More

    ಭಗವತಿ ಪ್ರೇಮ್ ಡ್ರೆಜ್ಜರ್ ಕೊನೆಗೂ ಸೇಲ್

    – ವೇಣುವಿನೋದ್ ಕೆ.ಎಸ್. ಮಂಗಳೂರು
    ಸುರತ್ಕಲ್ ಗುಡ್ಡೆಕೊಪ್ಲ ಸಮೀಪ ಸಮುದ್ರ ತೀರದಲ್ಲಿ ಕೆಟ್ಟು ನಿಂತ ‘ಭಗವತಿ ಪ್ರೇಮ್’ ಡ್ರೆಜ್ಜರ್ ನಿಲ್ಲಿಸಿ 15 ತಿಂಗಳಾಗಿದೆ. ನವಮಂಗಳೂರು ಬಂದರು ಮಂಡಳಿ ಸುಮಾರು 4.5 ಕೋಟಿ ರೂ. ಮೊತ್ತಕ್ಕೆ ಹಡಗನ್ನು ಹರಾಜು ಹಾಕಿ ಕೈ ತೊಳೆದುಕೊಂಡಿದ್ದು, ಹರಾಜಿನಲ್ಲಿ ಪಡೆದುಕೊಂಡವರು ಇನ್ನೂ ತೆರವಿಗೆ ಮುಂದಾಗಿಲ್ಲ.

    2019ರ ಅಕ್ಟೋಬರ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ನೌಕೆಯನ್ನು ಎನ್‌ಎಂಪಿಟಿಯ ಟಗ್ ಬಳಸಿ ಸುರತ್ಕಲ್ ಸಮೀಪ ಸಮುದ್ರ ತೀರದಲ್ಲೇ ನಿಲ್ಲಿಸಲಾಗಿತ್ತು. ಮೂಲತಃ ಮರ್ಕೆಟರ್ ಸಂಸ್ಥೆಗೆ ಸೇರಿದ್ದ ಡ್ರೆಜ್ಜರ್ 2019ರ ಏಪ್ರಿಲ್‌ನಿಂದಲೇ ಎನ್‌ಎಂಪಿಟಿ ಆ್ಯಂಕರೇಜ್ ಹೊರಗೆ ರಿಪೇರಿಯಾಗದ ಸ್ಥಿತಿಯಲ್ಲಿದ್ದು ಮುಳುಗುವ ಹಂತ ತಲುಪಿತ್ತು. ಅದೇ ಸಂಸ್ಥೆಗೆ ಸೇರಿದ್ದ ‘ತ್ರಿದೇವಿ ಪ್ರೇಮ್’ ಎಂಬ ಇನ್ನೊಂದು ಡ್ರೆಜ್ಜರ್ ಕೂಡ ರಿಪೇರಿಯಾಗದೆ ಆ್ಯಂಕರೇಜ್ ಹೊರಗೆ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಮುಳುಗಿತ್ತು.

    ಆ್ಯಂಕರೇಜ್‌ನಲ್ಲಿ ಮುಳುಗಿ ತೊಂದರೆಯಾಗುವುದು ಬೇಡ ಎಂಬ ಕಾರಣಕ್ಕೆ ಎನ್‌ಎಂಪಿಟಿಯ 4 ಟಗ್ ನೌಕೆಗಳನ್ನು ಬಳಸಿ ಭಗವತಿ ಪ್ರೇಮ್ ಡ್ರೆಜ್ಜರ್‌ನ್ನು ಸುರತ್ಕಲ್‌ನಲ್ಲಿ ನಿಲ್ಲಿಸಲಾಗಿದೆ. ಸದ್ಯ ತುಕ್ಕು ಹಿಡಿದ ಸ್ಥಿತಿಯಲ್ಲಿರುವ ನೌಕೆಯನ್ನು ಇನ್ನೆಂದೂ ಬಳಕೆ ಮಾಡುವುದು ಸಾಧ್ಯವಿಲ್ಲ ಎಂದು ತಜ್ಞರು ಪ್ರಮಾಣಪತ್ರ ನೀಡಿದ್ದಾರೆ.

    ಒಡೆಯುವ ಸಾಧ್ಯತೆ ಅಧಿಕ: ಲಭ್ಯ ಮಾಹಿತಿ ಪ್ರಕಾರ, ಎನ್‌ಎಂಪಿಟಿ ಸುಪರ್ದಿಯಲ್ಲಿದ್ದ ನೌಕೆಯನ್ನು ಹರಾಜಿನಲ್ಲಿ ಮಂಗಳೂರಿನ ಸೋನಾರ್ ಇಂಪೆಕ್ಸ್ ಎಂಬ ಕಂಪನಿಯ ಖರೀದಿಸಿದೆ. ನೌಕೆ ಸಿಐಎಸ್‌ಎಫ್ ಕಣ್ಗಾವಲಿನಲ್ಲಿದ್ದು, ಎನ್‌ಎಂಪಿಟಿಯಿಂದ ಅನುಮತಿ ಪಡೆದು ಖರೀದಿದಾರರ ಪರವಾದ ಏಜೆನ್ಸಿಯವರು ಸ್ಥಳೀಯ ಮೀನುಗಾರರನ್ನು ಸೇರಿಸಿಕೊಂಡು ಹಡಗು ನೋಡಿ ಪರಿಶೀಲಿಸಿ ಬಂದಿದ್ದಾರೆ.
    ಯಾವುದೇ ಬಳಕೆಗೆ ಸಾಧ್ಯವಾಗದ ನೌಕೆಯನ್ನು ಖರೀದಿದಾರರು ಒಡೆದು ಗುಜರಿಗೆ ಹಾಕುವ ಸಾಧ್ಯತೆಯೇ ಅಧಿಕ. ಆದರೆ ಸ್ಥಳೀಯರು, ನೌಕೆಯನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು; ಇಲ್ಲಿ ಒಡೆಯಬಾರದು ಎನ್ನುವ ಷರತ್ತು ಮುಂದಿರಿಸಿದ್ದಾರೆ. ಖರೀದಿದಾರರು ಸ್ಥಳೀಯರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಹಡಗಿನ ಯಾಂತ್ರಿಕ ವಿಭಾಗ ಪೂರ್ತಿ ಕೆಟ್ಟಿದ್ದು, ಅಲ್ಲಲ್ಲಿ ಬಿರುಕು ಕೂಡ ಕಾಣಿಸಿಕೊಂಡಿದೆ. ಹಾಗಾಗಿ ಹಡಗನ್ನು ಸ್ಥಳಾಂತರಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
    ಸುರತ್ಕಲ್‌ಗೆ ಡ್ರೆಜ್ಜರ್ ಎಳೆತಂದು ನಿಲ್ಲಿಸುವಾಗಲೇ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರು. ಆಗ ಆದಷ್ಟು ಬೇಗ ಸ್ಥಳಾಂತರಿಸುವುದಾಗಿ ಎನ್‌ಎಂಪಿಟಿ ಆಶ್ವಾಸನೆ ನೀಡಿತ್ತು. ಆದರೆ ಈಗ 15 ತಿಂಗಳಾಗಿದೆ. ನೌಕೆಯನ್ನು ಸ್ಥಳಾಂತರಿಸುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ತರಲಾಗಿದೆ ಎಂದು ಮೀನುಗಾರ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.

    ಹಡಗು ಖರೀದಿಸಿದವರು ನವೆಂಬರ್‌ನಲ್ಲಿ ನಮ್ಮಲ್ಲಿ ಮಾತನಾಡಿದ್ದರು. ಹಡಗು ಒಡೆದರೆ ಇಲ್ಲಿ ಮಾಲಿನ್ಯ ಉಂಟಾಗುತ್ತದೆ, ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ. ಜಿಲ್ಲಾಧಿಕಾರಿ, ಮೀನುಗಾರಿಕಾ ಇಲಾಖೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರನ್ನು ಕರೆದು ಸಭೆ ನಡೆಸುವಂತೆ ತಿಳಿಸಿದ್ದೇವೆ, ಆ ಬಳಿಕ ಅವರ ಪತ್ತೆಯಿಲ್ಲ.
    -ಶರತ್ ಗುಡ್ಡಕೊಪ್ಲ, ಮೀನುಗಾರ ಮುಖಂಡ, ಸುರತ್ಕಲ್

    ಮರ್ಕೆಟರ್ ಕಂಪನಿಯ ಡ್ರೆಜ್ಜರ್ ಅದಾಗಿದ್ದು, ಅವರು ತೆರವು ಮಾಡಬೇಕಿತ್ತು. ಮಾಡದ ಕಾರಣ ನಾವು ಅದನ್ನು ಹರಾಜು ಹಾಕಿದ್ದು, ಖರೀದಿಸಿರುವ ಕಂಪನಿಯವರು ಇನ್ನು ಮುಂದಿನ ಕ್ರಮ ಕೈಗೊಳ್ಳಬೇಕಿದೆ.
    -ಎ.ವಿ.ರಮಣ, ಎನ್‌ಎಂಪಿಟಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts