More

    ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಸ್ವಾಮಿ ಹರ್ಷಾನಂದ

    ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ವಿಧಿವಶರಾದ ಸ್ವಾಮಿ ಹರ್ಷಾನಂದಜೀ ಮಹಾರಾಜ್ (1930-2021), ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳಲ್ಲಿ ಒಬ್ಬರು. ಮಹಾಸಂಘದ ಆರನೇ ಅಧ್ಯಕ್ಷರಾದ ಹಾಗೂ ಸ್ವಾಮಿ ವಿವೇಕಾನಂದರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿರಜಾನಂದಜಿ ಮಹಾರಾಜ್ ಇವರಿಂದ ಮಂತ್ರ ದೀಕ್ಷೆಯನ್ನು ಪಡೆದವರು. ಮೆಕಾನಿಕಲ್ ಇಂಜಿನಿಯರ್ ಪದವಿಯನ್ನು ಚಿನ್ನದ ಪದಕದೊಡನೆ ಮುಗಿಸಿ, 1954ನೇ ಇಸವಿಯಲ್ಲಿ ರಾಮಕೃಷ್ಣ ಮಠ, ಬಸವನ ಗುಡಿ, ಬೆಂಗಳೂರು ಶಾಖೆಯಲ್ಲಿ ಆಧ್ಯಾತ್ಮ ಜೀವನವನ್ನು ಪ್ರಾರಂಭಿಸಿದರು. 1962ನೇ ಇಸವಿಯಲ್ಲಿ ಅಂದಿನ ರಾಮಕೃಷ್ಣ ಮಹಾಸಂಘದ ಎಂಟನೇ ಅಧ್ಯಕ್ಷರಾಗಿದ್ದ, ಸ್ವಾಮಿ ವಿಶುದ್ಧಾನಂದಜಿ ಮಹಾರಾಜ್ ಅವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದರು.

    ಸ್ವಾಮೀಜಿಯವರು ಸಂಘದ ಬೆಂಗಳೂರು, ಮಂಗಳೂರು, ಮೈಸೂರು ಶಾಖೆಗಳಲ್ಲಿ ಹಾಗೂ ಮಹಾಸಂಘದ ಮೂಲ ಕೇಂದ್ರವಾದ ಕೋಲ್ಕತಾದ ಬೇಲೂರು ಮಠದಲ್ಲಿ ಹಾಗೂ ಅಲಹಾಬಾದ್ ಶಾಖೆಯಲ್ಲಿ ಸೇವೆ ಸಲ್ಲಿಸಿದರು. ನಂತರ 1989ರಲ್ಲಿ ಬೆಂಗಳೂರು ಶಾಖೆಗೆ ಬಂದ ಸ್ವಾಮೀಜಿಯವರು ಇಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಸುಮಾರು 31 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದರು. ಮಠದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದರು.

    ಸ್ವಾಮೀಜಿಯವರು ಸಂಸ್ಕೃತ, ಕನ್ನಡ, ತೆಲುಗು, ಹಿಂದಿ, ಬಂಗಾಲಿ, ಇಂಗ್ಲೀಷ್ ಭಾಷೆಗಳಲ್ಲಿ ಪರಿಣಿತರಾಗಿದ್ದರು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದ ಸ್ವಾಮೀಜಿಯರು, ಅತ್ಯುತ್ತಮ ಸಂಗೀತಗಾರರೂ, ವಾಗ್ಮಿಗಳೂ ಕೂಡ ಆಗಿದ್ದರು. ಅವರು ಆಳ ಚಿಂತಕರೂ ಹಾಗೂ ಸನಾತನ ಧರ್ಮದ ವಿಷಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು.

    ಸ್ವಾಮೀಜಿ ಸುಮಾರು 30 ವರ್ಷಗಳ ನಿರಂತರ ತಪಸ್ಸಿನ ಫಲವಾಗಿ ಎನ್ ಸೈಕ್ಲೋಪಿಡಿಯಾ ಆಫ್ ಹಿಂದುಯಿಸಂ ಎಂಬ ಮೇರು ಕೃತಿಯನ್ನು ರಚಿಸಿ, ಸನಾತನ ಧರ್ಮದ ಅನುಯಾಯಿಗಳಿಗೆ, ವಿದ್ಯಾರ್ಥಿಗಳಿಗೆ, ಜಿಜ್ಞಾಸುಗಳಿಗೆ, ಮಹದುಪಕಾರವನ್ನು ಮಾಡಿದರು. ಇವರ ಅನೇಕ ಕೃತಿಗಳು ವಿದೇಶಿ ಭಾಷೆಗಳಿಗೆ ಅನುವಾದವಾಗಿವೆ. ಅವರು ಅನೇಕ ಭಕ್ತರನ್ನು ಆಧ್ಯಾತ್ಮಿಕ ಜೀವನದಲ್ಲಿ ಮುನ್ನೆಡೆಸಬಲ್ಲ ಮತ್ತು ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದ ಉತ್ಸಾಹದ ಚಿಲುಮೆಯಾಗಿದ್ದರು. ಆಬಾಲವೃದ್ಧರೊಡನೆ ಆನಂದದಿಂದ ಇರುತ್ತಿದ್ದ ಸ್ವಾಮೀಜಿಯವರು ಅನೇಕ ಯುವಕರನ್ನು ತಮ್ಮ ಜೀವನದ ಸಾಧನೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನವನ್ನು ಕೊಟ್ಟು ಮುನ್ನಡೆಸುತ್ತಿದ್ದರು.

    ಹಿಂದು ಧರ್ಮ ಕುರಿತ ವಿಶ್ವಕೋಶದ ಸಂಕಲ್ಪ ಕೈಗೊಂಡಿದ್ದ ಸ್ವಾಮಿ ಹರ್ಷಾನಂದ

    ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts