More

    ಅಂಕೆ ತಪ್ಪಿದ ಫ್ಯಾಮಿಲಿ ಪ್ಲ್ಯಾನಿಂಗ್!

    ಗದಗ: ಕರೊನಾ ವೈರಸ್ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಗಮನಾರ್ಹವಾಗಿ ಕುಸಿದಿದೆ.

    ಬಹುತೇಕ ಬಡವರು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂತಾನಶಕ್ತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ, ಕರೊನಾ ಭಯದಿಂದ ಜನರು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುತ್ತಿದ್ದಾರೆ. ಹೀಗಾಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.

    ಕರೊನಾ ಹಾವಳಿಗೆ ಹೆದರಿ ಆಪರೇಷನ್ ಮಾಡಿಕೊಳ್ಳದ ಕಾರಣದಿಂದ ಗರ್ಭಧಾರಣೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಭಾಗದಲ್ಲಿ ಮಿತ ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ನಿರೋಧ ವಿತರಣೆ ಮಾಡಲಾಗಿದೆ. ಆದರೂ ಈ ಮೂರು ತಿಂಗಳು ಅವಧಿಯಲ್ಲಿ ಗರ್ಭಧಾರಣೆ ಪ್ರಮಾಣ ಹೆಚ್ಚಾಗುವುದು ಖಚಿತ ಎನ್ನಲಾಗಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ತಿಳಿದುಬರಲಿದೆ ಎಂದು ವೈದ್ಯರು ಹೇಳುತ್ತಾರೆ.

    ಆದರೆ, ಕಳೆದ ಫೆಬ್ರವರಿ ತಿಂಗಳಲ್ಲಿ ಕರೊನಾ ಪ್ರಭಾವದಿಂದಾಗಿ ಆಪರೇಷನ್ ಪ್ರಮಾಣ ಕೊಂಚ ಇಳಿಮುಖ ಕಂಡಿತು. ಫೆಬ್ರವರಿಯಲ್ಲಿ 498 ಆಪರೇಷನ್ ಮಾಡಲಾಯಿತು. ಮಾರ್ಚ್ ತಿಂಗಳ ಹೊತ್ತಿಗೆ ಕರೊನಾ ಭಾರತದಲ್ಲಿ ವ್ಯಾಪಿಸತೊಡಗಿದ್ದರಿಂದ ಜನರು ಭಯದಿಂದ ಆಸ್ಪತ್ರೆ ಕಡೆಗೆ ಬರಲಿಲ್ಲ. ಹೀಗಾಗಿ ಆಪರೇಷನ್ ಸಂಖ್ಯೆ ಮತ್ತಷ್ಟು ಕುಸಿಯಿತು.

    ಜಿಲ್ಲೆಯಲ್ಲಿ ಲಾಕ್​ಡೌನ್ ಪೂರ್ವದಲ್ಲಿ ಜಿಲ್ಲೆಯ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಮತ್ತು ಜಿಲ್ಲಾಸ್ಪತ್ರೆ ಸೇರಿ ಪ್ರತಿ ತಿಂಗಳು ಸರಾಸರಿ 530 ರಿಂದ 570ರವರೆಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೇಸ್​ಗಳು ದಾಖಲಾಗುತ್ತಿದ್ದವು. ಫೆಬ್ರವರಿ ತಿಂಗಳಲ್ಲಿ 498 ಮಹಿಳೆಯರು ಇಷ್ಟುಪಟ್ಟು ಆಪರೇಷನ್​ಗೆ ಒಳಗಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ 179 ಮಹಿಳೆಯರು, ಏಪ್ರಿಲ್ ತಿಂಗಳಲ್ಲಿ 82 ಮಹಿಳೆಯರು, ಮೇ ತಿಂಗಳಲ್ಲಿ 191 ಮಹಿಳೆಯರು ಇಷ್ಟುಪಟ್ಟು ಆಪರೇಷನ್​ಗೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಸರಾಸರಿ ಶೇ. 70ರಿಂದ 80ರಷ್ಟು ಆಪರೇಷನ್​ಗಳು ಕಡಿಮೆ ಆಗಿವೆ.

    ತಾತ್ಕಾಲಿಕ ಕ್ರಮದಲ್ಲೂ ಕುಸಿತ: ಆರೋಗ್ಯ ಇಲಾಖೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಎರಡು ಕ್ರಮಗಳನ್ನು ಅನುಸರಿಸುತ್ತಿದೆ. ಒಂದು ಶಾಶ್ವತ ಗರ್ಭ ನಿರೋಧಕ ಶಸ್ತ್ರಚಿಕಿತ್ಸೆ; ಮತ್ತೊಂದು ಗರ್ಭಧಾರಣೆ ಮುಂದೂಡಲು ತಾತ್ಕಾಲಿಕ ಕ್ರಮಗಳು. ಇದಲ್ಲದೆ, ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನವನ್ನು ಕಡಿಮೆ ಮಾಡಲು ತಾತ್ಕಾಲಿಕ ಕ್ರಮಗಳನ್ನು ಅನುಸರಿಸುತ್ತಿದೆ. ಇದರಲ್ಲಿ ಹೆರಿಗೆ ಆದ ತಕ್ಷಣ ಆಪರೇಷನ್​ಗೆ ಒಳಗಾಗುವುದು (ಪಿಪಿಯುಸಿಡಿ), ಅಂತರಾ ಇಂಜೆಕ್ಷನ್ ಹಾಕಿಸಿಕೊಳ್ಳುವುದು, ವಂಕಿ ಹಾಕಿಸಿಕೊಳ್ಳುವುದು (ಐಯುಡಿ), ನುಂಗುವ ಮಾತ್ರೆ ಬಳಕೆ (ಒಪಿ), ತುರ್ತು ಗರ್ಭ ನಿರೋಧಕ ಗುಳಿಗೆ ಬಳಕೆ (ಇಸಿಪಿ), ಛಾಯಾ (ವಾರದಲ್ಲಿ ಎರಡು ದಿನ ಬಳಸುವ ಗುಳಿಗೆ) ಹೀಗೆ ಅನೇಕ ಹಲವು ವಿಧಾನಗಳ ಮೂಲಕ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಕ್ರಮಗಳನ್ನು ಸಹ ಜನರು ಅನುಸರಿಸಿಲ್ಲ ಎಂಬುದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳಿಂದ ಗೊತ್ತಾಗುತ್ತದೆ.

    ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿ ತಿಂಗಳು ಗದಗ ಜಿಲ್ಲೆ ಶೇ. 98ರಷ್ಟು ಗುರಿ ತಲುಪಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಆದರೆ, ಕರೊನಾ ವೈರಸ್ ವ್ಯಾಪಿಸಿದ ನಂತರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿವೆ. ಕೋವಿಡ್ 19 ಭಯ ಜನರಲ್ಲಿ ಬೇರುಬಿಟ್ಟಿದೆ. ಕರೊನಾ ಕಡಿಮೆ ಆದ ನಂತರ ಶಸ್ತಚಿಕಿತ್ಸೆ ಮಾಡಿಸಲು ನಿರ್ಧರಿಸಿರಬಹುದು. ಹೀಗಾಗಿ ಸದ್ಯಕ್ಕೆ ಆಪರೇಷನ್ ಮಾಡಿಸಿಕೊಳ್ಳುವವರ ಪ್ರಮಾಣ ಕಡಿಮೆ ಆಗಿದೆ.

    | ಡಾ. ವೈ.ಕೆ. ಭಜಂತ್ರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts