More

    ಪಿಡಿಒಗಳಿಗೆ ಸೂಪರ್ ಪವರ್!: ಪ್ರಸ್ತಾವನೆ ಒಪ್ಪದ ಸಿಎಂ; ಆಡಳಿತ ಪಕ್ಷದಲ್ಲೂ ಅಸಮಾಧಾನ

    ಬೆಂಗಳೂರು: ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣಗಳಿಗೆ ತಿದ್ದುಪಡಿ ತರುವ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಹೆಚ್ಚಿನ ಅಧಿಕಾರ ನೀಡುವ ನಿರ್ಣಯ ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯಿತಿ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಸ್ತಾವನೆಯನ್ನು ಒಪ್ಪಲ್ಲ ಎಂದು ಸ್ಪಷ್ಟವಾಗಿ ಭರವಸೆ ನೀಡಿರುವ ನಡುವೆಯೂ ಗೊಂದಲ ಬಗೆಹರಿದಿಲ್ಲ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತರುವುದು ಹಾಗೂ ಗ್ರಾಮ ಪಂಚಾಯಿತಿ ನೌಕರರ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸಭೆ ನಡೆದಿತ್ತು. ಅದರಲ್ಲಿ ಮುಖ್ಯವಾಗಿ ಪಂಚಾಯಿತಿ ಆಡಳಿತಕ್ಕೆ ವೇಗ ನೀಡುವ ಉದ್ದೇಶದಿಂದ ಪಿಡಿಒಗಳಿಗೆ ಹೆಚ್ಚಿನ ಅಧಿಕಾರ ನೀಡುವ ತೀರ್ವನಕ್ಕೆ ಬರಲಾಗಿತ್ತು. ಇದರಿಂದ ಸಹಜವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರ ಮೊಟಕಾಗಲಿದೆ.

    ಸಿಎಂ ಮನವೊಲಿಸಲು ಪ್ರಯತ್ನ: ಗ್ರಾಮ ಪಂಚಾಯಿತಿ ಮಟ್ಟದ ಆಡಳಿತದಲ್ಲಿನ ವೈರುಧ್ಯಗಳನ್ನು ಸರಿಪಡಿಸಲು ಪಿಡಿಒಗಳಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾವನೆ ಇಲಾಖೆ ಮುಖ್ಯಸ್ಥ ಅಧಿಕಾರಿಗಳದ್ದಾಗಿದೆ. ಆದರೆ, ಜನಪ್ರತಿನಿಧಿಗಳು ತೀವ್ರ ವಿರೋಧ ಮಾಡಿದ್ದಾರೆ. ಚುನಾವಣೆ ಕೂಡ ಎದುರಿಗಿರುವುದರಿಂದ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದು, ಅಧಿಕಾರಿಗಳ ಶಿಫಾರಸು ಪಾಲಿಸಿದರೆ ಆಗುವ ಪರಿಣಾಮ ಅರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ. ಇದೇ ವೇಳೆ ಅಧಿಕಾರಿಗಳು ಸಿಎಂ ಮನವೊಲಿಕೆಗೆ ಮುಂದಾಗಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಕೆಲಸ ಆಗಲೇ ಬೇಕೆಂಬ ದೃಷ್ಟಿಯಲ್ಲಿ ಸಿಎಂ ಒಪ್ಪಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

    ಪ್ರಮುಖ ನಿರ್ಣಯಗಳು

    • ಕಟ್ಟಡಗಳಿಗೆ, ಕಾರ್ಖಾನೆಗಳನ್ನು ಸ್ಥಾಪಿಸಲು, ಅಂಗಡಿ, ಹೋಟೆಲ್​ಗಳಿಗೆ ಲೈಸೆನ್ಸ್ ನೀಡಲು ಕೆಲವು ಕಡೆ ಗ್ರಾಮ ಪಂಚಾಯತಿ ಸಭೆ ಸಕಾಲದಲ್ಲಿ ನಡೆಸದಿರುವುರಿಂದ ತೊಂದರೆಯಾಗಿದೆ. ಈ ಕಾರಣಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಪರವಾನಗಿ ನೀಡಿ, ಮುಂದಿನ ಗ್ರಾಪಂ ಸಭೆಗೆ ಮಾಹಿತಿ ಒದಗಿಸಲು ಕ್ರಮ ವಹಿಸಲು ಅವಕಾಶ ನೀಡುವುದು.
    • ಕೆಲವು ಕಡೆ ಗ್ರಾಮ ಪಂಚಾಯಿತಿ ಸಭೆ ಸಕಾಲದಲ್ಲಿ ನಡೆಸದಿರುವುರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ-9, 11ಎ ಮತ್ತು 11ಬಿ) ಗಳನ್ನು ವಿತರಿಸಿ ಬಳಿಕ ಪಂಚಾಯಿತಿ ಸಭೆಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸುವುದು.
    • ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಜಂಟಿಯಾಗಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಧ್ಯಕ್ಷರು ವಿವಿಧ ಯೋಜನೆಗಳು/ ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಅಕ್ರಮವಾಗಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಒಳಗಾಗಿದ್ದು, ಅಂತಹ ಸಂದರ್ಭಗಳಲ್ಲಿ ಪಿಡಿಒ ಹಣಕಾಸಿನ ವ್ಯವಹಾರ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
    • ಅಧ್ಯಕ್ಷರು ವಿಳಂಬವಾಗಿ ಯೋಜನೆ/ ಕಾರ್ಯಕ್ರಮಗಳ ಬಿಲ್ ಪಾವತಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತರದಾಯಿತ್ವ ಹೊಂದಿಲ್ಲದಿರುವುದರಿಂದ ಹಣಕಾಸಿನ ವ್ಯವಹಾರವನ್ನು ಪಿಡಿಒ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ನಿರ್ವಹಿಸಲು, ಒಂದು ವೇಳೆ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಲಭ್ಯವಿಲ್ಲದಿದ್ದಲ್ಲಿ ಪಿಡಿಒ ಮತ್ತು ಕಾರ್ಯದರ್ಶಿ ಗ್ರೇಡ್-1 / ಗ್ರೇಡ್-2 ಅವರು ನಿರ್ವಹಿಸಲು ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುತ್ತದೆ.

    ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ.

    | ಆರಗ ಜ್ಞಾನೇಂದ್ರ ಗೃಹ ಸಚಿವ

    ದಿನೇಶ್ ಗೂಳಿಗೌಡ ಪತ್ರ

    ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಲು ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸುವ ಸಿಎಂ ನಿರ್ಧಾರ ಸ್ವಾಗತಾರ್ಹ ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳಿವೆ. 91,500 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಸದಸ್ಯರು ಜನರಿಂದ, ಜನರಿಗೋಸ್ಕರ ಆಯ್ಕೆಯಾಗಿ ಸ್ಥಳೀಯವಾಗಿ ಜನರ ಸರ್ಕಾರವನ್ನು ರಚಿಸುತ್ತಾರೆ. ಇವರ ಅಧಿಕಾರಗಳನ್ನು ಕಡಿತ ಮಾಡಿದರೆ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಗೆ ಧಕ್ಕೆ ತಂದಂತೆ. ಇಂತಹ ಪ್ರಯತ್ನ ತಡೆಹಿಡಿಯಬೇಕು ಎಂದು ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದರು.

    ಬಯಲು ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಸ್ಥಾಪನೆ?

    ಬೆಂಗಳೂರು: ಮಲೆನಾಡು ಭಾಗದಲ್ಲೇ ಬರುವ ಬಯಲು ಪ್ರದೇಶದಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆಗೆ ಇರುವ ತೊಡಕು ನಿವಾರಿಸಲು ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಬಯಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿ, ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರಲು ನಿರ್ಣಯಿಸಿದ್ದಾರೆ.

    ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 4 ರಲ್ಲಿ ಗ್ರಾಮ ಪಂಚಾಯಿತಿ ಪ್ರದೇಶದ ಘೊಷಣೆ ಮತ್ತು ಗ್ರಾಮ ಪಂಚಾಯಿತಿಗಳ ಸ್ಥಾಪನೆ ಮಾಡಲು ಉಪಬಂಧವಿದೆ. ಆ ಪ್ರಕಾರ 5000ಕ್ಕಿಂತ ಕಡಿಮೆ ಇಲ್ಲದ ಮತ್ತು 7000ಕ್ಕೆ ಹೆಚ್ಚಿಗೆ ಇಲ್ಲದ ಜನಸಂಖ್ಯೆಯುಳ್ಳ ಒಂದು ಗ್ರಾಮವನ್ನು ಅಥವಾ ಗ್ರಾಮಗಳ ಗುಂಪನ್ನು ಪಂಚಾಯತಿ ಪ್ರದೇಶವೆಂದು ಘೊಷಿಸಲು ಅವಕಾಶ ಇರುತ್ತದೆ.

    ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 2500ಕ್ಕಿಂತ ಕಡಿಮೆ ಇಲ್ಲದ ಜನಸಂಖ್ಯೆಯುಳ್ಳ ಪ್ರದೇಶವನ್ನು ಗ್ರಾಮ ಪಂಚಾಯಿತಿ ಎಂದು ಘೊಷಿಸಬಹುದಾಗಿದೆ.

    ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆ ಇದ್ದು, ಅಂತಹ ಪ್ರದೇಶಗಳನ್ನು ಹೊರತುಪಡಿಸಿ, ಮಲೆನಾಡು ಜಿಲ್ಲೆಯಲ್ಲಿಯೇ ಬರುವ ಬಯಲು ಪ್ರದೇಶದ ತಾಲೂಕುಗಳಿಗೆ ಪ್ರತ್ಯೇಕ ಜನಸಂಖ್ಯೆಯ ಮಾನದಂಡವನ್ನು ನಿಗದಿಪಡಿಸಿ, ಗ್ರಾಪಂ ರಚಿಸಲು ಪ್ರಕರಣ 4ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

    ಪ್ರಸ್ತುತ 1 ಚುನಾವಣಾ ಕ್ಷೇತ್ರಕ್ಕೆ 1, 2, 3 ಮತ್ತು ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಬಹುಸದಸ್ಯ ಕ್ಷೇತ್ರಗಳ ಬದಲು ಏಕಸದಸ್ಯ ಕ್ಷೇತ್ರವನ್ನಾಗಿ ಮಾಡಲು ಪ್ರಕರಣ 5ಕ್ಕೆ ತಿದ್ದುಪಡಿ ತರಲು ಸಹ ನಿರ್ಧರಿಸಲಾಗಿದೆ. ಇನ್ನು ಅಭ್ಯರ್ಥಿಯ ಸದಸ್ಯತ್ವ ರದ್ದು ವಿಷಯದಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆಯಲು ಕಾನೂನು ತಿದ್ದುಪಡಿ ತರಲಾಗುತ್ತಿದೆ.

    ಇಂತಹ ಪ್ರಸಂಗದಲ್ಲಿ ಜಾತಿ ಪ್ರಮಾಣಪತ್ರ ಸಕ್ಷಮ ಪ್ರಾಧಿಕಾರದಿಂದ ರದ್ದಾದ ಸಂದರ್ಭದಲ್ಲಿ ಅಭ್ಯರ್ಥಿಯ ಸದಸ್ಯತ್ವ ರದ್ದುಪಡಿಸಲು ಸರ್ಕಾರವನ್ನು ಪ್ರಾಧಿಕಾರಿಯನ್ನಾಗಿ ಮಾಡಲು ಪ್ರಕರಣ 43(ಎ)ರಲ್ಲಿ ಉಪಬಂಧವನ್ನು ಕಲ್ಪಿಸಲು ತಿದ್ದುಪಡಿ ತರಲಾಗುತ್ತಿದೆ. ಗ್ರಾಪಂನ ಯಾವುದೇ ಮೂಲ ಆದೇಶದಿಂದ ಬಾಧಿತನಾದ ವ್ಯಕ್ತಿಯು ಮೇಲ್ಮನವಿ ಪಂಚಾಯತ್ ರಾಜ್ ಆಯುಕ್ತರಿಗೆ ಸಲ್ಲಿಸಲು ಹಾಗೂ ಅವರ ಆದೇಶವೇ ಅಂತಿಮವಾಗಿರತಕ್ಕದ್ದೆಂದು ನಿರ್ಣಯಿಸಲಾಗಿದೆ.

    ವರ್ಗಾವಣೆಗೆ ಕೌನ್ಸೆಲಿಂಗ್: ಪ್ರಸ್ತುತ ಪಿಡಿಒ ವೃಂದವು ಜಿಲ್ಲಾ ವೃಂದವಾಗಿದ್ದು, ಜಿಲ್ಲೆಯು ಒಂದು ಘಟಕವಾಗಿರುತ್ತದೆ. ಜಿಪಂ ಸಿಇಒ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿದ್ದು, ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಿಡಿಒಗಳನ್ನು ವರ್ಗಾವಣೆ ಮಾಡಲು ಅವರಿಗೆ ಅವಕಾಶವಿರುವುದಿಲ್ಲ. ಹೀಗಾಗಿ ಪಿಡಿಒ ವೃಂದವನ್ನು ರಾಜ್ಯ ವೃಂದವನ್ನಾಗಿ ನಿಗದಿಪಡಿಸುವ ಸಲುವಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಮತ್ತು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಕಾಯ್ದೆ ರೂಪಿಸಲು ತೀರ್ವನಿಸಲಾಗಿದೆ.

    ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts