More

    ಅ.31ರವರೆಗೆ ಸ್ವಚ್ಛ ಭಾರತ ಅಭಿಯಾನ: ಎನ್‌ವೈಕೆ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಮಾಹಿತಿ

    ಮಂಡ್ಯ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಅ.31ರವರೆಗೆ ನಡೆಯಲಿರುವ ಸ್ವಚ್ಛ ಭಾರತ 2.0 ಅಭಿಯಾನದಲ್ಲಿ ದೇಶಾದ್ಯಂತ 1 ಕೋಟಿ ಕಿಲೋ ಏಕಬಳಕೆಯ ಪ್ಲಾಸ್ಟಿಕ್ ಸಂಗ್ರಹಿಸಿ ವಿಲೇವಾರಿಗೆ ಗುರಿ ಹೊಂದಲಾಗಿದೆ ಎಂದು ನೆಹರು ಯುವ ಕೇಂದ್ರದ(ಎನ್‌ವೈಕೆ) ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.
    ಕಳೆದ ವರ್ಷ ಅಭಿಯಾನದ ಯಶಸ್ಸಿನ ಹಿನ್ನಲೆಯಲ್ಲಿ ಮತ್ತೆ ಚಾಲನೆ ನೀಡಲಾಗಿದೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಎನ್‌ವೈಕೆ, ಯುವ ಕ್ಲಬ್‌ಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಘಟಕಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ಮೂಲಕ ದೇಶಾದ್ಯಂತ ಎಲ್ಲ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ವಿಲೇ ಮಾಡುವುದು, ಪ್ಲಾಸ್ಟಿಕ್ ಬಗ್ಗೆ ಜನಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ. ಗ್ರಾಮ ಮಟ್ಟದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ನ್ನು ಗ್ರಾಪಂ ಪಿಡಿಒ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು, ಪಟ್ಟಣ ಪ್ರದೇಶಗಳಲ್ಲಿ ಪುರಸಭೆ/ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ನೀಡಿ, ಎಷ್ಟು ಕಿಲೋ ಪ್ಲಾಸ್ಟಿಕ್ ನೀಡಲಾಗಿದೆ ಎಂಬುದಕ್ಕೆ ಸ್ವೀಕೃತಿ ಪತ್ರ ಪಡೆದುಕೊಳ್ಳಬಹುದು ಎಂದರು.
    ಸ್ಥಳೀಯ ಸಂಸ್ಥೆಗಳು ತಾವು ಸಂಗ್ರಹಿಸಿದ ಪ್ಲಾಸ್ಟಿಕ್‌ನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುತ್ತಾರೆ. ಪ್ರಾಧಿಕಾರದವರು ಆ ಪ್ಲಾಸ್ಟಿಕ್‌ಗಳನ್ನು ಸಂಸ್ಕರಿಸಿ ರಸ್ತೆ ಅಭಿವೃದ್ಧಿ/ನಿರ್ಮಾಣ ಕಾಮಗಾರಿಗಳಲ್ಲಿ ಬಳಸುತ್ತಾರೆ. ಪರಿಸರಕ್ಕೆ ಪ್ಲಾಸ್ಟಿಕ್ ಮಾರಕವಾಗಿರುವ ಹಿನ್ನೆಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಉತ್ಪಾದನೆಗೆ ತಡೆಯೊಡ್ಡುವ ಮೂಲಕ ಮೂಲದಲ್ಲೇ ಪ್ಲಾಸ್ಟಿಕ್ ಉತ್ಪಾದನೆಗೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
    ಅಭಿಯಾನದಲ್ಲಿ ಪ್ರವಾಸಿ ತಾಣ, ಧಾರ್ಮಿಕ ಸ್ಥಳ, ಶಿಕ್ಷಣ ಸಂಸ್ಥೆ, ಬಸ್/ರೈಲು, ಟ್ಯಾಕ್ಸಿ, ಆಟೋ ನಿಲ್ದಾಣ, ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡ ಪ್ರದೇಶಗಳು, ವಾಣಿಜ್ಯ ಸ್ಥಳಗಳು, ಸರ್ಕಾರಿ ಗೋದಾಮು, ಸಾರ್ವಜನಿಕ ಸ್ಥಳ ಸೇರಿದಂತೆ ಮನೆಗಳಲ್ಲೂ ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ. ಎಲ್ಲ ವರ್ಗದ ಜನರು, ವಿವಿಧ ಇಲಾಖೆಗಳ ಅಧಿಕಾರಿಗಳು, ಮಠಾಧೀಶರು, ಧರ್ಮ ಗುರುಗಳು, ಶಿಕ್ಷಕರು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ನೌಕರರು, ವೈದ್ಯರು, ಆರೋಗ್ಯ ಸಿಬ್ಬಂದಿ, ಇಂಜಿಯರ್‌ಗಳು, ಪತ್ರಕರ್ತಕರು, ಪೊಲೀಸರು, ದೂರವಾಣಿ/ಅಂಚೆ ಇಲಾಖೆ ಸಿಬ್ಬಂದಿ, ಚಾಲಕರನ್ನು ಅಭಿಯಾನದಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ಕೋರಲಾಗಿದೆ ಎಂದು ತಿಳಿಸಿದರು.
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಓಂ ಪ್ರಕಾಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಂ.ಕೆ.ಕೆಂಪಮ್ಮ, ಕೆ.ಬಿ.ಲೋಕೇಶ್, ಡಿ.ಉಮೇಶ್, ಎನ್‌ವೈಕೆ ಲೆಕ್ಕಾಧಿಕಾರಿ ಚಿಂದಗಿರಿಗೌಡ, ನಿವೃತ್ತ ಲೆಕ್ಕಾಧಿಕಾರಿ ಬಸವರಾಜು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts