More

    ಪೆನ್ನಾರ್ ಜಲ ವ್ಯಾಜ್ಯ; ಹೊಸ ಸಂಧಾನ ಸಮಿತಿ ರಚನೆಗೆ ಸುಪ್ರೀಂ ಆದೇಶ

    ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಾರ್ ಜಲವಿವಾದಕ್ಕೆ ಸಂಬಂಧಿಸಿ ಹೊಸ ಸಂಧಾನ ಸಮಿತಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ ಪ್ರಶಾಂತ್ ಕುಮಾರ್ ಮಿಶ್ರಾ ದ್ವಿಸದಸ್ಯ ಪೀಠ ಸೂಚನೆ ನೀಡಿದೆ. ಸಮಿತಿ ರಚನೆಯಾದ 3 ತಿಂಗಳ ಒಳಗಾಗಿ ಕೋರ್ಟ್ ಗೆ ವರದಿ ಸಲ್ಲಿಸಬೇಕು ಎಂದೂ ತಿಳಿಸಲಾಗಿದೆ.

    ಈ ಹಿಂದೆ 2020ರಲ್ಲಿ ಸುಪ್ರೀಂಕೋರ್ಟ್ ಸಂಧಾನ ಸಮಿತಿ ರಚನೆ ಮಾಡಿತ್ತು. ಆದರೆ ಎರಡು ಸಭೆಗಳನ್ನು ನಡೆಸಿದ್ದ ಸಮಿತಿಗೆ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ, ನ್ಯಾಯಾಧಿಕರಣ ರಚನೆ ಮಾಡಬೇಕು ಎಂದು ಕೇಂದ್ರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು ಮತ್ತು ಕೋರ್ಟ್ ಕೂಡ ನ್ಯಾಯಾಧಿಕರಣ ರಚನೆಗೆ ಆದೇಶ ನೀಡಿತ್ತು. ಆದರೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸಂಧಾನಕ್ಕೆ ಮತ್ತೊಂದು ಪ್ರಯತ್ನ ಮಾಡಬೇಕು ಎಂದು ಕೋರಿಕೊಂಡಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಕೇಂದ್ರ ಜಲಶಕ್ತಿ ಇಲಾಖೆ, ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ, ಸಂಧಾನಕ್ಕೆ ಮತ್ತೊಮ್ಮೆ ಯತ್ನಿಸಲಾಗುವುದು ಎಂದು ಹೇಳಿತ್ತು.

    ಮಂಗಳವಾರದ ವಿಚಾರಣೆ ವೇಳೆ ಕೇಂದ್ರದ ಅಫಿಡವಿಟ್ ಗೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು, ಸಂಧಾನ ನಡೆಸುವುದರಿಂದ ಯಾವುದೇ ಲಾಭವಿಲ್ಲ. ಇದರಿಂದ ಬರೀ ಸಮಯ ಹಾಳು ಅಷ್ಟೇ ಎಂದು ಹೇಳಿದರು. ಈ ವಾದ ವಿರೋಧಿಸಿದ ರಾಜ್ಯದ ಪರ ಹಿರಿಯ ವಕೀಲ ಮೋಹನ್ ಕಾತರಕಿ, ಹಿಂದಿನ ಸಮಿತಿ ತರಾತುರಿಯಲ್ಲಿ ಕೇವಲ 2 ಸಭೆಯನ್ನಷ್ಟೇ ನಡೆಸಿ ವರದಿ ನೀಡಿತ್ತು ಮತ್ತು ಸ್ಥಳ ಪರಿಶೀಲನೆಯನ್ನೂ ನಡೆಸಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸಂಧಾನ ನಡೆಸಬೇಕು ಎಂದು ವಿವರಿಸಿದರು. ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರೂ ದನಿಗೂಡಿಸಿ, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸಂಧಾನಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂದರು. ರಾಜ್ಯ ಮತ್ತು ಕೇಂದ್ರದ ವಾದ ಪರಿಗಣಿಸಿದ ಸುಪ್ರೀಂಕೋರ್ಟ್, ಹೊಸ ಸಮಿತಿ ರಚನೆಗೆ ಅನುಮತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts