More

    ಹೆಚ್ಚುವರಿ ಭೂ ಪ್ರಕರಣಗಳ ಮರು ವಿಚಾರಣೆ ನಡೆಸಿ

    ಸಿಂಧನೂರು: ಜವಳಗೇರಾ ನಾಡಗೌಡರ 4900 ಎಕರೆ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚುವ ಬಗ್ಗೆ ಹಾಗೂ ರಾಜ್ಯಾದ್ಯಂತ ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961 ಸೆಕ್ಷನ್ 122 ಕ್ಕೆ ತಿದ್ದುಪಡಿ ತಂದು ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಸಿಪಿಐ(ಎಂಎಲ್)ರೆಡ್ ಸ್ಟಾರ್, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ಶನಿವಾರ ಮನವಿ ಸಲ್ಲಿಸಿತು.

    ಸಿಂಧನೂರಿನ ಸರ್ವೇ ನಂ.419 ಹಾಗೂ ಸುಲ್ತಾನಪುರದ ಸರ್ವೇ ನಂ. 186 ಸೇರಿ ತಾಲೂಕಿನ ಎಲ್ಲ ಹೆಚ್ಚುವರಿ ಭೂಮಿಯನ್ನು ಈಗಾಗಲೇ ಅರ್ಜಿ ಸಲ್ಲಿಸಿದ ಭೂರಹಿತರಿಗೆ ವಿತರಿಸಲು ಆದೇಶ ಹೊರಡಿಸಬೇಕು. ಜವಳಗೇರಾ ಭೂ ಪ್ರಕರಣದಲ್ಲಿ ಪ್ರತಿವಾದಿ ಭೂಗಳ್ಳರಿಗೆ ಪ್ರತ್ಯಕ್ಷವಾಗಿ ಬೆಂಬಲಕ್ಕೆ ನಿಂತು ಸರ್ಕಾರದ ಕರ್ತವ್ಯ ಮರೆತ ತಹಸೀಲ್ದಾರರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

    ಈ ಪ್ರಕರಣದ ವಿಚಾರಣೆ ಪಾರದರ್ಶಕವಾಗಿ ನಡೆಯುವುದಕ್ಕಾಗಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕರನ್ನು ವರ್ಗಾವಣೆ ಮಾಡಬೇಕು. ಎಲ್ಲ ತಾಲೂಕುಗಳಲ್ಲಿ ಭೂನ್ಯಾಯ ಮಂಡಳಿ ರಚನೆಗೆ ಸರ್ಕಾರ ಮುಂದಾಗಬೇಕು. ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಹೆಚ್ಚವರಿ ಭೂಮಿಗಳ ವಿಶೇಷ ವಿಚಾರಣೆಗೆ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.

    ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ತಾಲೂಕು ಅಧ್ಯಕ್ಷೆ ಬಸಮ್ಮ ಬಸಾಪುರ, ಕಾರ್ಯದರ್ಶಿ ಮಾಬುಸಾಬ್ ಬೆಳ್ಳಟ್ಟಿ, ಹನುಮಂತಪ್ಪ ಗೋಡಿಹಾಳ ಇದ್ದರು.

    ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಿ: ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳ ಬಗರಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಪಟ್ಟ ನೀಡಬೇಕು ಹಾಗೂ ಆಶ್ರಯ ಯೋಜನೆಯಡಿ ನಿರಾಶ್ರಿತರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಮನವಿ ಸಲ್ಲಿಸಿತು.

    ಅಕ್ರಮ-ಸಕ್ರಮ ಕಾಯ್ದೆಯಡಿ ಫಾರ್ಮ್ ಸಂಖ್ಯೆ 50, 53 ಮತ್ತು 57 ಅರ್ಜಿ ಹಾಕಿರು ಭೂಹೀನ ಬಡವರಿಗೆ ಪಟ್ಟಾ ನೀಡಬೇಕು. ಬಹು ವರ್ಷಗಳಿಂದ ನೆಲೆಯೂರಿರುವ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕನಕ ನಾಲಾ ನೀರಾವರಿ ಯೋಜನೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ‌್ಗಿ, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಇದ್ದರು.

    ರಾಜ್ಯ ರೈತ ಸಂಘ ಮನವಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮನವಿ ಸಲ್ಲಿಸಿತು. ತುಂಗಭದ್ರಾ, ನಾರಾಯಣಪುರ ಜಲಾಶಯ ಮತ್ತು ಕಾಲುವೆಗಳಿಂದ ಕೈಗಾರಿಕೆ ಮತ್ತು ರಾಜಕೀಯ ಪ್ರಭಾವಿಗಳಿಂದ ನೀರು ಕಳ್ಳತನ ಆಗುವುದನ್ನು ತಡೆಗಟ್ಟಬೇಕು. ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಿ ಬೆಳೆ ರಕ್ಷಣೆ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು 8 ತಾಸು ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts