

ಇಂದಿಗೆ ಸರಿಯಾಗಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎರಡು ತಿಂಗಳಾಗುತ್ತ ಬಂತು. ಸುಶಾಂತ್ ಸಾವಿನ ತನಿಖೆ ದಿನೇದಿನೆ ಚುರುಕುಪಡೆದುಕೊಳ್ಳುತ್ತಲೇ ಇದೆ. ಹೊಸ ಹೊಸ ವಿಚಾರಗಳು ಬಯಲಾಗುತ್ತಿದ್ದು, ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದೆ. ಈ ನಡುವೆಯೇ ಸುಶಾಂತ್ ಕುಟುಂಬವನ್ನೂ ಸಿಬಿಐ ವಿಚಾರಣೆಗೆ ಆಹ್ವಾನಿಸಿತ್ತು. ವಿಚಾರಣೆ ವೇಳೆ ಸುಶಾಂತ್ ಅವರ ಬಹು ದೊಡ್ಡ ಕನಸು ಏನಾಗಿತ್ತು ಎಂಬುದರ ಬಗ್ಗೆ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಬಹಿರಂಗಪಡಿಸಿದ್ದಾರೆ.
‘ಸುಶಾಂತ್ಗೆ ಹಾಲಿವುಡ್ನಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ಆ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದ. 50 ಕೋಟಿ ಸಂಪಾದನೆ ಮಾಡುವ ಬಯಕೆ ಹೊಂದಿದ್ದ. ಆ ಆಸೆಯೂ ಇನ್ನೇನು ಸಾಕಾರಗೊಳ್ಳುವ ಹಾದಿಯಲ್ಲಿತ್ತು’ ಎಂದು ಸುಶಾಂತ್ ಡೈರಿಯಲ್ಲಿ ಬರೆದುಕೊಂಡಿದ್ದ ಸಾಲುಗಳನ್ನು ಹೇಳಿಕೊಂಡಿರುವ ಶ್ವೇತಾ, ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ, ಒಳ್ಳೊಳ್ಳೆ ಕಥೆಗಳನ್ನು ಸೃಷ್ಟಿಮಾಡಿ ಸಿನಿಮಾ, ವಿದ್ಯಾಭ್ಯಾಸ ಮತ್ತು ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಕನಸೂ ಸುಶಾಂತ್ಗಿತ್ತು ಎಂಬುದು ಅವರೇ ಬರೆದ ಡೈರಿಯಲ್ಲಿ ಕಾಣಿಸಿದೆ.
ಪ್ರೇಕ್ಷಕರನ್ನು ಸೆಳೆದುಕೊಳ್ಳಬೇಕೆಂದರೆ, ಮೊದಲು ಮಾಡಬೇಕಾದ ಕೆಲಸ ಏನೆದರೆ, ಪ್ರೇಕ್ಷಕ ಇಷ್ಟ ಪಡುವ ಪಾತ್ರ, ಆತ ಪ್ರೀತಿಸುವ ವಿಷಯಗಳತ್ತ ಗಮನಹರಿಸಬೇಕು. ಕನಿಷ್ಟ ಅವನ ಮನಸಿನಾಳಕ್ಕೆ ಇಳಿಯುವ ವಿಷಯಗಳನ್ನು ಆಯ್ದುಕೊಳ್ಳಬೇಕು ಎಂದೂ ಸುಶಾಂತ್ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಆ ಡೈರಿಯಲ್ಲಿನ ಒಂದಷ್ಟು ಕ್ಲಿಪ್ಪಿಂಗ್ಸ್ಗಳನ್ನು ಶ್ವೇತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಹೋದರನ ಕನಸುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)