾವೆ’ ಎಂದು ಮೋದಿ ಪ್ರತಿಪಾದಿಸಿದ್ದಾರೆ. ‘ಎಲ್ಲರನ್ನೊಳಗೊಂಡ ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ತಂತ್ರಜ್ಞಾನ ತಲುಪುವಂತೆ ನಾವು ಮಾಡಿದ್ದೇವೆ. ಚಿಕ್ಕ ಹಳ್ಳಿಗಳಲ್ಲಿ, ಸಣ್ಣ ವ್ಯಾಪಾರಿಗಳೂ ಡಿಜಿಟಲ್ ಪಾವತಿ ಮಾಡುತ್ತಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಬಲವಾದ ಚೌಕಟ್ಟನ್ನು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದರು.

    ಕ್ರಿಪ್ಟೋ ಕರೆನ್ಸಿ ನಿಯಂತ್ರಣ ಸವಾಲು

    ಕ್ರಿಪ್ಟೋ› ಕರೆನ್ಸಿಗಳನ್ನು ನಿಯಂತ್ರಿಸಲು ಜಾಗತಿಕ ಮಾನದಂಡಗಳನ್ನು ರೂಪಿಸಬೇಕು. ಸೈಬರ್ ಭದ್ರತೆ ಮತ್ತು ಕ್ರಿಪ್ಟೋ›-ಕರೆನ್ಸಿಯ ಸವಾಲುಗಳು ನಮ್ಮ ಮುಂದಿವೆ. ಸೈಬರ್ ಭದ್ರತೆಗಾಗಿ ಜಾಗತಿಕ ಸಹಕಾರ ಮತ್ತು ಚೌಕಟ್ಟು ಕೂಡ ಅಗತ್ಯವಿದೆ. ಸೈಬರ್​ನಿಂದಾಗಿ ಭಯೋತ್ಪಾದನೆಯ ಹೊಸ ವಿಧಾನಗಳು ಕಂಡುಬರುತ್ತಿವೆ. ಪ್ರತಿ ದೇಶದ ಭದ್ರತೆ ಮತ್ತು ಸಮೃದ್ಧಿಗೆ ಸಂಬಂಧಿಸಿ ಇದು ಕಾಳಜಿಯ ವಿಷಯ. ಎಲ್ಲಾ ದೇಶದ ಭದ್ರತೆ ಮತ್ತು ಸೂಕ್ಷ್ಮತೆಯ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಒಂದು ಭವಿಷ್ಯದ ಭಾವನೆ ಬಲಗೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

    ಕಾಯಂ ಸದಸ್ಯತ್ವಕ್ಕೆ ಪ್ರತಿಪಾದನೆ

    ಜಗತ್ತನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯಲು, ಜಾಗತಿಕ ವ್ಯವಸ್ಥೆಗಳು ಪ್ರಸ್ತುತ ವಾಸ್ತವಗಳಿಗೆ ಅನುಗುಣವಾಗಿರಬೇಕು. ವಿಶ್ವಸಂಸ್ಥೆಯ ಭದ್ರತಾ ಸಮಿತಿ (ಯುಎನ್​ಎಸ್​ಸಿ) ಕೂಡ ಇದಕ್ಕೆ ಉದಾಹರಣೆ. ಅಂದು ವಿಶ್ವಸಂಸ್ಥೆಯಲ್ಲಿ 51 ಸ್ಥಾಪಕ ಸದಸ್ಯರಿದ್ದರು. ಈಗ ದೇಶಗಳ ಸಂಖ್ಯೆ 200ಕ್ಕೆ ತಲುಪಿದೆ. ಆದರೆ, ಯುಎನ್​ಎಸ್​ಸಿಯಲ್ಲಿ ಮಾತ್ರ ಕಾಯಂ ಸದಸ್ಯರ ಸಂಖ್ಯೆ ಹಿಂದಿನಷ್ಟೇ ಇದೆ. ಜಗತ್ತು ಪ್ರತಿ ಕ್ಷೇತ್ರದಲ್ಲೂ ಬದಲಾಗಿದೆ. ಸಾರಿಗೆ, ಸಂಪರ್ಕ, ಆರೋಗ್ಯ ಅಥವಾ ಶಿಕ್ಷಣ, ಪ್ರತಿಯೊಂದು ಕ್ಷೇತ್ರವೂ ರೂಪಾಂತರಗೊಂಡಿದೆ. ಈ ಹೊಸ ನೈಜತೆಗಳು ನಮ್ಮ ಹೊಸ ಜಾಗತಿಕ ಭಾಗವಾಗಿದೆ ಎಂದ ಪ್ರಧಾನಿ ಯುಎನ್​ಎಸ್​ಸಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಪರೋಕ್ಷವಾಗಿ ಮತ್ತೊಮ್ಮೆ ಒತ್ತಾಯಿಸಿದರು. ಜಾಗತಿಕ ಸಂಸ್ಥೆಗಳು ತಮ್ಮ ಪ್ರಸ್ತುತತೆಯನ್ನು ಹೆಚ್ಚಿಸಲು ಕಾಲ ಕಾಲಕ್ಕೆ ಸುಧಾರಣೆ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನು ಗಮನದಲ್ಲಿಟ್ಟುಕೊಂಡೇ ನಾವು ಆಫ್ರಿಕನ್ ಒಕ್ಕೂಟ ರಾಷ್ಟ್ರಗಳನ್ನು ಜಿ-20ಯ ಕಅಯಂ ಸದಸ್ಯರನ್ನಾಗಿ ಮಾಡಿದ್ದೇವೆ. ಅದೇ ರೀತಿ, ನಾವು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್​ಗಳನ್ನು ವಿಸ್ತರಿಸಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts