More

    ಸುರತ್ಕಲ್ ಟೋಲ್ ಹೆಜಮಾಡಿಗೆ ಬೇಡ: ಹಿಂದಿನ ದರದಲ್ಲಿಯೇ ಟೋಲ್ ವಸೂಲಿ: ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಸಚಿವ ಅಂಗಾರ ಸೂಚನೆ

    ಉಡುಪಿ: ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹಿಂದೆ ಪಡೆಯುತ್ತಿದ್ದಷ್ಟೇ ಸುಂಕ ಪಡೆಯಬೇಕು. ಸುರತ್ಕಲ್ ಟೋಲ್‌ಗೇಟನ್ನು ವಿಲೀನಗೊಳಿಸಿರುವ ಪರಿಷ್ಕೃತ ದರ ಪಡೆಯಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು.

    ಉಡುಪಿ ತಾಲೂಕು ಕಚೇರಿಯಲ್ಲಿ ಟೋಲ್ ಸಂಗ್ರಹದ ಬಗ್ಗೆ ಶನಿವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಟೋಲ್‌ಗೇಟ್ ವಿಲೀನ- ಪರಿಷ್ಕೃತ ದರ ಪಡೆಯುವ ಕುರಿತಂತೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೆ ಏಕಮುಖವಾಗಿ ನಿರ್ಧರಿಸಿರುವುದಕ್ಕೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಶುಲ್ಕ ಹೆಚ್ಚಳ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದರು.
    ಜಿಲ್ಲೆಯ ವಾಹನಗಳಿಗೆ ಹಿಂದಿನಂತೆಯೇ ನಿಗದಿತ ದರ ಪಡೆಯುವಂತೆ ಪ್ರತ್ಯೇಕ ಲೇನ್ ವ್ಯವಸ್ಥೆ ಮಾಡುವಂತೆ ಹಾಗೂ ಸುರತ್ಕಲ್‌ನಲ್ಲಿ ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಉಡುಪಿ ಜಿಲ್ಲೆಯ ವಾಹನಗಳಿಗೆ ನೀಡುವಂತೆ ಸಚಿವ ಸುನೀಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ಒತ್ತಾಯಿಸಿದರು.

    ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಕುಂದಾಪುರ ಉಪವಿಭಾಗಾಧಿಕಾರಿ ರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾದ ನಿರ್ದೇಶಕ ಲಿಂಗೇಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts