More

    ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ

    ರಾಮಕೃಷ್ಣ ಪರಂಪರೆಯ ಹಿರಿಯ ಸಂನ್ಯಾಸಿಗಳೂ, ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರೂ ಆಗಿದ್ದ ಸ್ವಾಮಿ ಹರ್ಷಾನಂದಜೀ ಇನ್ನಿಲ್ಲ. ಭಾರತೀಯ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಪರಿಚಯಿಸುವ ಗ್ರಂಥಗಳು ವಿರಳವೇ ಆಗಿದ್ದ ಕಾಲದಲ್ಲಿ ಹಿಂದುಧರ್ಮವನ್ನು ಕುರಿತ ವಿಶ್ವಕೋಶದ ಸಂಕಲ್ಪವನ್ನು ಕೈಗೊಂಡವರು ಅವರು. ಮೊದಲಿಗೆ ಮೂರು ಸಂಪುಟಗಳಲ್ಲಿ, ಸುಮಾರು ಎರಡು ಸಾವಿರ ಪುಟಗಳಲ್ಲಿ ‘ಎ ಕನ್ಸೈಸ್ ಎನ್‌ಸೈಕ್ಲೋಪಿಡಿಯಾ ಆಫ್ ಹಿಂದುಯಿಸಂ’ನ ವಿಶ್ವಕೋಶ ಸಿದ್ಧವಾಯಿತು. ನಂತರ ಅದಕ್ಕೆ ನಾಲ್ಕನೆಯ ಸಂಪುಟ ಪರಿಶಿಷ್ಟವಾಗಿ ಸೇರಿತು. ಈ ನಾಲ್ಕು ಸಂಪುಟಗಳಲ್ಲಿ ಹಿಂದುಧರ್ಮದ ಸುಮಾರು ಸಾವಿರಕ್ಕೂ ಮೀರಿದ ವಿವಿಧ ವಿಷಯಗಳನ್ನು ಕುರಿತ ಬರಹಗಳಿವೆ. ಹಲವು ಅಗತ್ಯ ಚಿತ್ರಗಳೂ ಇದರಲ್ಲಿ ಸೇರ್ಪಡೆಯಾಗಿವೆ. ಮೊದಲ ಮೂರು ಸಂಪುಟಗಳಲ್ಲಿ ಬಿಟ್ಟುಹೋದ ವಿಷಯಗಳು ನಾಲ್ಕನೆಯ ಸಂಪುಟದಲ್ಲಿ ಸೇರ್ಪಡೆಗೊಂಡಿವೆ. ಹೀಗಾಗಿ ಹಿಂದುಧರ್ಮವನ್ನು, ಎಂದರೆ ಸನಾತನ ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬಯಸುವ ಎಲ್ಲರಿಗೂ ಇವು ಪ್ರಾಮಾಣಿಕ ಆಕರಗ್ರಂಥಗಳೆನಿಸಿವೆ. 2014ರಲ್ಲಿ ನಾಲ್ಕನೆಯ ಸಂಪುಟದ ಬಿಡುಗಡೆಯ ಸಂದರ್ಭದಲ್ಲಿ ‘ವಿಜಯವಾಣಿ’ಯ ‘ಸಂಸ್ಕೃತಿ’ ಪುರವಣಿಯಲ್ಲಿ (12 ಜೂನ್ 2014) ಪ್ರಕಟವಾಗಿದ್ದ ಸ್ವಾಮಿ ಹರ್ಷಾನಂದಜೀ ಅವರ ಜತೆಗಿನ ಸಂದರ್ಶನ ಇಲ್ಲಿದೆ.
    – ರವೀಂದ್ರ ಮಾವಖಂಡ

    ಸ್ವಾಮೀಜಿ, ಇಷ್ಟು ದೊಡ್ಡ ಯೋಜನೆಯನ್ನು ಯಶಸ್ವಿಯಾಗಿ ಮಗಿಸಿದ್ದಕ್ಕೆ ಕನ್ನಡ ಸಾರಸ್ವತ ಲೋಕ ನಿಮಗೆ ಋಣಿಯಾಗಿದೆ. ನಮ್ಮ ಕಡೆಯಿಂದ ಅಭಿನಂದನೆಗಳು. ಬರೀ ಕನ್ನಡ ಸಾರಸ್ವತ ಲೋಕ ಅಷ್ಟೇ ಅಲ್ಲ, ಇಡೀ ಪ್ರಪಂಚವೇ ಇಂಥ ಎನ್‌ಸೈಕ್ಲೋಪೀಡಿಯಾದ ನಿರೀಕ್ಷೆಯಲ್ಲಿತ್ತು. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವಕೋಶವನ್ನು ತಯಾರು ಮಾಡಿರುವುದು ಅಪರೂಪದ ಸಂಗತಿ. ಪ್ರಾಯಶಃ ಪಿ. ವಿ. ಕಾಣೆ ಅವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಒಬ್ಬ ವ್ಯಕ್ತಿಯಾಗಿ ಸುಮಾರು 20 ವರ್ಷ ಕೆಲಸ ಮಾಡಿ ರೂಪಿಸಿರುವಂಥದ್ದು. ಆನಂತರ ಇಂಥ ಕಾರ್ಯವನ್ನು ಒಬ್ಬ ವ್ಯಕ್ತಿಯಾಗಿ ಮಾಡ್ತಿರೋದು ತಾವೇ ಅನ್ಸುತ್ತೆ. ಇದಕ್ಕೆ ಸ್ಫೂರ್ತಿ ಏನು? ಇದನ್ನು ಯಾಕೆ ಮಾಡಬೇಕನಿಸಿತು?
    ಸ್ವಾಮಿ ಹರ್ಷಾನಂದ: ಸಾಮಾನ್ಯವಾಗಿ ಭಗವದ್ಗೀತೆ, ಉಪನಿಷತ್ತಿನ ಬಗ್ಗೆ ಹೇಳ್ತಾರೆ. ಸಮಗ್ರ ಹಿಂದು ಧರ್ಮದ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ. ಆಗ ಅಂಥ ಯೋಚನೆ ಬಂತು. ತ್ಯಾಗೀಶಾನಂದಜೀ ಅಂತ ಒಬ್ರು ದೊಡ್ಡ ವಿದ್ವಾಂಸರಿದ್ದರು. ಅವರು ಮಾತ್ರ ಯಾವ ಪ್ರಶ್ನೆ ಕೇಳಿದರೂ ಉತ್ತರ ಹೇಳ್ತಿದ್ರು. ಆದರೆ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೂ, ಸಮಗ್ರವಾಗಿ ಉತ್ತರಿಸುವುದಕ್ಕೂ ವ್ಯತ್ಯಾಸ ಇದೆಯಲ್ಲ! ಆಶ್ರಮ ಸೇರಿಕೊಂಡ ಮೇಲೆ ಅಲ್ಲಿನ ಲೈಬ್ರರಿಯಲ್ಲಿನ ಎಲ್ಲ ಪುಸ್ತಕಗಳನ್ನೂ ತೆಗೆದೆ. ಯಾವ್ಯಾವ ಪುಸ್ತಕದಲ್ಲಿ ಹಿಂದು ಧರ್ಮದ ಬಗ್ಗೆ ಮಾಹಿತಿ ಸಿಗುತ್ತೆ ಅಂತ ಗುರುತು ಮಾಡಿಕೊಂಡೆ. ಅಷ್ಟೂ ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡಿಕೊಂಡೆ. ಆಗ ಇದಕ್ಕೊಂದು ರೂಪ ಬಂತು. ಹೀಗೆ ಹಿಂದು ಧರ್ಮದ ಅಧ್ಯಯನ ಶುರುವಾಯ್ತು. 1975ರಲ್ಲಿ ಮೈಸೂರಿನಲ್ಲಿದ್ದೆ. ಅಲ್ಲಿನ ಆಶ್ರಮದಲ್ಲಿ ದೊಡ್ಡ ಲೈಬ್ರರಿ ಇತ್ತು. ಅದನ್ನು ನೋಡಿದಾಗ, ಹಿಂದುಧರ್ಮದ ಬಗ್ಗೆ ಯಾಕೆ ಒಂದು ವಿಶ್ವಕೋಶ ಮಾಡಬಾರದು? ಅಂತ ಅನಿಸಿತು. ಆಮೇಲೆ ಇದಕ್ಕೆ ಪೂರಕವಾಗಿ ಬಹಳಷ್ಟು ಪುಸ್ತಕಗಳನ್ನು ಸಂಗ್ರಹಿಸಿದ್ದೆ.

    ಆಗ ನನ್ನೆದುರಿಗೆ ಎರಡು ಆಯ್ಕೆ ಇತ್ತು. ಒಂದು, ಹಿಂದು ಧರ್ಮದಲ್ಲಿ ಬರುವಂತಹ ಎಲ್ಲ ವಿಷಯಗಳನ್ನು ತೆಗೆದುಕೊಂಡು, ಅದರ ಬಗ್ಗೆ ಸ್ವತಂತ್ರವಾಗಿ ಲೇಖನಗಳನ್ನು ಬರೆಯೋದು. ಅದನ್ನು ಪುಸ್ತಕರೂಪದಲ್ಲಿ ತರೋದು. ಇನ್ನೊಂದು; ಡಿಕ್ಷನರಿ ಥರ, ಅಕಾರಾದಿಯಾಗಿ ವಿಷಯಗಳನ್ನು ಮಾಡೋದು. ಆಮೇಲೆ ಎರಡನೇ ಆಯ್ಕೆಯೇ ಜನಕ್ಕೆ ಹೆಚ್ಚು ಉಪಯೋಗವಾಗುತ್ತೆ ಅಂತ ಅದನ್ನೇ ಇಟ್ಕೊಂಡೆ. ಆದರೆ ಇದನ್ನು ಮಾಡುವುದು ಹೇಗೆ? ರಾಧಾಕೃಷ್ಣನ್, ಪಿ. ವಿ. ಕಾಣೆಯಂಥವರ ಪುಸ್ತಕಗಳನ್ನು ತಗೊಂಡು ಅವುಗಳ ಪರಿವಿಡಿಯಲ್ಲಿದ್ದ ವಿಷಯಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಯಾವುದು ಹಿಂದುಧರ್ಮಕ್ಕೆ ನೇರವಾಗಿ ಸಂಬಂಧಿಸಿರುತ್ತೋ ಅದನ್ನೆಲ್ಲ ಸಂಗ್ರಹಿಸಿದೆ. ಆಗ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿಷಯಗಳು ಸಿಕ್ಕವು. ಇದು ಮೊದಲ ಹಂತ. ಆಮೇಲೆ ಆ ಪಟ್ಟಿಯನ್ನು ಇಟ್ಕೊಂಡು ಇಡೀ ಪಟ್ಟಿಯನ್ನು ಅಭ್ಯಾಸ ಮಾಡಿದೆ. ಅದರಲ್ಲಿ ಯಾವುದು ಬೇಕು, ಯಾವುದು ಬೇಡ ಅಂತ ನೋಡಿ, ಬೇಡದಿರುವುದನ್ನು ತೆಗೆದು ಎರಡನೇ ಪಟ್ಟಿ ತಯಾರು ಮಾಡಿದೆ. ಅವುಗಳನ್ನೆಲ್ಲ ಪ್ರತ್ಯೇಕ ಹಸ್ತಪ್ರತಿಯಲ್ಲಿ ಬರೆದು ಅಕಾರಾದಿಯಾಗಿ ಜೋಡಿಸಿಟ್ಟಿದ್ದೆ. ಮೇಲೆ ಒಂದೊಂದನ್ನೇ ತಗೊಂಡು ಅವುಗಳ ಬಗ್ಗೆ ಬರೆಯೋಕೆ ಶುರು ಮಾಡ್ದೆ. ಆ ಕಾಲದಲ್ಲಿ ಟೈಪ್‌ರೈಟರ್ ಮಾತ್ರ ಇತ್ತು. ಕೈಬರಹ ಚೆನ್ನಾಗಿದ್ದರಿಂದ ಎಲ್ಲವನ್ನೂ ಕೈಯಲ್ಲೇ ಬರೆದೆ. ಒಂದೊಂದೇ ವಿಷಯದ ಕುರಿತು ಲೇಖನ ಬರೆದು ಅಕಾರಾದಿಯಾಗಿ ಜೋಡಿಸಿಟ್ಟಿದ್ದೆ. ಹೀಗೆ ನಡೀತಾ ಇತ್ತು. ಮೈಸೂರಿನಲ್ಲಿ ಲೈಬ್ರರಿ ಚೆನ್ನಾಗಿದ್ದಿದ್ದರಿಂದ ಆಕರ ಗ್ರಂಥ ಸುಲಭವಾಗಿ ಸಿಗ್ತಿತ್ತು. ಕೆಲವು ಸಲ ಬೇರೆ ಲೈಬ್ರರಿಯಿಂದ ತರಿಸಿಕೊಳ್ತಿದ್ದೆ. ಮತ್ತೆ ಕೆಲವು ಸಲ ವಿಶೇಷವಾಗಿ ಸಂಸ್ಕೃತದಂಥ ವಿಷಯಗಳು ಬಂದಾಗ ಕಾಲೇಜಿನಿಂದ, ಸಂಸ್ಕೃತ ಗೊತ್ತಿರತಕ್ಕಂಥ ಪಂಡಿತರನ್ನು ಕರೆಸಿ ಅವರ ಜೊತೆ ಚರ್ಚೆ ಮಾಡಿ ನೋಟ್ಸ್ ಮಾಡಿಕೊಳ್ತಿದ್ದೆ. ಹೀಗೆ ಬೇರೆ ಬೇರೆ ಥರಾ ಇದರ ಕೆಲಸ ನಡೀತು.

    ಈ ಮಧ್ಯೆ ಆಶ್ರಮದಲ್ಲಿದ್ದರಿಂದ ಬೇರೆ ಬೇರೆ ಕಡೆಗೆ ಟ್ರಾನ್ಸ್‌ಫರ್ ಆಗ್ತಿತ್ತು. ಮೈಸೂರಿನಿಂದ ಡೆಹ್ರಾಡೂನ್, ಹಲಸೂರು, ಅಲಹಾಬಾದ್‌ಗಳಲ್ಲೆಲ್ಲ ಇದ್ದು ಆಮೇಲೆ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ಮೇಲೆ ವಿಶ್ವಕೋಶದ ಕೆಲಸವೂ ಚೆನ್ನಾಗಿ ಮುಂದುವರೀತು. ಹಣ ಸಿಕ್ಕಾಗಲೆಲ್ಲ ಹಿಂದು ಧರ್ಮಕ್ಕೆ ಸಂಬಂಧಿಸಿದ ಪುಸ್ತಕ ಕೊಂಡ್ಕೊಳ್ತಿದ್ದೆ. ಇದರಿಂದಾಗಿ ಕೆಲಸದ ವೇಗವೂ ಹೆಚ್ಚಿತು. ಆಮೇಲೆ ನಮ್ಮ ಪುಸ್ತಕಗಳನ್ನೆಲ್ಲ ಮುದ್ರಿಸುವ ಬಿ. ಎನ್. ನಟರಾಜ್ ಅವರ ಪರಿಚಯ ಆಯ್ತು. ಅವರ ಬಳಿ ಒಂದ್ಸಲ ಸಹಜವಾಗಿ ಈ ಪುಸ್ತಕ ಬರೆಯುತ್ತಿರುವುದರ ಬಗ್ಗೆ ಹೇಳಿದ್ದೆ. ಅದಕ್ಕೆ ಅವರು, ನೀವು ಬರೆದ ಕೂಡಲೇ ನಮಗೆ ಕೊಡಿ. ನಾವು ಅಕ್ಷರ ಜೋಡಣೆ ಮಾಡ್ತೀವಿ ಅಂದ್ರು. ಹಸ್ತಪ್ರತಿಗಳನ್ನೆಲ್ಲ ಟೈಪ್ ಮಾಡೋಕೆ ಶುರು ಮಾಡಿದ್ರು. ಅದು ಆಗಿದ್ದು 1989ರಲ್ಲಿ. ಅವರು ಟೈಪ್ ಮಾಡಿ ಕೊಟ್ರು. ನಾನು ಪ್ರೂಫ್ ನೋಡ್ದೆ. ಆದ್ದರಿಂದಲೇ 2007ರಲ್ಲಿ ಈ ಕೆಲಸ ಮುಗಿದ ತಕ್ಷಣ ಅದು ಮುದ್ರಣಕ್ಕೆ ಸಿದ್ಧವಾಗಿಬಿಟ್ಟಿತ್ತು. ಆಗ ಪ್ರಕಟವಾಗೋದರ ಬಗ್ಗೆ ಯೋಚನೆನೂ ಮಾಡಿರಲಿಲ್ಲ. ಪ್ರಕಟವಾಗುತ್ತೆ ಅಂತ ಕನಸಿನಲ್ಲೂ ಇರಲಿಲ್ಲ. 2007ರಲ್ಲಿ ಇದನ್ನು ಮುಗಿಸಿದಾಗ ಪ್ರಕಟಿಸುವ ಧೈರ್ಯ ಬಂತು. ಆದರೆ ಪ್ರಕಟಿಸೋಕೆ ಹಣ ಬೇಕಲ್ಲ, ಮೂರ್ನಾಲ್ಕು ಜನ ಭಕ್ತರು ಇದರ ಪ್ರಕಟಣೆಗೆ ಆರ್ಥಿಕವಾಗಿ ನೆರವು ನೀಡಿದರು. ಬೆಲೆನೂ ಕಡಿಮೆ ಇಟ್ಟಿದ್ವಿ. ಪ್ರತಿ ಸಂಪುಟದ ಬೆಲೆ 500 ರೂ. ಪ್ರಕಟಣಾಪೂರ್ವದಲ್ಲೇ ಇದರ ಬಗ್ಗೆ ಅನೌನ್ಸ್ ಮಾಡಿದ್ವಿ. ಹೀಗಾಗಿ ಇದು ಬಿಡುಗಡೆಯಾದ ದಿನವೇ ನಾಲ್ಕು ಸಾವಿರ ಸೆಟ್‌ಗಳು ಖರ್ಚಾದ್ವು. ಒಟ್ಟೂ ಹತ್ತು ಸಾವಿರ ಸೆಟ್‌ಗಳನ್ನು ಮುದ್ರಿಸಿದ್ವಿ. ಮೊನ್ನೆ ಬಂದ ಐದನೇ ಸಂಪುಟವನ್ನೂ ಸೇರಿಸಿ ಪುನರ್ಮುದ್ರಣ ಮಾಡೋಣ ಅಂತಿದೆ.

    ಇದು ಪ್ರಕಟವಾದ ಮೇಲೆ ಒಳ್ಳೆಯ ವಿಮರ್ಶೆಗಳೂ ಬಂದವು. ಕೆಲವರು ಪತ್ರಗಳನ್ನೂ ಬರೆದು, ಅದರಲ್ಲಿನ ಕೆಲವು ತಪ್ಪುಗಳನ್ನುತಿಳಿಸಿದ್ದರು. ಅವುಗಳನ್ನೆಲ್ಲ ಒಂದೇ ಕಡೆ ಸೇರಿಸಿಟ್ಟಿದೀನಿ. ಮುದ್ರಣ ದೋಷಗಳನ್ನು ಪಟ್ಟಿ ಮಾಡಿದೀವಿ. ಮೂವತ್ತು ಪುಟಕ್ಕೆ ಒಂದು ತಪ್ಪು ಕಂಡುಬಂದಿತ್ತು. ಕೆಲವರು ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಅವರ ಅಭಿಪ್ರಾಯಗಳನ್ನು ಕೊಟ್ಟಿದ್ರು. ಅವುಗಳ ಬಗ್ಗೆ ಅಧ್ಯಯನ ಮಾಡಿದೀವಿ. ಮುಂದಿನ ಮುದ್ರಣದಲ್ಲಿ ಅವುಗಳನ್ನೆಲ್ಲ ಸರಿ ಮಾಡ್ತೀವಿ. ಮೇಲೆ ವೇದ, ಯಜ್ಞಯಾಗಾದಿಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಅವುಗಳಿಗೆ ಸಂಬಂಧಪಟ್ಟ ತಾಂತ್ರಿಕ ವಿಷಯಗಳನ್ನೂ ಬಿಡದೆ ಆ ಥರದ ಪದಗಳನ್ನೂ ಇದರಲ್ಲಿ ಸೇರಿಸಿದೀವಿ. ಕೆಲವು ವಿಷಯಗಳ ಬಗ್ಗೆ ಬೇಕು ಅಂತಲೇ ವಿಸ್ತಾರವಾಗಿ ಬರೆದಿದೀನಿ. ಮತ್ತೆ ಕೆಲವು ವಿಷಯಗಳು ಬಹಳ ದೀರ್ಘವಾಗಿದ್ದರಿಂದ ಅವುಗಳನ್ನು ಇದರಿಂದ ಬಿಟ್ವಿ. ಆ ವಿಷಯಗಳ ಬಗ್ಗೆಯೇ ಪ್ರತ್ಯೇಕವಾಗಿ ಚಿಕ್ಕ ಚಿಕ್ಕ ಪುಸ್ತಕಗಳನ್ನ ತಂದ್ವಿ. ಉದಾಹರಣೆಗೆ ರಾಮಾಯಣ. ಅದು ಸುಮಾರು ನೂರು ಪುಟ ಆಗುವಷ್ಟಿತ್ತು. ಅದನ್ನೇ ಬೇರೆ ಪುಸ್ತಕವಾಗಿ ತಂದ್ವಿ. ನನ್ನ ಪಾಲಿಗಂತೂ ಇದೊಂದು ಅತ್ಯದ್ಭುತ ಅಧ್ಯಯನ!

    ನೀವು ಇದನ್ನು ಬರೆಯುವಾಗ ನಿರ್ದಿಷ್ಟವಾದ ಸಮಯ ಅಂತ ಮಾಡ್ಕೊಂಡಿದ್ರಾ?
    ಸ್ವಾಮಿ ಹರ್ಷಾನಂದ: ನಾನು ನಮ್ಮ ಮೂಲಮಠಕ್ಕೆ (ಬೇಲೂರು ಮಠ, ಕೋಲ್ಕತ) ಹೋಗಿದ್ದಾಗ ಅಲ್ಲಿನ ಮುಖ್ಯ ಕಾರ್ಯದರ್ಶಿಗಳನ್ನು ಕೇಳ್ದೆ, ‘ನೋಡಿ, ಹೀಗೆ ಪುಸ್ತಕ ಬರೀತಿದೀನಿ. ನನಗೆ 2-3 ವರ್ಷ ರಜಾ ಕೊಟ್ಬಿಡಿ’ ಅಂತ. ‘ಅದು ನಿಮ್ಮ ಖಾಸಗಿ ಕೆಲಸ, ನಾವೇನೂ ಇದನ್ನು ವಿರೋಧಿಸಲ್ಲ’ ಅಂದ್ಬಿಟ್ರು. ಏನಂದ್ರೆ ಮನಸ್ಸಿದ್ದರೆ ಮಾರ್ಗ.

    ಈ ವಿಶ್ವಕೋಶ ಮಾಡುವಾಗ ಎಷ್ಟು ಆಕರ ಗ್ರಂಥಗಳನ್ನು ನೋಡಬೇಕಾಯ್ತು ಸ್ವಾಮೀಜಿ?
    ಸ್ವಾಮಿ ಹರ್ಷಾನಂದ: ಎಷ್ಟು ಅಂತ ಲೆಕ್ಕ ಇಟ್ಟಿಲ್ಲ. ಸಾವಿರಕ್ಕಿಂತ ಹೆಚ್ಚು ಪುಸ್ತಕವನ್ನಂತೂ ನೋಡಿದೀನಿ. ತುಂಬ ಮುಖ್ಯ ವಿಷಯ ಇದ್ರೆ ಪುಸ್ತಕಗಳನ್ನ ಪೂರ್ತಿಯಾಗಿ ಓದಬೇಕಾಗುತ್ತದೆ. ಇನ್ನು ಕೆಲವು ಪುಸ್ತಕಗಳಲ್ಲಿ, ಆಯಾ ವಿಷಯಕ್ಕೆ ಎಷ್ಟು ಮಾಹಿತಿ ಬೇಕೋ ಅಷ್ಟನ್ನೇ ನೋಡ್ಬೇಕಾಗುತ್ತೆ. ಒಂದು ವಿಷಯದ ಮೇಲೆ ನಾಲ್ಕು ಪುಸ್ತಕ ಸಿಕ್ಕಾಗ ಯಾವುದು ಸರಿ, ಯಾವುದು ತಪ್ಪು, ಯಾವುದನ್ನು ತಗೋಬೇಕು, ಯಾವುದನ್ನು ಬಿಡಬೇಕು ಅನ್ನೋದೇ ಬಹಳ ಕಷ್ಟದ ಕೆಲಸ. ಅದರಲ್ಲಿ ತಪ್ಪಿರಬಾರದು, ರಾಮಕೃಷ್ಣ ಮಿಷನ್‌ಗೂ ಕೆಟ್ಟ ಹೆಸರು ಬರಬಾರದು. ವಿವಾದ ಆಗಬಾರದು, ಪ್ರಾಮಾಣಿಕವಾಗಿರಬೇಕು, ಭಾಷೆ ಚೆನ್ನಾಗಿರಬೇಕು. ಏಕೆಂದರೆ ಆ ವಿಷಯದಲ್ಲಿ ಏನೋ ಇದ್ದು, ನಾವೇನೋ ಬರೆದರೆ ತಪ್ಪು ಮಾಹಿತಿ ಕೊಟ್ಟಂತಾಗುತ್ತದೆ. ಆದಷ್ಟು ಮಟ್ಟಿಗೆ ಅಧಿಕೃತ ಲೇಖಕರು, ಪುಸ್ತಕಗಳನ್ನೇ ಆಕರವಾಗಿ ಬಳಸಿದೀನಿ.

    ಈ ವಿಶ್ವಕೋಶವನ್ನು ಬೇರೆ ಭಾಷೆಗಳಿಗೆ ತರುವಂಥ ಪ್ರಯತ್ನಗಳೇನಾದರೂ ನಡೆದಿವೆಯಾ?
    ಸ್ವಾಮಿ ಹರ್ಷಾನಂದ: ಪ್ರಾರಂಭದಲ್ಲಿ ಕನ್ನಡದಲ್ಲಿ ತರಬೇಕು ಅಂತಾಯ್ತು. ‘ಹಾಗೆ ಅನುವಾದ ಮಾಡುವಾಗ ಅದಕ್ಕೇ ಪ್ರತ್ಯೇಕ ಸಮಿತಿ ಮಾಡಬೇಕು. ಚೆನ್ನಾಗಿ ಭಾಷೆ ಗೊತ್ತಿರುವ 15-20 ಜನ ಬೇಕು. ಅದು ದೊಡ್ಡ ಯೋಜನೆ. ನನ್ಕೈಲಿ ಆಗಲ್ಲ’ ಅಂದೆ. ಮಾಡೋಣ ಅಂತ ಕೆಲವರು ಉತ್ಸಾಹ ವ್ಯಕ್ತಪಡಿಸಿದ್ರೂ ಯಾರೂ ಮುಂದೆ ಬರಲೇ ಇಲ್ಲ. ಕೆಲವು ಚಿಕ್ಕ ಚಿಕ್ಕ ಲೇಖನಗಳನ್ನು ಅನುವಾದ ಮಾಡಿರೋದ್ರಿಂದ ಶೇ. 10ರಷ್ಟು ಕನ್ನಡ ಅನುವಾದ ಸಿದ್ಧವಾಗಿದೆ. ರಾಜಕೋಟ್‌ನಲ್ಲಿ ನಮ್ಮ ಆಶ್ರಮ ಇದೆ. ಅವರು ಇದನ್ನು ಗುಜರಾತಿ ಭಾಷೆಗೆ ಅನುವಾದ ಮಾಡೋಕೆ ಅನುಮತಿ ಕೊಟ್ಟಾಗಿದೆ. ಐದಾರು ವರ್ಷಗಳಿಂದ ಕೆಲಸ ನಡೀತಿದೆ.

    ಈ ವಿಶ್ವಕೋಶಕ್ಕೆ ಇಲ್ಲಿಯ ತನಕ ಪ್ರತಿಕ್ರಿಯೆ ಹೇಗಿದೆ?
    ಸ್ವಾಮಿ ಹರ್ಷಾನಂದ: ತುಂಬ ಚೆನ್ನಾಗಿದೆ. ಮಾರಾಟವೂ ಚೆನ್ನಾಗಿ ಆಗ್ತಿದೆ. ಬೆಲೆ ಕಡಿಮೆ ಇಟ್ರೂ ಕಾಗದ, ಮುದ್ರಣಗಳ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟದ್ದೇ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ವಿಶೇಷವಾಗಿ ಅಮೆರಿಕದಲ್ಲಿ. ಅಮೆರಿಕದಲ್ಲಿರೋ ಭಾರತೀಯರಿದ್ದಾರಲ್ಲ, ಅವರ ಮಕ್ಕಳು, ಮೊಮ್ಮಕ್ಕಳು ಹಿಂದು ಧರ್ಮದ ಬಗ್ಗೆ ಕೇಳಿದರೆ ಹೇಳೋಕೆ ಗೊತ್ತೇ ಇರಲ್ಲ. ಈ ಪುಸ್ತಕ ಬಂದಮೇಲೆ ಅಲ್ಲಿಂದ ತುಂಬ ಬೇಡಿಕೆ ಇದೆ. ಅನೇಕ ಪುಸ್ತಕ ವ್ಯಾಪಾರಿಗಳು ಇದನ್ನು ತರಿಸಿಕೊಂಡಿದ್ದಾರೆ.

    ಈಗ ತಂತ್ರಜ್ಞಾನ ಮನೆಮನೆಗೂ ಬಂದಿದೆ. ಪುಸ್ತಕದ ಸ್ವರೂಪ ಕೂಡ ಬದಲಾಗ್ತಿದೆ. ಇ-ಬುಕ್ಸ್ (ಇಲೆಕ್ಟ್ರಾನಿಕ್ ಬುಕ್ಸ್) ರೂಪದಲ್ಲಿ ತರೋ ಯೋಚನೆ ಏನಾದರೂ ಇದೆಯಾ?
    ಸ್ವಾಮಿ ಹರ್ಷಾನಂದ: ಕೆಲವರು ಪುಸ್ತಕರೂಪದಲ್ಲಿ ಬೇಡ, ಡಿವಿಡಿ ರೂಪದಲ್ಲೇ ತನ್ನಿ ಅಂದಿದಾರೆ. ಮತ್ತೆ ಕೆಲವರು, ಎರಡೂ ಇರಲಿ ಅಂದ್ರು. ಮುಖ್ಯವಾದ ಲೇಖನಗಳು ಮಾತ್ರ ಡಿವಿಡಿ ರೂಪದಲ್ಲಿರಲಿ, ಉಳಿದದ್ದು ಪುಸ್ತಕದಲ್ಲಿರಲಿ ಅಂತ ಇನ್ನೊಂದಿಷ್ಟು ಅಭಿಪ್ರಾಯಗಳು ಬಂದವು. ಇನ್ನೂ ಇದರ ಬಗ್ಗೆ ನಿರ್ಧಾರ ಮಾಡಿಲ್ಲ.

    ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts