More

    ಸ್ವಾಮಿ ಚಿನ್ಮಯಾನಂದ ಕರ್ಮಯೋಗಿ ಋಷಿ, ಮುನಿ

    | ಸ್ವಾಮಿ ಕೃತಾತ್ಮಾನಂದ, ಚಿನ್ಮಯ ಮಿಷನ್, ಹುಬ್ಬಳ್ಳಿ

    ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಆದಿ ಶಂಕರರ ಕೃತಿ, ಚಿಂತನೆ ಮತ್ತು ಕಾರ್ಯಗಳ ಪರಿಚಯವನ್ನು ವಿಶ್ವದೆಲ್ಲೆಡೆ ಕೊಂಡೊಯ್ಯುವುದರ ಮೂಲಕ ಸ್ವಾಮಿ ಚಿನ್ಮಯಾನಂದ ಸರಸ್ವತಿ ಅವರು ಮಾಡಿದ ಕ್ರಾಂತಿ ಅಪೂರ್ವವಾದದ್ದು. ಅವರ 108 ನೇ ಜನ್ಮವರ್ಷವನ್ನು ಚಿನ್ಮಯ ಮಿಷನ್ ಮಾರ್ಚ್ ನಿಂದ ಮೂರು ತಿಂಗಳ ಕಾಲ ಆಚರಿಸುತ್ತಿದೆ.

    ಚಿನ್ಮಯಾನಂದರ 108 ನೇ ಜನ್ಮವರ್ಷ

    ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗುರುದೇವ ಸ್ವಾಮಿ ಚಿನ್ಮಯಾನಂದರ ಹೆಸರು ಪ್ರಾತಃಸ್ಮರಣೀಯ. ಮಹಾತ್ಮರಿಗೆ ಅತ್ಯಂತ ಗೌರವ ಮತ್ತು ಶ್ರೇಷ್ಠ ಹೆಸರಿನಿಂದ ಕರೆಯುವ ಋಷಿ ಶಬ್ದ ಚಿನ್ಮಯಾನಂದರಿಗೆ ಅವರ ದೂರದೃಷ್ಟಿತ್ವದ ಕಾರಣದಿಂದ ಸ್ವಾಭಾವಿಕವಾಗಿ ಅನ್ವಯಿಸುತ್ತದೆ. ಋಷಿ ಪದಕ್ಕೆ ಸತ್ಯದ ದರ್ಶಕ ಎಂದರ್ಥವೂ ಇದೆ. ಋಷಿ ಶಬ್ದದ ಇನ್ನೊಂದು ಅರ್ಥ ಯುಗದ್ರಷ್ಟಾ. ಅವರು ದಾರ್ಶನಿಕರು, ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ನೋಡಬಲ್ಲವರು. ಮಹಾತ್ಮರನ್ನು ಮುನಿ ಎಂದೂ ಕರೆಯುತ್ತೇವೆ. ಮುನಿ ಎಂದರೆ ಮನನ ಶೀಲ, ಚಿಂತನಶೀಲ. ವೇದಾಂತದಲ್ಲಿ ವಿದ್ಯೆಯನ್ನು ಆಲಿಸಲು (ಶ್ರವಣ) ಹೇಳುತ್ತಾರೆ. ಶಾಸ್ತ್ರದಿಂದ ಕೇಳಿದ ಮತ್ತು ನಮ್ಮ ಅನುಭವದ ನಡುವೆ ಅಪಾರವಾದ ವ್ಯತ್ಯಾಸ ಇರುವಾಗ, ಅನೇಕ ರೀತಿಯ ಪ್ರಶ್ನೆಗಳು ಉದ್ಭವವಾಗುತ್ತವೆ. ಉದಾಹರಣೆಗೆ ನಾವು ನಮ್ಮ ದೇಹದೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದೇವೆ. ಆದರೆ ವೇದಾಂತವು ನೀನು ದೇಹವಲ್ಲ, ನೀನು ಸತ್ಯ ತತ್ತ್ವ, ಬ್ರಹ್ಮತತ್ತ್ವ ,ತತ್ತ್ವಮಸಿ ಎನ್ನುತ್ತದೆ. ನಮಗೆ ನಮ್ಮ ಇಂದ್ರಿಯಗಳ ಮೇಲೆ ಬಹಳ ನಂಬಿಕೆ. ಆದರೆ ನಮಗೆ ಗೋಚರವಾಗುವುದು, ಅನುಭವಕ್ಕೆ ಬರುವುದು ಸತ್ಯವಲ್ಲ ಎಂದು ವೇದಾಂತ ಹೇಳುತ್ತದೆ. ಆದ್ದರಿಂದ ಜ್ಞಾನವನ್ನು ಪಡೆಯಲು ಅದರಲ್ಲಿ ನೆಲೆ ನಿಲ್ಲಲು ಮನನದ ಅವಶ್ಯಕತೆ ಇದೆ. ಗುರುದೇವ ಚಿನ್ಮಯಾನಂದರು ಅಂಥ ಅಧ್ಯಯನಶೀಲರು. ಹೀಗಾಗಿ ಅವರು ಮುನಿ. ನಮ್ಮ ಬಳಿ ಇರುವ ವಸ್ತು ವಜ್ರ ಎಂಬ ತಿಳಿವಳಿಕೆ ಬಂದಾಗ ಮಾತ್ರ ಅದನ್ನು ಸಂರಕ್ಷಿಸುತ್ತೇವೆ. ಹಾಗೆಯೇ ನಮ್ಮ ಸಂಸ್ಕೃತಿಯ ರಕ್ಷಣೆಯ ಅವಶ್ಯಕತೆ ಅರಿತು ಗುರುದೇವರು ಚಿನ್ಮಯ ಮಿಷನ್ ಎಂಬ ಸಂಸ್ಥೆಯನ್ನು ಆರಂಭಿಸಿದರು.

    ಭಗವಂತ ಜಗತ್ತಿನ ಜತೆ ಮನುಷ್ಯನನ್ನು ಸೃಷ್ಟಿಸಿ ಈ ಜಗತ್ತನ್ನು ಇನ್ನೂ ಸುಂದರಗೊಳಿಸಲು ನಿನ್ನನ್ನು ಸೃಷ್ಟಿಸಿದ್ದೇನೆ, ನೀನೇನು ಮಾಡಿದ್ದೀಯಾ ಎನ್ನುತ್ತಾನೆ. ಗುರುದೇವರು ಮಾಡಿದ್ದು ಇದನ್ನೇ. ಮಹಾತ್ಮನನ್ನು ಸಂತ ಎಂದೂ ಕರೆಯುತ್ತಾರೆ. ಸಂತ ಎಂದರೆ ಸದಾ ನಮ್ಮನ್ನು ಸಂಸಾರದಿಂದ ಎಚ್ಚರಗೊಳಿಸುತ್ತಲೇ ಇರುತ್ತಾರೆ. ಬೆಣ್ಣೆಗೆ ಶಾಖ ಕೊಟ್ಟಾಗ ಮಾತ್ರ ಕರಗುತ್ತದೆ. ಆದರೆ ಸಂತನ ಹೃದಯ ಇನ್ನೊಬ್ಬನಿಗೆ ತೊಂದರೆಯಾದರೂ ಕರಗುತ್ತದೆ. ಚಿನ್ಮಯಾ ನಂದರ ಜೀವನವನ್ನು ನೋಡಿದರೆ, ಅಲ್ಲಿ ಎಲ್ಲರ ಪ್ರೀತಿ ಕರುಣೆ ತುಂಬಿರುವುದನ್ನು ನಾವು ಕಾಣುತ್ತೇವೆ. ಇಡೀ ಜಗತ್ತಿನಲ್ಲಿ ಚಿನ್ಮಯ ಮಿಷನ್ ಮಾಡಿದ ಕೆಲಸವನ್ನು ನೋಡಿದ ಪ್ರತಿಯೊಬ್ಬ ವಿದೇಶಿಗರೂ ತಮ್ಮ ಮಕ್ಕಳಿಗೂ ಇದೇ ಸಂಸ್ಕಾರ ಸಿಗಲಿ ಎಂದು ಮಿಷನ್ನಿನ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಾಣಬಹುದು. ಮಹಾತ್ಮನನ್ನು ಗುರುತಿಸುವ ಮತ್ತೊಂದು ಶಬ್ದ ಸಾಧು. ಸಾಧು ಎಂದರೆ ಒಳ್ಳೆಯವನು ಎಂದರ್ಥ. ಪರಕಾರ್ಯಂ ಸಾಧ್ನೋತಿ ಇತಿ ಸಾಧು. ಗುರುದೇವ ಅವರು ದೈಹಿಕವಾಗಿ ಅಸ್ವಸ್ಥತೆಯನ್ನು ಹೊಂದಿದ್ದರು ಮತ್ತು ಕೊನೆಯಲ್ಲಿ, ಅವರ ಹೃದಯವು ಕೇವಲ ಶೇ.18 ಮಾತ್ರ ಕಾರ್ಯನಿರ್ವಹಿಸುತ್ತಿತ್ತು, ಆದರೆ ಅವರು ಮಾತ್ರ ಕೆಲಸ ಮಾಡುತ್ತಲೇ ಇದ್ದರು. ಎಂದೂ ಅವರ ದುಃಖವನ್ನು, ಸಮಸ್ಯೆಗಳನ್ನು ಮತ್ತೊಬ್ಬರ ಮುಂದೆ ಹೇಳಿಕೊಂಡವರಲ್ಲ. ಸಾಧುಗಳೆಂದರೆ ಹೀಗೆಯೇ.

    ಅವರೊಬ್ಬ ಭಕ್ತರಾಗಿದ್ದರು. ಹೋದಕಡೆಗೆಲ್ಲಾ ರಾಮ, ಕೃಷ್ಣ, ಆಂಜನೇಯ, ವಿಷ್ಣು, ಅಮ್ಮನವರು ಹೀಗೆ ಅನೇಕ ಮಂದಿರಗಳನ್ನು ನಿರ್ವಿುಸಿ ಜನರ ಜೊತೆಗೇ ನಡೆದು ಅವರನ್ನು ಅವರಿಗೆ ಗೊತ್ತಿಲ್ಲದಂತೆ ಬದಲಾಯಿಸಿ ಮುನ್ನಡೆಸಿದವರು. ಅವರು ಯಾರ ನಂಬಿಕೆಯನ್ನು ಅಸ್ತವ್ಯಸ್ತಗೊಳಿಸಲಿಲ್ಲ. ಆದ್ದರಿಂದ, ಅವರು ಋಷಿ, ಮುನಿ, ಸಂತ, ಸಾಧು, ಭಕ್ತ, ಕರ್ಮಯೋಗಿ ಎಲ್ಲವೂ.

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts