More

    ಬಿಎಸ್‌ವೈ ಬದಲಿಸಿದರೆ ಬಿಜೆಪಿ ಅಸ್ತಿತ್ವಕ್ಕೆ ಧಕ್ಕೆ ; ಬೀದಿಗಿಳಿದು ಹೋರಾಟ ಮಾಡುವುದಾಗಿ ಮಠಾಧೀಶರ ಎಚ್ಚರಿಕೆ

    ತಿಪಟೂರು : ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮಾಡುತ್ತಿರುವ ಹುನ್ನಾರದ ವಿರುದ್ಧ ನಾಡಿನ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಎಚ್ಚರಿಸಿದರು.

    ನಗರದ ಷಡಕ್ಷರ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯಕ್ಕೆ ಎಚ್.ಡಿ.ದೇವೇಗೌಡ ನಾಯಕರಾದರೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಬಿಎಸ್‌ವೈ ಅವರಿಂದ ರಾಜ್ಯ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದೆ. ವಯೋಮಿತಿ ಇಲ್ಲಿ ಮಾನದಂಡವಲ್ಲ. ತಮಿಳುನಾಡಿನ ಎಂ.ಕರುನಾನಿಧಿ 20 ವರ್ಷ ವೀಲ್‌ಚೇರ್‌ನಲ್ಲಿ ರಾಜ್ಯಭಾರ ಮಾಡಿದ್ದು ನೆನಪಿದೆ. ಆದರೆ ಇಳಿ ವಯಸ್ಸಿನಲ್ಲೂ ಯುವಕರೇ ನಾಚುವ ರೀತಿ ಯಡಿಯೂರಪ್ಪ ರಾಜ್ಯದ ಜನರ ಹಿತ ಕಾಯುತ್ತಿದ್ದಾರೆ. ಇಂತಹವರನ್ನು ಬದಲಾಯಿಸುವ ಹುನ್ನಾರ ವೀರಶೈವ ಸಮುದಾಯಕ್ಕೆ ಆಘಾತ ತಂದಿದೆ ಎಂದರು.

    3 ವರ್ಷ ಅವಧಿ ಪೂರ್ಣಗೊಳಿಸಲು ಸಹಕರಿಸುವುದು ಎಲ್ಲರಿಗೂ ಒಳಿತು, ಇಲ್ಲವಾದಲ್ಲಿ ಭಗವಂತನಾಣೆ, ರಾಜ್ಯ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು. ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರು ಯಡಿಯೂರಪ್ಪನವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಘೋಷಿಸಿದ್ದರು. ಬಿಎಸ್‌ವೈ ಅಧಿಕಾರಾವಧಿ ಇನ್ನೂ ಮೂರು ವರ್ಷ ಇರುವಾಗಲೇ, ಷಡ್ಯಂತ್ರ ರಚಿಸಿ, ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿದೆ. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ ಅವರಿಗೆ ಸಿಕ್ಕ ಗೌರವ ಯಡಿಯೂರಪ್ಪ ಅವರಿಗೂ ಸಿಗಬೇಕು ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

    ಯಡಿಯೂರಪ್ಪ ಅವರ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಮಳೆ, ಬೆಳೆ ಆಗುತ್ತಿದೆ. ಮಾರಕ ಕರೊನಾ ವಿರುದ್ಧದ ಹೋರಾಟವನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ, ಇಂತಹ ಜನನಾಯಕನನ್ನು ಬದಲಾಯಿಸುವ ಸಂಚು ನೋವಿನ ಸಂಗತಿ, ಇಡೀ ವೀರಶೈವ ಸಮುದಾಯ ಮತ್ತು ಮಠಾಧೀಶರು ಯಡಿಯೂರಪ್ಪ ಪರವಾಗಿ ಇದ್ದೇವೆ ಎಂದರು.

    ದೊಡ್ಡಗುಣಿ ರಂಭಾಪುರಿ ಶಾಖೆಯ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಮಾದಿಹಳ್ಳಿ ಶ್ರೀಶೈಲ ಶಾಖಾ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಕಾರದೇಶ್ವರ ಸ್ವಾಮೀಜಿ, ದೊಡ್ಡಮೇಟಿ ಕುರ್ಕೆಯ ವಿರಕ್ತಮಠದ ಶ್ರೀ ಶಶಿಶೇಖರ ಸ್ವಾಮೀಜಿ, ಹಂಬಲದೇವರಹಳ್ಳಿ ಮಠದ ಶ್ರೀ ಉಜ್ಜನೀಶ್ವರ ಸ್ವಾಮೀಜಿ, ನಿಟ್ಟೂರು ಬಿ.ಕೋಡಿಹಳ್ಳಿಯ ಶ್ರೀ ಬೃಂಗೀಶ್ವರ ಸ್ವಾಮೀಜಿ, ತಂಗನಹಳ್ಳಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನದ ಶ್ರೀಬಸವ ಮಹಾಲಿಂಗಸ್ವಾಮೀಜಿ ಇದ್ದರು.

    ರಾಜ್ಯದ ಎಲ್ಲ ಸಮುದಾಯಕ್ಕೆ ಪ್ರೀತಿಪಾತ್ರರಾದ ಯಡಿಯೂರಪ್ಪ ಅವರಿಗೆ ನೆಮ್ಮದಿಯಿಂದ ಅಧಿಕಾರ ನಡೆಸಲು ಅವಕಾಶ ನೀಡುವುದು ಸೂಕ್ತ. ಇಲ್ಲದಿದ್ದರೆ ರಾಜ್ಯಾದ್ಯಂತ ಜನರಿಗಿಂತ ಮೊದಲೇ ಮಠಾಧೀಶರು ಸ್ವಾಭಿಮಾನದ ಸಂಕೇತವಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಅನಿವಾರ್ಯ.
    ಶ್ರೀರುದ್ರಮುನಿ ಸ್ವಾಮೀಜಿ ಷಡಕ್ಷರ ಮಠ. ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts