More

    ಮಾವು ಬೆಳೆಗಾರರ ಬೆಂಬಲಕ್ಕೆ ಮೇಳ!, ಜಿಲ್ಲಾ ತೋಟಗಾರಿಕೆ ಇಲಾಖೆ ಆಯೋಜನೆ, ಲಾಲ್‌ಬಾಗ್ ಮೇಳದಲ್ಲೂ ಸ್ಟಾಲ್

    ಬೆಂಗಳೂರು ಗ್ರಾಮಾಂತರ: ಮಾವು ಬೆಳೆಗಾರರ ನೆರವಿಗೆ ಮುಂದಾಗಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಈ ಬಾರಿ ಮೇಳ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದೆ.

    ಜಿಲ್ಲೆಯಲ್ಲಿ ಈ ಬಾರಿ 7500 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಹೂವು ಉತ್ತಮವಾಗಿದೆ. ಅಕಾಲಿಕ ಮಳೆಹಾನಿ, ರೋಗ ಬಾಧೆ ಪ್ರಮಾಣವೂ ಕಡಿಮೆ ಇದ್ದು, ಉತ್ತಮ ಇಳುವರಿ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಇಲಾಖೆ ಮೇಳದ ರೂಪುರೇಷೆ ಸಿದ್ಧಪಡಿಸುತ್ತಿದೆ.

    ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ಉದ್ದೇಶದಿಂದ ಮೇಳ ಆಯೋಜನೆಗೊಳ್ಳಲಿದೆ.
    ಜಿಲ್ಲಾಡಳಿತ ದೇವನಹಳ್ಳಿಗೆ ಸ್ಥಳಾಂತರಗೊಂಡ ಬಳಿಕ ಮೊದಲ ಬಾರಿಗೆ 2019ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಮೇಳಕ್ಕೆ ಹಸಿರು ನಿಶಾನೆ ತೋರಿಸಿದ್ದರು. 2020ರಲ್ಲಿ ಕರೊನಾ ಕಾರಣದಿಂದ ಮೇಳ ಆಯೋಜನೆ ಸಾಧ್ಯವಾಗಿರಲಿಲ್ಲ.

    ಜಿಲ್ಲೆಯಲ್ಲಿ ಪ್ರಚಾರ: ರಾಮನಗರ, ಮಂಡ್ಯ ಮತ್ತಿತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಾವು ಕೊಯ್ಲಿಗೆ ಬರುವುದು ತಡವಾಗುತ್ತದೆ. ಸಾಮಾನ್ಯವಾಗಿ ಮೇನಲ್ಲಿ ಉತ್ತಮ ಮಾವು ಬರುವ ನಿರೀಕ್ಷೆಯಿರುವುದರಿಂದ ಆ ವೇಳೆಗೆ ಆಯೋಜಿಸಲು ಚಿಂತನೆ ನಡೆದಿದೆ. ಬೆಳೆಗಾರರು ಮೇಳದಲ್ಲಿ ಭಾಗವಹಿಸಿ ಮಾವು ಮಾರಾಟ ಮಾಡುವ ಬಗ್ಗೆ ಜಿಲ್ಲೆಯಾದ್ಯಂತ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ಬೆಳೆಗಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ.

    ಲಾಲ್‌ಬಾಗ್‌ನಲ್ಲೂ ಸ್ಟಾಲ್: ಪ್ರತಿ ವರ್ಷ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸುವ ಮಾವು ಮೇಳದಲ್ಲಿ ಜಿಲ್ಲೆಯ ಬೆಳೆಗಾರರು ಭಾಗವಹಿಸಲು ಇಲಾಖೆ ಅನುಕೂಲ ಕಲ್ಪಿಸುತ್ತದೆ. ಅದೇ ರೀತಿ ಈ ಬಾರಿಯೂ ಪ್ರತ್ಯೇಕ ಸ್ಟಾಲ್‌ಗಳ ವ್ಯವಸ್ಥೆ ಕಲ್ಪಿಸಲು ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಣಮಟ್ಟದ ನೈಸರ್ಗಿಕ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ಸಹಕಾರಿಯಾಗಲಿದೆ. ಬಾದಾಮಿ, ರಸಪೂರಿ, ಸೇಂದೂರ, ತೋತಾಪುರಿ ಸೇರಿ ವಿವಿಧ ತಳಿಯ ಹಣ್ಣುಗಳು ಒಂದೇ ಸೂರಿನಲ್ಲಿ ಸಿಗುತ್ತದೆ.

    ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಹಾಗೂ ಜಿಲ್ಲೆ ಮಾವು ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಈ ಬಾರಿ ಮೇಳ ಆಯೋಜನೆಗೆ ಚಿಂತಿಸಲಾಗಿದೆ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಲ್ಲಿ ಮನವಿ ಮಾಡಲಾಗುವುದು.
    ಮಹಾಂತೇಶ್ ಮರಗೋಡು, ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts