More

    ಇಂದು ‘ಗುಲಾಬಿ ಚಂದ್ರ’ನನ್ನು ನೋಡಲು ನೀವು ರೆಡಿನಾ?

    ಬೆಂಗಳೂರು: ಕರೊನಾ ವೈರಸ್‌ ಭೀತಿಯ ನಡುವೆಯೇ ಇಂದು ರಾತ್ರಿ ಆಗಸದಲ್ಲಿ ವಿಸ್ಮಯವೊಂದು ನಡೆಯಲಿದೆ. ಅದೇ ಗುಲಾಬಿ ಚಂದ್ರ (ಪಿಂಕ್‌ಮೂನ್‌). ಇಂದು ರಾತ್ರಿಯಿಂದ ನಾಳೆ ಬೆಳಗ್ಗೆ 8.05 ನಿಮಿಷಗಳವರೆಗೂ ಇದು ಗೋಚರಿಸಲಿದೆ. ಆಕಾಶವು ಶುಭ್ರವಾಗಿದ್ದರೆ ನಾಳೆ ಬೆಳಗ್ಗೆ (ಬುಧವಾರ) ಭಾರತದಲ್ಲಿ ಪೂರ್ಣ ಚಂದ್ರ ಸ್ಪಷ್ಟವಾಗಿ ಗೋಚರಿಸಲಿದೆ.

    ಭಾರತೀಯರ ಬಾಯಲ್ಲಿ ಚಿತ್ರಾ ಪೂರ್ಣಿಮಾ, ಕರ್ನಾಟದಲ್ಲಿ ಅಕ್ಕನ ಹುಣ್ಣಿಮೆ ಎಂದೆಲ್ಲಾ ಕರೆಸಿಕೊಳ್ಳುವ ಈ ದಿನದ ಬಗ್ಗೆ ಮನೆಯಲ್ಲಿಯೇ ಕುಳಿತು ಬೋರ್‌ ಆಗಿರುವ ಮಕ್ಕಳಿಗೆ ಚಂದಮಾಮನ ಕುರಿತು ಪಾಠ ಮಾಡಲು ಸುಸಮಯವಾಗಿದೆ.

    ನಿಜವಾಗಿಯೂ ಚಂದ್ರ ಗುಲಾಬಿ ಇರುತ್ತಾನೆಯೆ?
    ಈ ಚಂದ್ರನಿಗೆ ಪಿಂಕ್‌ ಮೂನ್‌ ಅಂದರೆ ಗುಲಾಬಿ ಚಂದ್ರ ಎಂದು ಹೆಸರು ಇದ್ದರೂ, ಚಂದ್ರನೇನು ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ. ಹಾಗಿದ್ದರೆ ಈ ಹೆಸರು ಏಕೆ ಬಂತು ಎಂದು ನೀವು ಪ್ರಶ್ನಿಸಬಹುದು. ಉತ್ತರ ಅಮೆರಿಕದಲ್ಲಿ ವಸಂತ ಋತುವಿನಲ್ಲಿ ಅರಳುವ ಕೇಸರಿ ಬಣ್ಣದ ಗ್ರೌಂಡ್ ಫ್ಲೋಕ್ಸ್ ಎಂಬ ಕಾಡು ಹೂವಿನ ಹೆಸರನ್ನು ಇದಕ್ಕೆ ಇಡಲಾಗಿದೆ ಅಷ್ಟೆ. ಒಂದೊಂದು ಪ್ರದೇಶದಲ್ಲಿ ಇಂಥ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ.

    ಚಂದ್ರನು ಭೂಮಿಗೆ ಪ್ರದಕ್ಷಿಣೆ ಹಾಕುತ್ತಿರುತ್ತಾನೆ. ಒಂದು ಸಮಯದಲ್ಲಿ ಅದು ಭೂಮಿಗೆ ಅತಿ ಸಮೀಪ ಬರುತ್ತದೆ. ಅಂದರೆ ಸುಮಾರು 3.63 ಲಕ್ಷ ಕಿಲೋ ಮೀಟರ್‌ (ಅತ್ಯಂತ ದೂರ ಎಂದರೆ 4.05 ಲಕ್ಷ ಕಿ.ಮೀ). ಹೀಗೆ ಸಮೀಪಕ್ಕೆ ಬಂದಾಗ ಅದನ್ನು ಸೂಪರ್‌ ಮೂನ್‌ ಎನ್ನುತ್ತೇವೆ. ಇಂಥ ಸೂಪರ್‌ಮೂನ್‌ಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಮಾರ್ಚ್ 9ರಂದು ಕೂಡ ಕಾಣಿಸಿಕೊಂಡಿತ್ತು. ಆದರೆ ಇಂದು ಕಾಣಸಿಗಲಿರುವ ಚಂದ್ರ ಅದಕ್ಕಿಂತ ಅತ್ಯಂತ ದೊಡ್ಡದಾಗಿರುತ್ತದೆ. ಅಂದರೆ ಸಾಮಾನ್ಯ ಪೂರ್ಣ ಚಂದ್ರನಿಗಿಂತ ಇಂದು 15 ಪ್ರತಿಶತ ಪ್ರಕಾಶಮಾನವಾಗಿ ಗೋಚರಿಸುತ್ತದೆ.

    ಸಮುದ್ರದ ತಟದಲ್ಲಿ ಈ ಸೌಂದರ್ಯ ಕಣ್ತುಂಬಿಸಿಕೊಳ್ಳುವುದು ಅದ್ಭುತ. ಆದರೆ ಸದ್ಯ ಕರೊನಾ ವೈರಸ್‌ ಭೀತಿಯಿಂದಾಗಿ ಸಮುದ್ರದ ಊರುಗಳಲ್ಲಿ ವಾಸ ಇರುವವರೂ ಅಲ್ಲಿಗೆ ಹೋಗುವಂತಿಲ್ಲ. ಆದ್ದರಿಂದ ಮನೆಯ ಟೆರೇಸ್‌ ಅಥವಾ ಮನೆಯ ಸಮೀಪ ಅತಿ ಎತ್ತರದ ಜಾಗವಿದ್ದರೆ ಅಲ್ಲಿ ಸೋಷಿಯಲ್‌ ಡಿಸ್‌ಟೆನ್ಸ್‌ ಕಾಪಾಡಿಕೊಂಡು ಚಂದ್ರನನ್ನು ನೋಡಬಹುದು. ಈಗಾಗಲೇ ಹಲವೆಡೆಗಳಲ್ಲಿ ಮಳೆಯಾಗಿದೆ. ಇಂದು ಮಳೆಯೋ, ಮೋಡವೋ ಅಡ್ಡ ಬಾರದಿರಲಿ ಎಂದು ಪ್ರಾರ್ಥಿಸಿಕೊಳ್ಳಿ. ನಿಮ್ಮ ಬಳಿ ಟೆಲಿಸ್ಕೋಪ್‌ ಇದ್ದಲ್ಲಿ ಟೆರೇಸ್‌ ಮೇಲೆ ನಿಂತು ಅದರಿಂದ ಸೌಂದರ್ಯ ಸವಿಯಿರಿ. ಇಂದು ಕಾಣಲು ಸಿಗದಿದ್ದರೆ ನಿರಾಸೆ ಬೇಡ. ಮೇ 7ಕ್ಕೂ ಚಂದ್ರ ಇಷ್ಟೇ ಸುಂದರವಾಗಿ ಕಾಣಿಸಿಕೊಳ್ಳಲಿದ್ದಾನೆ. ಅಲ್ಲಿಯವರೆಗೆ ಲಾಕ್‌ಡೌನ್‌ ಮುಗಿದು ಎಲ್ಲವೂ ಸುಸೂತ್ರವಾಗಿದ್ದರೆ ಬೇಕಾದ ಜಾಗದಲ್ಲಿಯೇ ನಿಂತು ನೀಡಬಹುದು. (ಏಜೆನ್ಸೀಸ್​)

    ಬೆಂಗಳೂರಿನಲ್ಲಿ ಡೈನೋಸಾರ್​ಗಳು?; ಈ ವೈರಲ್​ ಫೋಟೋ ಸುಳ್ಳಾದರೂ ಹಿಂದಿನ ಉದ್ದೇಶವೇ ಬೇರೆ!

    ಆಗಾಗ ಕೈತೊಳೆಯುವ ಸರಳ ಅಭ್ಯಾಸವೇ ಕರೊನಾದಿಂದ ರಕ್ಷಣೆ ಪಡೆಯುವ ತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts