More

    ಸುಸ್ಥಿರ ಅಭಿವೃದ್ಧಿ ಕಾರ್ಯಾಗಾರ

    ಉಡುಪಿ: ಮಟ್ಟು ಬದನೆ ವೈವಿಧ್ಯತೆಯಿಂದ ಕೂಡಿದ್ದು, ಎಲ್ಲ ತರಕಾರಿಗಳಿಂದ ಭಿನ್ನವಾಗಿದೆ. ಮಟ್ಟು ಭಾಗದಲ್ಲಿ ಬೆಳೆದ ಗುಳ್ಳ ಮಾತ್ರ ವಿಶಿಷ್ಟ ರುಚಿಯನ್ನು ಹೊಂದಿರುವ ಕಾರಣ ಹಾಗೂ ಭೌಗೋಳಿಕ ಹಿನ್ನೆಲೆ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಗುರುವಾರ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ವಿಶ್ವೇಶರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ಆಶ್ರಯದಲ್ಲಿ ಮಟ್ಟುಗುಳ್ಳ ಬೆಳೆಗಳ ಸುಸ್ಥಿರ ಅಭಿವೃದ್ಧಿ ಮತ್ತು ಭವಿಷ್ಯದ ರೂಪುರೇಷೆ ರಚನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಾದಿರಾಜರು ಬೀಜವನ್ನು ಕೊಟ್ಟ ಕಾರಣ ಊರಿನ ಹೆಸರು ಪ್ರಸಿದ್ಧಿಗೆ ಬಂದಿದೆ. ಆಹಾರ ಕ್ರಮದಲ್ಲಿ ಮಡಿವಂತಿಕೆ ಉಳ್ಳವರೂ ಮಟ್ಟುಗುಳ್ಳವನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಸಿ ಕಟ್ಟುವ ಪದ್ಧತಿಯಿಂದ ಗುಳ್ಳ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ ಮಟ್ಟುಗುಳ್ಳಕ್ಕೆ ಪೇಟೆಂಟ್ ಲಭಿಸಿದ ಕಾರಣ ಕೃಷಿಕರಿಗೆ ಲಾಭವಾಗಿದೆ. ಬೆಳೆಗಾರರ ಸಂಘ ರಚಿಸಿದ್ದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಎಂದರು. ಜಿಲ್ಲೆಯ ವಿಶಿಷ್ಟ ಮಟ್ಟುಗಳ್ಳವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ರೈತರ ಸಂಖ್ಯೆ ಹೆಚ್ಚಾಗಬೇಕು. ಆನ್‌ಲೈನ್ ಮಾರುಕಟ್ಟೆ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದರು.
    ಉಡುಪಿ ಚೇಂಬರ್ಸ್‌ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣ ರಾವ್ ಕೊಡಂಚ ಮಾತನಾಡಿ, ಯುವಕರನ್ನು ಕೃಷಿಯತ್ತ ಸೆಳೆಯಲು ಸರ್ಕಾರಕ್ಕೆ ಅನೇಕ ಬಾರಿ ಕೃಷಿಯನ್ನು ಉದ್ಯಮ ಎಂದು ಪರಿಗಣಿಸುವಂತೆ ಮನವಿ ನೀಡಲಾಗಿದೆ ಎಂದರು. ಮುಖ್ಯ ಅತಿಥಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಮಾತನಾಡಿ, ಮಾರ್ಕೆಟ್‌ನಲ್ಲಿ ಮಟ್ಟುಗುಳ್ಳ ಹೆಚ್ಚಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ವಾರಕ್ಕೊಮ್ಮೆ ಮಲ್ಲಿಗೆ ರೀತಿಯಲ್ಲಿ ದರ ನಿಗದಿ ಮಾಡಲಾಗುತ್ತಿದೆ. ದರ ಪಟ್ಟಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಮುಂದಿನ ದಿನಗಳಲ್ಲಿ ಸಂಘವನ್ನು ಸೊಸೈಟಿಯಾಗಿ ಮೇಲ್ದರ್ಜೆಗೆ ಏರಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು. ಸಂಘಕ್ಕೆ ಸ್ವಂತ ಜಾಗ ಲಭಿಸಿದರೆ ಬೆಳೆ ಸಂಗ್ರಹ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಎಂಐಎಂ ಸಂಯೋಜಕ ಡಾ. ಹರೀಶ್ ಜಿ. ಜೋಷಿ, ಎಂಐಎಂ ನಿರ್ದೇಶಕ ಡಾ. ರವೀಂದ್ರನಾಥ್ ನಾಯಕ್ ಉಪಸ್ಥಿತರಿದ್ದರು.

    ಕೃಷಿ ಭೂಮಿಗೆ ಬ್ಯಾಂಕ್ ಸಾಲವೂ ಕಡಿಮೆಯಾಗಿದೆ. ಮಟ್ಟುವಿನಲ್ಲಿ ಶೇ.20ರಷ್ಟು ಭೂಮಿಯಲ್ಲಿ ಮಾತ್ರ ಗುಳ್ಳ ಬೆಳೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಅಪಾಯವಿದೆ. ಫಲವತ್ತಾದ ಭೂಮಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಯಮವನ್ನು ರೂಪಿಸುವ ಅಗತ್ಯವಿದೆ. ಸಿಆರ್‌ಝಡ್ ಕಾನೂನಿಂದಾಗಿ ಮಟ್ಟುಪ್ರದೇಶ ಉಳಿದುಕೊಂಡಿದೆ. ಈ ಗ್ರಾಮ ಕನ್ವರ್ಷನ್ ಮುಕ್ತ ಪ್ರದೇಶ ಎಂದು ಘೋಷಿಸುವಂತೆ ಕಂದಾಯ ಇಲಾಖೆಗೆ ಒತ್ತಡ ತರಬೇಕು.
    ಕೃಷ್ಣ ರಾವ್ ಕೊಡಂಚ, ಅಧ್ಯಕ್ಷ, ಉಡುಪಿ ಚೇಂಬರ್ಸ್‌ ಆಫ್ ಕಾಮರ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts