More

    ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘಟನೆಗಳ ಬೆಂಬಲ

    ರಟ್ಟಿಹಳ್ಳಿ: ಶಿಕಾರಿಪುರ ನೀರಾವರಿ ಯೋಜನೆ ವಿರೋಧ, ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತ ಕಾರ್ವಿುಕ ಸಂಘಟನೆಯಿಂದ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಭಗತ್​ಸಿಂಗ್ ವೃತ್ತದಲ್ಲಿ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಂಘಟನೆ ಅಧ್ಯಕ್ಷ ಬಸವರಾಜ ಬೇವಿನಹಳ್ಳಿ ಮಾತನಾಡಿ, ಶಿಕಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಟ್ಟಿಹಳ್ಳಿ ತಾಲೂಕಿನ ರೈತರ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೂಡಲೆ ಕೈಬಿಡಬೇಕು. ಕಳೆದ 20 ವರ್ಷಗಳಿಂದ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರ ಉಪವಾಸ ಸತ್ಯಾಗ್ರಹಕ್ಕೆ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

    ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ರೈತರು ಭಗತ್​ಸಿಂಗ್ ವೃತ್ತದಿಂದ ಹಳೇ ಬಸ್ ನಿಲ್ದಾಣ, ರಾಣೆಬೆನ್ನೂರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಧಿಕ್ಕಾರ ಕೂಗುತ್ತ ಮೆರವಣಿಗೆ ನಡೆಸಿದರು.

    ಸಂಘಟನೆ ಪ್ರಧಾನ ಕಾರ್ಯದರ್ಶಿ ರಿಯಾಜ ನರಗುಂದಕರ, ಹಫೀಜುಲ್ಲಾ ಶಂಕ್ರನಹಳ್ಳಿ, ತಿಪ್ಪೇಶ ಹಂಚಿನಮನಿ, ಲೀಲಾವತಿ ಗೋಣಗೇರಿ, ಶಶಿಕಲಾ ಕಣವೇರ, ಶಾಂತಮ್ಮ ಮುದ್ದೆಪ್ಪಗೌಡರ, ನಾಗಪ್ಪ ಕರಿಯಣ್ಣನವರ, ಸಣ್ಣಪ್ಪ ವಡ್ಡರ, ಮುರಗೇಶ ಅಡಗಂಟಿ, ಗುರುವಪ್ಪ ವಡ್ಡರ, ನಜೀರಸಾಬ ಸೈಕಲ್ಗಾರ ಇತರರು ಇದ್ದರು.

    ರೈತ ಸಂಘದಿಂದ ಬೆಂಬಲ: ರೈತ ಸಂಘದ ಹಾನಗಲ್ಲ ಮತ್ತು ಬ್ಯಾಡಗಿ ತಾಲೂಕು ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹಾನಗಲ್ಲ ತಾಲೂಕು ಅಧ್ಯಕ್ಷ ಮರಿಗೌಡ್ರ ಪಾಟೀಲ ಮಾತನಾಡಿದರು. ಬ್ಯಾಡಗಿ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಗಂಗನ ಎಲಿ, ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳಿ, ಶಂಕ್ರಗೌಡ ಶಿರಗಂಬಿ, ಚಿಕ್ಕಪ್ಪ ಛತ್ರದ, ಸುರೇಶ ಚಲವಾದಿ, ವೀರೇಶ ಜೋಗದ, ಸೋಮಣ್ಣ ಜಡೆಗುಂಡದ, ರುದ್ರಪ್ಪ ಹಣಿ, ಷಣ್ಮುಖ ಅಂದಲಿ, ಅಜ್ಜನಗೌಡ ಕರೇಗೌಡ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts