More

    ಬೆಂಗಳೂರಿನಲ್ಲಿ ಮಠಾಧೀಶರ ಬೃಹತ್ ಸಭೆ: ವೀರಶೈವ ಲಿಂಗಾಯತರ ಎಲ್ಲ ಒಳಪಂಗಡ ಒಬಿಸಿಗೆ ಸೇರಿಸಲು ಒಕ್ಕೊರಲ ಒತ್ತಾಯ

    ಬೆಂಗಳೂರು: ಕೇಂದ್ರ ಸರ್ಕಾರ ಪ್ರಕಟಿಸಿರುವ ಇತರ ಹಿಂದುಳಿದ ವರ್ಗಗಳ ಪಟ್ಟಿ(ಒಬಿಸಿ)ಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಸೇರಿಸಬೇಕು ಎಂಬುದಾಗಿ ವೀರಶೈವ-ಲಿಂಗಾಯತ ಮಠಾಧೀಶರು ಪಟ್ಟು ಹಿಡಿದಿದ್ದು, ಆ ಸಂಬಂಧ ಬೆಂಗಳೂರಿನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ನೂರಾರು ಮಠಾಧೀಶರು ಸಭೆ ನಡೆಸಿದರು. ರಾಷ್ಟ್ರೀಯ ವೀರಶೈವ-ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಈ ಸಭೆಯಲ್ಲಿ ಮುಂದಿನ ನಿಲುವು-ನಡೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

    ತಮ್ಮ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಈ ಹೋರಾಟದ ಪ್ರಮುಖ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರುವ ಕುರಿತಾಗಿ ಈ ಮನವಿ ಸಿದ್ಧಪಡಿಸಲಾಗಿದೆ. ಮಠಾಧೀಶರೆಲ್ಲ ಸೇರಿ ಈ ಮನವಿ ಪತ್ರವನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಪರಮಶಿವಯ್ಯ ಅವರಿಗೆ ನೀಡಿದ್ದು, ಅವರು ಈ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಲಿದ್ದಾರೆ. ಇನ್ನು ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಕೂಡ ಮುಖ್ಯಮಂತ್ರಿ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.

    ಮನವಿ ಪತ್ರವನ್ನು ಸ್ವೀಕರಿಸಿದ ಪರಮಶಿವಯ್ಯ ಅವರು, ನನಗೆ ಗೊತ್ತಿರುವ ಪ್ರಕಾರ ಶೇ. 30 ಮೀಸಲಾತಿ ಸಿಗುತ್ತಿದೆ. 106 ಒಳಪಂಗಡಗಳಲ್ಲಿ, 30 ಒಳಪಂಗಡಗಳಿಗೆ ಮಾತ್ರ ಮೀಸಲಾತಿ ನೀಡಲಾಗಿದೆ. ಉಳಿದವರ ಗತಿಯೇನು? ಅವರು ಕೂಡ ನಮ್ಮಂತೆಯೇ ಬದುಕಬೇಕು. ಅದಕ್ಕಾಗಿ ನಾವು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಹೀಗಾಗಿ ಇಲ್ಲಿ ವಿವಿಧ ಮಠಾಧೀಶರನ್ನು ಸೇರಿಸಲಾಗಿದೆ. ಆ ಮೂಲಕ ನಾವೆಲ್ಲರೂ ಒಂದೇ ಎಂಬ ಬೇಡಿಕೆಯನ್ನು ಇಡುತ್ತಿದ್ದೇವೆ ಎಂದು ಹೇಳಿದರು.

    ಕಾಶಿ ಜಗದ್ಗುರುಗಳು ನನಗೆ ಕರೆಮಾಡಿ, ಉತ್ತಮ ಕೆಲಸ ಮಾಡುತ್ತಿದ್ದೀರಿ ಅಂತ ಪ್ರಶಂಸಿಸಿದರು. ನಮ್ಮ ನಾಯಕರಾದ ಸಿಎಂ ಯಡಿಯೂರಪ್ಪ ಅವರು ಬಜೆಟ್ ಕಾರ್ಯಕ್ರಮದಲ್ಲಿದ್ದಾರೆ. ಫೆ.19ರಂದು ಮನವಿ ತರಲಿ ಅಂತ ಸಿಎಂ ಅವರೇ ಹೇಳಿದ್ದಾರೆ ಎಂದ ಪರಮಶಿವಯ್ಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ನ್ಯಾಯ ಸಿಗಲು ಈಗ ಹೋರಾಟ ಅನಿವಾರ್ಯ. ಬಸವಕಲ್ಯಾಣದಿಂದ ಹೋರಾಟ ಆರಂಭಿಸೋಣ ಎಂದು ಕರೆ ನೀಡಿದರು.
    ನೂರಾರು ಜನ ಹೋಗಿ ಮನವಿ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರದ ಪ್ರತಿನಿಧಿಯಾಗಿರುವ ನೀವೇ ಮುಖ್ಯಮಂತ್ರಿ ಅವರಿಗೆ ಮನವಿ ನೀಡಿ ಎಂದು ವಿಭೂತಿಪುರ ಸ್ವಾಮೀ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಕವಳೇ ದುರ್ಗದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪ್ರಾರ್ಥನೆಯ ಮೂಲಕ ಸಭೆ ಆರಂಭವಾಯಿತು.

    ಬೆಂಗಳೂರಿನಲ್ಲಿ ಮಠಾಧೀಶರ ಬೃಹತ್ ಸಭೆ: ವೀರಶೈವ ಲಿಂಗಾಯತರ ಎಲ್ಲ ಒಳಪಂಗಡ ಒಬಿಸಿಗೆ ಸೇರಿಸಲು ಒಕ್ಕೊರಲ ಒತ್ತಾಯ
    ವೀರಶೈವ-ಲಿಂಗಾಯತ ಮಠಾಧೀಶರಿಂದ ಮನವಿ ಸ್ವೀಕರಿಸಿದ ಡಾ.ಪರಮಶಿವಯ್ಯ

    ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಗಳು: ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು, ಉಜ್ಜಯಿನಿ ಜಗದ್ಗುರು ಡಾ. ಮರುಳಸಿದ್ದಶಿವಾಚಾರ್ಯ ಮಹಾಸ್ವಾಮಿಗಳು, ಶಿವಗಂಗೆ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಬಸವಾನಂದ ಸ್ವಾಮಿಗಳು, ಉಪ್ಪೂರು ಗದ್ದಿಗೆಯ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ದಿಂಗಾಲೇಶ್ವರ ಸ್ವಾಮಿಗಳು, ಸಿಂದಗಿ ಪ್ರಭು ಸಾರಂಗ ಶಿವಾಚಾರ್ಯ ಸ್ವಾಮಿಗಳು, ಮುಚ್ಚಳಾಂಭ ಶ್ರೀಗಳು, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು ಜತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಹಾಗೂ ಕೆಆರ್​ಐಡಿಎಲ್​ ಅಧ್ಯಕ್ಷ ಎಂ. ರುದ್ರೇಶ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts