More

    ವಿಜಯವಾಣಿ ಸಂದರ್ಶನ|ಚಲನಚಿತ್ರ ಅಕಾಡೆಮಿಯ ಉದ್ದೇಶ ಈಡೇರಿಸುವ ಪ್ರಯತ್ನ- ಸುನೀಲ್ ಪುರಾಣಿಕ್ ಅಭಿಮತ

    ಕಿರುತೆರೆ ಮೂಲಕ ಜನಪ್ರಿಯರಾಗಿ ಬೆಳ್ಳಿತೆರೆಯಲ್ಲೂ ಮಿಂಚಿ ನಟನೆ-ನಿರ್ದೇಶನದಲ್ಲಿ ಅಪಾರ ಅನುಭವ ಇರುವ ಸುನೀಲ್ ಪುರಾಣಿಕ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಮಹತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ವಿಜಯವಾಣಿ ಕಚೇರಿಗೆ ಭೇಟಿ ನೀಡಿರುವ ಅವರು, ಅಕಾಡೆಮಿ ಅಧ್ಯಕ್ಷರಾಗಿ ತಮಗಿರುವ ಕಲ್ಪನೆ, ನಿಭಾಯಿಸಬೇಕು ಎಂದುಕೊಂಡಿರುವ ಯೋಜನೆ ಇತ್ಯಾದಿಗಳ ಕುರಿತು ಸವಿಸ್ತಾರವಾಗಿ ವಿಜಯವಾಣಿ ಪ್ರತಿನಿಧಿ ಮಂಜು ಕೊಟಗುಣಸಿ ಅವರ ಜತೆಗೆ ಮಾತನಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

    ಕರ್ನಾಟಕ ಚಲನಚಿತ್ರ ಅಕಾಡೆಮಿ ಎಂದ ತಕ್ಷಣ ಚಿತ್ರೋತ್ಸವ ಮತ್ತು ಪುಸ್ತಕ ಬಿಡುಗಡೆಗಷ್ಟೇ ಸೀಮಿತ ಅನ್ನೋ ಮಾತಿದೆ…

    -ಸದ್ಯ.. ಅಕಾಡೆಮಿಯನ್ನು ಜನರು ಅದೇ ರೀತಿ ನೋಡುತ್ತಿದ್ದಾರೆ. ಆದರೆ, ಅಕಾಡೆಮಿಯ ಉದ್ದೇಶವೇ ಬೇರೆ. ಈ ಹಿಂದಿನ ಅಧ್ಯಕ್ಷರಲ್ಲಿ ಕೆಲವರಿಗೆ ಸಮಯ ಸಿಕ್ಕಿದೆ, ಮತ್ತೆ ಕೆಲವರಿಗೆ ಸಿಕ್ಕಿಲ್ಲ. ಹಾಗಂತ ಯಾರನ್ನೂ ದೂಷಣೆ ಮಾಡಬಾರದು. ಸರ್ಕಾರದ ಇತಿಮಿತಿ ಮತ್ತು ನಿಯಮಾವಳಿಗಳ ಒಳಗೇ ಅಕಾಡೆಮಿ ಕೆಲಸ ಮಾಡಬೇಕು. ಹಾಗಾಗಿ ಆ ಸೀಮಿತ ಎಂಬ ಮಾತುಗಳನ್ನು ತೆಗೆದು, ಅಕಾಡೆಮಿಯ ಧ್ಯೇಯೋದ್ದೇಶಗಳು ಏನಿವೆಯೋ ಅವೆಲ್ಲವನ್ನು ಜಾರಿಗೆ ತರುವಲ್ಲಿ ನೂತನ ಅಧ್ಯಕ್ಷನಾದ ನಾನು ಶ್ರಮ ವಹಿಸುತ್ತೇನೆ.

    ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ನಿಮಗೆ ಸದ್ಯ ಇರುವ ಸವಾಲುಗಳೇನು?

    – ಯಾವ ಇಂಡಸ್ಟ್ರಿಯಿಂದ ಈ ಹಂತಕ್ಕೆ ಬಂದಿದ್ದೇನೋ ಅದರ ಋಣ ತೀರಿಸುವ ಅವಕಾಶ ಅಧ್ಯಕ್ಷನಾಗುವ ಮೂಲಕ ಸಿಕ್ಕಿದೆ. ಅದನ್ನು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ನಿಭಾಯಿಸಬೇಕೆಂದುಕೊಂಡಿದ್ದೇನೆ. ಮೊದಲನೆಯದಾಗಿ ಅಕಾಡೆಮಿಗೆ ಜೀವ ಕೊಡಬೇಕು. ಕಾಯಂ ಸಿಬ್ಬಂದಿ ಇಲ್ಲ, ಆದರೆ ಒಳ್ಳೆಯ ಆಫೀಸಿದೆ, ಅದಕ್ಕೆ ರೂಪ ಕೊಡಬೇಕು. ವಿಭಿನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಯಾವ ಉದ್ದೇಶಕ್ಕಾಗಿ ಅಕಾಡೆಮಿ ಸ್ಥಾಪಿತವಾಯಿತೋ ಅದು ಈಡೇರಿಲ್ಲ. ಹಿಂದಿನ ಅಧ್ಯಕ್ಷರೆಲ್ಲ ಅವರ ಮಿತಿಯಲ್ಲಿ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ. ಇದಕ್ಕೆಲ್ಲ ಸಮಯದ ಅಗತ್ಯವೂ ಅಷ್ಟೇ ಇದೆ. ಹಾಗಾಗಿ ನಾನು ಈವರೆಗೆ ಒಪ್ಪಿದ ಸಿನಿಮಾ ಕೆಲಸಗಳನ್ನಷ್ಟೇ ಮುಗಿಸಿಕೊಡಲಿದ್ದೇನೆ, ಹೊಸದನ್ನು ಒಪ್ಪಿಕೊಳ್ಳುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಇದರಲ್ಲಿಯೇ ತೊಡಗಿಸಿಕೊಂಡಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ.

    ಅಂತಾರಾಷ್ಟ್ರೀಯ ಸಿನಿಮೋತ್ಸವ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿದೆ ಅನಿಸುತ್ತಿಲ್ಲವೇ?

    – ಹೌದು, ಬೆಂಗಳೂರಿಗಷ್ಟೇ ಸಿನಿಮೋತ್ಸವ ಸೀಮಿತವಾಗಿದೆ. ಚಿತ್ರರಂಗಕ್ಕೆ ಇಲ್ಲಿನವರಿಂದ ಮಾತ್ರ ಲಾಭ ಸಿಗಲಾರದು. ಅದರಲ್ಲಿ ಉತ್ತರ ಕರ್ನಾಟಕದ ಪಾಲು ಬಹುದೊಡ್ಡದಿದೆ. ಕನ್ನಡ ಸಿನಿಮಾಗಳನ್ನೇ ಅಲ್ಲಿನ ಜನ ನೋಡುತ್ತಾರೆ. ಹಾಗಾಗಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಅಕಾಡೆಮಿಯನ್ನೇ ಜನರತ್ತ ಕೊಂಡೊಯ್ಯಬೇಕಿದೆ. ಅಲ್ಲಿಯೂ ಸಿನಿಮಾ ಬಗ್ಗೆ ಒಲವಿರುವ ಜನರಿದ್ದಾರೆ. ಅಂಥವರಿಗೆ ಸ್ಕ್ರೀನ್ ಪ್ಲೇ, ಫಿಲಂ ಮೇಕಿಂಗ್, ಸ್ಟೋರಿ ಟೆಲ್ಲಿಂಗ್ ರೀತಿಯ ಕೋರ್ಸ್​ಗಳನ್ನು ಆರಂಭಿಸಬೇಕೆಂದುಕೊಂಡಿದ್ದೇವೆ. ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಲ್ಲೂ ಸಿನಿಮೋತ್ಸವ-ಕಾರ್ಯಾಗಾರಗಳನ್ನು ಮಾಡಬೇಕಿದೆ.

    ಅಕಾಡೆಮಿಯಿಂದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಳ ಮಾಡುವ ಯೋಜನೆಗಳಿವೆಯೇ?

    – ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿದೆ, ಮಾಲ್​ಗಳು ಹೆಚ್ಚಾಗುತ್ತಿವೆ. ಉಳ್ಳವರು ಮಾಲ್​ಗೆ ಹೋಗಿ ಸಿನಿಮಾ ನೋಡುತ್ತಾರೆ. ಆದರೆ, ಸಾಮಾನ್ಯ ವ್ಯಕ್ತಿಗೆ ಅದು ಸಾಧ್ಯವಾ? ಹಾಗಾಗಿ 10 ಸಾವಿರ ಜನಸಂಖ್ಯೆ ಇರುವ ಪ್ರದೇಶ ಆಯ್ದುಕೊಂಡು, ರಾಜ್ಯಾದ್ಯಂತ ಈಗಿನ ತಂತ್ರಜ್ಞಾನ ಬಳಿಸಿಕೊಂಡು ತಾತ್ಕಾಲಿಕ ಮಿನಿ ಚಿತ್ರಮಂದಿರದ ಸೆಟ್​ಅಪ್ ಸ್ಥಾಪಿಸಬೇಕು. ಮೊದಮೊದಲಿಗೆ ಕಷ್ಟ ಆಗಬಹುದು. ಆದರೆ, ಮುಂದೊಂದಿನ ಆ ಯೋಜನೆ ಕೈ ಹಿಡಿದೇ ಹಿಡಿಯುತ್ತದೆ. ಇದರಲ್ಲಿ ಸರ್ಕಾರದ ಪಾತ್ರ ಮುಖ್ಯವಾದದ್ದು, ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ.

    ಸಬ್ಸಿಡಿ ಕುರಿತಾದ ಸಮಸ್ಯೆ ನಿವಾರಣೆ ಮತ್ತು ಪೈರಸಿ ತಡೆ ಕುರಿತು ಗಮನ ಕೊಟ್ಟಿದ್ದೀರಾ?

    – ಚಿತ್ರಮಂದಿರಕ್ಕೆ ಸಂಬಂಧಿಸಿದ ಕೆಲಸಗಳನ್ನು ಅಕಾಡೆಮಿ ಮಾಡಲಿದೆ. ಆದರೆ, ಕಾನೂನಾತ್ಮಕ ಕೆಲಸಗಳು ಬಂದಾಗ ಅದಕ್ಕೆ ಸರ್ಕಾರವೇ ಮುಂದಾಳತ್ವ ವಹಿಸಬೇಕಾಗುತ್ತದೆ. ಸಬ್ಸಿಡಿ ಮತ್ತು ಪೈರಸಿ ಕಾಯ್ದೆಗಳೆಲ್ಲ ವಾರ್ತಾ ಇಲಾಖೆ ವ್ಯಾಪ್ತಿಗೆ ಬರುವುದರಿಂದ ನಾವು ಕಾನೂನಿನ ಚೌಕಟ್ಟಿನೊಳಗೆ ಸಲಹೆಗಳನ್ನಷ್ಟೇ ನೀಡಬಹುದು. ಅಥವಾ ಇಲಾಖೆಗೆ ಭಾರವಾಗುತ್ತಿದೆ ಎಂದಾದರೆ, ಅಕಾಡೆಮಿಗೆ ನೀಡಿದರೆ ಟ್ರಯಲ್ ಆಂಡ್ ಎರರ್ ರೀತಿ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಕೈ ಹಾಕಬಹುದು.

    ಈ ಬಾರಿಯ ಅಂತಾರಾಷ್ಟ್ರೀಯ ಸಿನಿಮೋತ್ಸವದ ತಯಾರಿ ಹೇಗಿದೆ?

    – ತುಂಬ ಇನೋವೇಟಿವ್ ಆಗಿ ಮಾಡಬೇಕೆಂಬ ನಿರ್ಧಾರ ಇಲ್ಲ. ಏಕೆಂದರೆ, ಅದಕ್ಕೆಲ್ಲ ಸಮಯ ನಮ್ಮ ಬಳಿ ಇಲ್ಲ. ನ್ಯಾಷನಲ್ ಅವಾರ್ಡ್, ಪನೋರಮಾ ಪ್ರಶಸ್ತಿಗೆಲ್ಲ ಒಂದೊಂದು ವರ್ಷ ಕೆಲಸ ಮಾಡುತ್ತಾರೆ. ಹಾಗಾಗಿ ಕಳೆದ ವರ್ಷ ಏನೆಲ್ಲ ಮಾಡಲಾಗಿತ್ತೋ ಅದನ್ನೆ ಮುಂದುವರಿಸಿಕೊಂಡು ಹೋಗಲಿದ್ದೇವೆ. ಸರ್ಕಾರ, ವಾಣಿಜ್ಯ ಮಂಡಳಿ ಎಲ್ಲವೂ ಸಹಕಾರ ನೀಡಿವೆ. ಶೀಘ್ರದಲ್ಲಿ ಸಿನಿಮೋತ್ಸವ ನಡೆಯುವ ಜಾಗ, ಉದ್ಘಾಟನೆ ಯಾವಾಗ ಎಂಬುದನ್ನು ಘೋಷಣೆ ಮಾಡಲಿದ್ದೇವೆ.

    ಸರ್ಕಾರದ ಮುಂದೆ ಅಕಾಡೆಮಿಗೆ ಸಂಬಂಧಿಸಿದ ನಿಮ್ಮ ಬೇಡಿಕೆಗಳು ಏನಾದರೂ ಇವೆಯೇ?

    – ಖುಷಿಯ ವಿಚಾರ ಏನೆಂದರೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅಕಾಡೆಮಿ ಸ್ಥಾಪನೆ ಆಯಿತು. ಅವರ ಕಾಲಾವಧಿಯಲ್ಲಿಯೇ ಅಂತಾರಾಷ್ಟ್ರಿಯ ಸಿನಿಮೋತ್ಸವವೂ ಆರಂಭವಾಗಿದ್ದು. ಈಗ ಅವರ ಅವಧಿಯಲ್ಲೇ ಅಕಾಡೆಮಿ ಅಧ್ಯಕ್ಷ ಅಗಿದ್ದೇನೆ. ನನೆಗುದಿಗೆ ಬಿದ್ದ ಯೋಜನೆಗಳನ್ನು ಅಧ್ಯಕ್ಷನಾದ ಕ್ಷಣದಿಂದಲೇ ಜಾರಿಗೆ ತರುವಂತೆ ಅವರೇ ಹೇಳಿದ್ದಾರೆ. ಸಿನಿಮಾದಲ್ಲಿ ದುಡಿದು ಆರ್ಥಿಕವಾಗಿ ಹಿಂದುಳಿದವರಿದ್ದಾರೆ, ಅನಾರೋಗ್ಯ ಪೀಡಿತರಿದ್ದಾರೆ. ಅವರಿಗೆ ಇಂದಿಗೂ ಒಂದು ಕ್ರೆಡಿಟ್ ಕಾರ್ಡ್ ಇಲ್ಲ. ಸರ್ಕಾರದ ಹಲವು ಸವಲತ್ತುಗಳಿದ್ದರೂ ಅವು ತಲುಪುತ್ತಿಲ್ಲ. ಸರ್ಕಾರವೂ ಅಂಥ ಕ್ರಿಯಾಶೀಲ ಯೋಜನೆಗಳನ್ನು ಗಮನಕ್ಕೆ ತರುವಂತೆ ಹೇಳಿದೆ.

    ನಿಮ್ಮ ಅವಧಿಯಲ್ಲಿ ಏನೆಲ್ಲ ಮಾಡಬೇಕು ಎಂಬುದಕ್ಕೆ ರಿಪೋರ್ಟ್ ಕಾರ್ಡ್ ಹಾಕಿಕೊಂಡಿದ್ದೀರಾ?

    – ನನಗೆ ನಾನೇ ಒಂದು ಗುರಿ ಹಾಕಿಕೊಳ್ಳುತ್ತೇನೆ. ಒಂದು ವರ್ಷದ ಅವಧಿಯಲ್ಲಿ ಅಕಾಡೆಮಿಗಾಗಿ ಏನೆಲ್ಲ ಮಾಡಬಹುದು ಎಂಬುದನ್ನು ಪ್ಲಾ್ಯನ್ ಮಾಡಿದ್ದೇನೆ. ಅವುಗಳನ್ನು ನೋಡುತ್ತಿದ್ದರೆ, ಪೂರ್ಣ ಮಾಡಬೇಕೆಂಬ ಉತ್ತೇಜನ ಬರುತ್ತೆ. ಇದನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗುವಂತೆ ಹೇಳುತ್ತೇನೆ.

    ಕನ್ನಡ ಸಿನಿಮಾ ಪರಂಪರೆ ಉಳಿಕೆಗೆ ಹೊಸ ಯೋಜನೆಗಳೇನಾದರೂ ನಿಮ್ಮ ತಲೆಯಲ್ಲಿವೆಯೇ?

    – ಕನ್ನಡ ಚಿತ್ರರಂಗಕ್ಕೆ ಏಳೆಂಟು ದಶಕಗಳ ಇತಿಹಾಸವಿದೆ. ಅವರವರ ಅವಧಿಯಲ್ಲಿ ಎಲ್ಲರದ್ದೂ ದೊಡ್ಡ ಸಾಧನೆಯೇ. ಹಾಗಾಗಿ ಚಲನಚಿತ್ರ ರಂಗದ ಉನ್ನತಿಗೆ ಕಾರಣರಾದವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಆರ್ಕೆವ್ಸ್ ಸಿದ್ಧಪಡಿಸಬೇಕು ಎಂದುಕೊಂಡಿದ್ದೇನೆ. ಅವೆಲ್ಲವನ್ನು ಪ್ರದರ್ಶಿಸಲು ಮ್ಯೂಸಿಯಂ ನಿರ್ವಿುಸಬೇಕಿದೆ. ನಮ್ಮವರ ಸಾಧನೆ ನಮಗೆ ಗೊತ್ತು. ಆದರೆ, ಹೊರಗಿನಿಂದ ಬರುವವರಿಗೆ ನಮ್ಮವರ ಶಕ್ತಿಯ ಪರಿಚಯ ಆಗಬೇಕಲ್ಲವೆ? ನಮ್ಮವರ ಸಿನಿಮಾ ಪರಂಪರೆ ಮತ್ತು ಅವರ ಕೊಡುಗೆಗಳನ್ನು ಪರಿಚಯಿಸಬೇಕಿದೆ. ಏಕೆಂದರೆ, ಇನ್ನೊಬ್ಬ ಹುಣಸೂರು ಕೃಷ್ಣಮೂರ್ತಿ, ಪಂತುಲು ಹುಟ್ಟಲು ಸಾಧ್ಯವಿಲ್ಲ. ಅವರು ಬಳುವಳಿಯಾಗಿ ಕೊಟ್ಟುಹೋದದ್ದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.

    ಸರ್ಕಾರ, ಅಕಾಡೆಮಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಿಮಗೆ ಹೇಗೆ ಸಹಕಾರ ಸಿಗುತ್ತಿದೆ ?

    – ಖುಷಿಯ ವಿಚಾರವಿದು. ಇಷ್ಟು ವರ್ಷದ ಸಹಕಾರಕ್ಕೆ ಹೋಲಿಸಿದರೆ, ಈ ವರ್ಷ ಅದು ಮತ್ತಷ್ಟು ಗಟ್ಟಿಯಾಗಿರಲಿದೆ. ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇ ತಡ, ಇಡೀ ಚಿತ್ರರಂಗವೇ ನನಗೆ ಶುಭಾಶಯ ತಿಳಿಸಿತು. ಕಲಾವಿದರ ಸಂಘ, ನಿರ್ವಪಕರ ಸಂಘ, ವಾಣಿಜ್ಯ ಮಂಡಳಿ ಅಧ್ಯಕ್ಷರನ್ನೊಳಗೊಂಡ ಎಲ್ಲರೂ ಆಗಮಿಸಿ ಬೆಂಬಲ ಸೂಚಿಸಿದರು. ಮಾನ್ಯ ಮುಖ್ಯಮಂತ್ರಿಗಳು ಉದ್ಯಮದ ಅಭಿವೃದ್ಧಿಗೆ ಎಲ್ಲವನ್ನೂ ಕೊಡಲು ಸಿದ್ಧರಿದ್ದಾರೆ. ಅಷ್ಟೇ ಅಲ್ಲ ಸಿಎಂ ಪುತ್ರ ವಿಜಯೇಂದ್ರ ಅವರೂ ನಿಂತು ಬೆಂಬಲವಾಗಿ ಪ್ರೋತ್ಸಾಹ ಸೂಚಿಸಿದ್ದಾರೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts