More

    ಕಾಂಗ್ರೆಸ್‌ನಲ್ಲಿ ಪರಮ ಹಿಡಿತ: ಟಿಕೆಟ್ ಹಂಚಿಕೆಯಲ್ಲಿಯೂ ಮೇಲುಗೈ? ಹಿರಿಯರ ವಿರುದ್ಧ ಸಿಡಿದೆದ್ದವರಿಗೆ ಮಾನ್ಯತೆ

    ತುಮಕೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜಿಲ್ಲಾ ಕಾಂಗ್ರೆಸ್ ಮೇಲೆ ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆದ ಶಾಸಕ ಡಾ.ಜಿ.ಪರಮೇಶ್ವರ ಸಂಪೂರ್ಣ ಹಿಡಿತ ಸಾಧಿಸಿದ್ದು ಟಿಕೆಟ್ ಹಂಚಿಕೆ ಕುತೂಹಲ ಮೂಡಿಸಿದೆ.

    ಇತ್ತೀಚೆಗಷ್ಟೇ ಪರಮಾಪ್ತ ಚಂದ್ರಶೇಖರಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿಕೊಂಡಿದ್ದ ಪರಮೇಶ್ವರ್ ಸಾಕಷ್ಟು ಹಿರಿಯರ ಒತ್ತಡದ ನಡುವೆಯೂ ಮತ್ತೊಬ್ಬ ಶಿಷ್ಯ ರಾಯಸಂದ್ರ ರವಿಕುಮಾರ್‌ಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಡಿಸಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮೇಲಿನ ಹಿಡಿತ ಬಿಗಿಗೊಳಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಜವಾಬ್ದಾರಿ ನಿಭಾಯಿಸಿದ್ದ ಡಾ.ಜಿ.ಪರಮೇಶ್ವರ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಎಂಬುದು ದೃಢವಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿಯೂ ಇವರ ಶಿಫಾರಸು ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿದೆ.

    ಶಿರಾದಲ್ಲಿ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಇದ್ದರೂ ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಡಾ.ಸಾಸಲು ಸತೀಶ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ಪಕ್ಷದಲ್ಲಿ ಬದಲಾವಣೆ ಪರ್ವದ ಮುನ್ಸೂಚನೆ ನೀಡಿದೆ. ಮಾಜಿ ಶಾಸಕ ಕೆ.ಷಡಕ್ಷರಿಗೆ ಪರ್ಯಾಯ ಎಂದೇ ಹೇಳಿಕೊಳ್ಳುತ್ತಿರುವ ತಿಪಟೂರಿನ ಟೂಡಾ ಶಶಿಧರ್ ಅವರನ್ನು ಕೆಪಿಸಿಸಿ ವಾರ್ ರೂಂ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಿದ್ದು, 30 ವರ್ಷದಿಂದ ಜಿಲ್ಲಾ ಕಾಂಗ್ರೆಸ್‌ನ ಮುಂಚೂಣಿಯಲ್ಲಿರುವ ನಾಯಕರ ನೆಮ್ಮದಿ ಕೆಡಿಸಿರುವುದು ಸುಳ್ಳಲ್ಲ. ಹೀಗೆ, ಜಿಲ್ಲೆಯ ಪ್ರಮುಖ ನಾಯಕರಿಗೆ ಪರ್ಯಾಯವಾಗಿ ಆಯಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಯುವ ನಾಯಕರಿಗೆ ಮಹತ್ವದ ಜವಾಬ್ದಾರಿ ಕೊಡಿಸುವಲ್ಲಿ ಡಾ.ಜಿ.ಪರಮೇಶ್ವರ ಅವರ ಮುಂದಾಲೋಚನೆಯೇ ಕಾರಣ ಎಂಬ ಗುಸುಗುಸು ಕೈ ಪಾಳಯದಲ್ಲಿ ಕೇಳಿಬರುತ್ತಿದೆ.

    ವಾಸಣ್ಣ, ಬೆಮೆಲ್‌ಗೂ ಆಂತರಿಕ ವಿರೋಧ?: ಜೆಡಿಎಸ್ ತೊರೆದು ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ಬೆಮೆಲ್ ಕಾಂತರಾಜು ಅವರಿಗೆ ಕಾಂಗ್ರೆಸ್ ಒಳರಾಜಕೀಯ ಅರಿಯುವುದು ಕಷ್ಟವಾಗಿದೆ ಎನ್ನಲಾಗಿದೆ. ಡಾ.ಜಿ.ಪರಮೇಶ್ವರ ಬಿಟ್ಟು ಮತ್ತೊಬ್ಬ ಮುಖಂಡರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಹಾಗೂ ನಂತರದ ವಿದ್ಯಮಾನಗಳಲ್ಲಿ ಗುರುತಿಸಿಕೊಂಡಿದ್ದ ಉಭಯ ನಾಯಕರಿಗೂ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಸಮಯದಲ್ಲಿ ಹೈಕಮಾಂಡ್ ವಲಯದಲ್ಲಿ ಪರಮೇಶ್ವರ ಅವರಿಗಿರುವ ಮಾನ್ಯತೆ ಗೊತ್ತಾಗುತ್ತಿದೆ. ಹಾಗಾಗಿ, ಅನ್ಯಪಕ್ಷಗಳಿಂದ ಹೊಸದಾಗಿ ಪಕ್ಷಕ್ಕೆ ಬರುವವರು ಯಾರ ಮೂಲಕ ಕೈಪಾಳಯಕ್ಕೆ ಜಿಗಿದರೆ ಒಳಿತಾಗಬಹುದು ಎಂಬ ಜಿಜ್ಞಾಸೆಯಲ್ಲಿದ್ದಾರೆ.

    ಕೆಎನ್‌ಆರ್, ವೆಂಕಟರಮಣಪ್ಪ ಗೈರು!: ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಅವರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಎನ್‌ಆರ್ ಹಾಗೂ ಅವರ ಪುತ್ರ ಆರ್.ರಾಜೇಂದ್ರ ಕಾಣಿಸಿಕೊಳ್ಳಲಿಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಜಣ್ಣ ವಿಶ್ರಾಂತಿಯಲ್ಲಿರುವ ಕಾರಣಕ್ಕೆ ಸಭೆಯಿಂದ ದೂರವಿದ್ದರು ಎಂದು ಆವರ ಆಪ್ತವಲಯ ತಿಳಿಸಿದೆೆಯಾದರೂ, ಪಕ್ಷದ ಒಳಗುಟ್ಟು ಬೇರೆಯೇ ಇದೆ. ಇದರ ಜತೆ ಪಾವಗಡ ಟಿಕೆಟ್ ವಿಷಯದ ಗೊಂದಲ ಬಗೆಹರಿಸಲು ಪಟ್ಟುಹಿಡಿದಿರುವ ಶಾಸಕ ವೆಂಕಟರಮಣಪ್ಪ ಕೂಡ ಪ್ರಮುಖ ಸಭೆಯಿಂದ ದೂರವಿದ್ದರು. ಆದರೆ, ಪಾವಗಡ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts