More

    ಸೀತೆ ಪುರುಷವಿರೋಧಿ ಆಗಿರಲಿಲ್ಲ : ಅನುವಾದ ಮಾಡುವಾಗ, ಓದುವಾಗ ಮಾನಸಿಕ ಸಿದ್ಧತೆ ಅಗತ್ಯ

     ಉತ್ತರಕಾಂಡ ಇಂಗ್ಲಿಷ್ ಅನುವಾದದ ಕುರಿತು ಡಾ. ಎಸ್.ಎಲ್.ಭೈರಪ್ಪ ಸಂದರ್ಶನ

    ಮಹಾಭಾರತದಲ್ಲಿನ ದ್ರೌಪದಿ, ಕುಂತಿ, ಗಾಂಧಾರಿಯನ್ನು ಚಿತ್ರಿಸಿ ನಲವತ್ತು ವರ್ಷದ ಹಿಂದೆ ‘ಪರ್ವ’ ಕಾದಂಬರಿ ರಚಿಸಿದ್ದ ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿರಿಸಿಕೊಂಡು ಮೂರು ವರ್ಷದ ಹಿಂದೆ ‘ಉತ್ತರಕಾಂಡ’ ಕಾದಂಬರಿ ಹೊರತಂದಿದ್ದರು. ಇದೀಗ ಉತ್ತರಕಾಂಡವನ್ನು ರಶ್ಮಿ ತೇರದಾಳ್ ಇಂಗ್ಲಿಷ್​ಗೆ ಅನುವಾದಿಸಿದ್ದು, ಏಕಾ(ವೆಸ್ಟ್​ಲ್ಯಾಂಡ್) ಪ್ರಕಟಿಸಿದೆ. ಈ ಕುರಿತು ಭೈರಪ್ಪ ತಮ್ಮ ಮನದಾಳವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.

    ರಮೇಶ ದೊಡ್ಡಪುರ

    * ವಾಲ್ಮೀಕಿ ರಾಮಾಯಣದಲ್ಲಿದ್ದ ಸೀತೆಯ ಧ್ವನಿಯನ್ನು ಉತ್ತರಕಾಂಡವು ಹೆಚ್ಚು ಮಾಡಿತೇ? ಅಥವಾ ಅದು ಮೂಲದಲ್ಲಿಲ್ಲದ ಧ್ವನಿಯೇ?

    -ಉತ್ತರಕಾಂಡದ ಮುಖ್ಯವಾದ ಅಂಶಗಳೆಲ್ಲ ರಾಮಾಯಣದಲ್ಲಿ ಇದ್ದ ಕಥೆಯೇ. ಉದಾಹರಣೆಗೆ ನೇಗಿಲಗೆರೆಯಲ್ಲಿ ಹೆಣ್ಣುಮಗು ಜನಕನಿಗೆ ಸಿಕ್ಕಿದ್ದು, ನಂತರದಲ್ಲಿ ಜನಕನ ಹೆಂಡತಿ ಗರ್ಭಿಣಿಯಾಗಿ ಮತ್ತೊಂದು ಹೆಣ್ಣು ಜನಿಸಿ, ಅದಕ್ಕೆ ಊರ್ವಿುಳಾ ಎಂದು ಹೆಸರಿಟ್ಟಿದ್ದು, ಸೀತೆ ರಾವಣನಿಂದ ಬಿಡುಗಡೆ ಹೊಂದಿ ಬರುವಾಗ ಅಲಂಕೃತಳಾಗಿ ಬರಲೆಂದು ರಾಮ ಆದೇಶಿಸಿದ್ದು, ಇವೆಲ್ಲ ರಾಮಾಯಣದ ಮೂಲಕಥೆಯೇ. ತನ್ನ ಸಖಿ ಸುಕೇಶಿ ಎದೆಹಾಲಿನ ಮಹತ್ವದ ಬಗ್ಗೆ ಹೇಳುವ ಮಾತನ್ನು ಸೀತೆ ನೆನೆಯುತ್ತಾಳೆ. ‘ಊರ್ವಿುಳೆಯಲ್ಲಿರುವ ಆತ್ಮವಿಶ್ವಾಸ ನನ್ನಲ್ಲಿಲ್ಲ. ಏಕೆಂದರೆ ನಾನು ತಾಯಿಯ ಹಾಲು ಕುಡಿದು ಬೆಳೆದ ಮಗುವಲ್ಲ’. ತಾಯಿಯ ಹಾಲು ಕುಡಿದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚೆಂಬ ಅರಿವು ಸೀತೆಗೆ ಉಂಟಾಗಿ ತನ್ನ ಮಕ್ಕಳಿಗೆ ಹಾಲುಣಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತಾಳೆ. ಇವೆಲ್ಲ ಸಹಜ ಪ್ರಕ್ರಿಯೆಗಳು. ಸೀತೆಯ ಪ್ರತಿ ನಡೆಯೂ ವಾಲ್ಮೀಕಿ ರಾಮಾಯಣದಲ್ಲಿ ವ್ಯಕ್ತವಾಗಿದೆ. ಅದರಲ್ಲಿಲ್ಲದ ಸೀತೆಯ ಮನಸ್ಸಿನ್ನ ಅಂತರಾಳವನ್ನು ಉತ್ತರಕಾಂಡದಲ್ಲಿ ಸೇರಿಸಿಲ್ಲ. ಮೂಲ ರಾಮಾಯಣದ ಅಂಶಗಳನ್ನೇ ತೆಗೆದುಕೊಂಡು ನಾನು ಸಾಮಾನ್ಯ ಮನುಷ್ಯನ ಸಹಜ ಜೀವನಕ್ಕೆ ಹೊಂದುವಂತೆ ಕಥೆ ಬೆಳೆಸಿದ್ದೇನೆ.

    * ಸೀತೆಯ ಧ್ವನಿಯು ಫೆಮಿನಿಸಂ ಹೆಸರಿನಲ್ಲಿ ನಡೆಯುತ್ತಿರುವ ಪುರುಷವಿರೋಧಿ ಆಂದೋಲನಕ್ಕೆ ಪೂರಕವಾಗುವ ಸಾಧ್ಯತೆ ಇದೆಯೇ?

    -ಸೀತೆ ಯಾವತ್ತೂ ಪುರುಷವಿರೋಧಿ ಆಗಲೇ ಇಲ್ಲ. ಅವಳ ಅಸಮಾಧಾನವೇನಿದ್ದರೂ ರಾಮನ ಕೆಲವು ನಿರ್ಧಾರಗಳ ಬಗ್ಗೆ ಮಾತ್ರ. ತಂದೆ ಜನಕ ಮಹಾರಾಜ, ಆಶ್ರಯ ಕೊಟ್ಟ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಗೌರವವಿತ್ತು, ಮೈದುನ ಲಕ್ಷ್ಮಣನ ಮೇಲೆ ಅಂತಃಕರಣ ಇದ್ದೇ ಇತ್ತು. ‘ಇಡೀ ಪುರುಷಜಾತಿಯೇ ನಮ್ಮ ಶತ್ರು. ಪುರುಷಜಾತಿಯಿಂದ ದೂರ ಇರಬೇಕೆಂಬ’ ಪಾಶ್ಚಾತ್ಯ ಆಧುನಿಕ ಫೆಮಿನಿಸ್ಟ್ ರೋಷವು ಸೀತೆಯಲ್ಲಿ ಇರಲಿಲ್ಲ.

    * ಭಾರತೀಯ ನೆಲೆಯ ಸ್ತ್ರೀವಾದದ ಪ್ರತೀಕ ಉತ್ತರಕಾಂಡವೇ? ಹಾಗಾದರೆ ಭಾರತೀಯ ನೆಲೆಯಲ್ಲಿ ಸ್ತ್ರೀವಾದ ಎಂಬುದೊಂದು ಇದೆಯೇ? ಇದ್ದರೆ ಹೇಗೆ?

    -ಪಶ್ಚಿಮ ದೇಶದಲ್ಲಿರುವ ಸ್ತ್ರೀವಾದವೇ ಬೇರೆ, ಭಾರತದ ಸ್ತ್ರೀವಾದವೇ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೇ ಸ್ತ್ರೀಯರಿಗೆ ಮತದಾನದ ಹಕ್ಕು ಕೊಟ್ಟಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು, ಅನೇಕ ಮಹಿಳೆಯರು ರಾಯಭಾರಿಗಳಾಗಿದ್ದಾರೆ. ನಮ್ಮ ದೇಶದ ಮನೆಗಳಲ್ಲಿ ಯಜಮಾನಿಕೆ ನಡೆಯುವುದು ಹೆಣ್ಣಿನಿಂದಲೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಶೇಕಡ 30ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಾಲಿಡುತ್ತಿದ್ದಾರೆ. ಸಮಾನ ವಿದ್ಯಾಭ್ಯಾಸ ನೀಡುವ ಮನಸ್ಥಿತಿ ಅಧಿಕವಾಗಿದೆ. ಆದ್ದರಿಂದ ಭಾರತೀಯ ನೆಲೆಯ ಸ್ತ್ರೀವಾದ ಎಂಬುದು ಸರಿಯಲ್ಲ. ಸ್ವೇಚ್ಛೆಯನ್ನೇ ಸ್ತ್ರೀವಾದ ಎಂದು ಒಪ್ಪುವವರು ವಿದೇಶಿಯರು. ನಮ್ಮ ದೇಶದಲ್ಲಿ ಸಂಸ್ಕೃತಿ, ಕೌಟುಂಬಿಕ ಬಂಧಗಳ ಗಟ್ಟಿತನ, ಸೋದರ ಸಂಬಂಧಗಳ ಬೆಸುಗೆ ಇವೆಲ್ಲಕ್ಕೂ ಗೌರವದ ಸ್ಥಾನವಿದೆ. ಆದ್ದರಿಂದ ಭಾರತದಲ್ಲಿ ಪಶ್ಚಿಮ ದೇಶಗಳಲ್ಲಿರುವಂಥ ಸ್ತ್ರೀವಾದ ಗಟ್ಟಿಯಾಗಿ, ವ್ಯಾಪಕವಾಗಿ ಬೇರುಬಿಟ್ಟಿಲ್ಲ.

    * ಅನೇಕ ಲೇಖಕರು ರಾಮಾಯಣ, ಮಹಾಭಾರತದಂಥ ಕಾವ್ಯಗಳನ್ನು ವಿಶ್ಲೇಷಿಸಿದಾಗ ಟೀಕೆಯ ಮಾತುಗಳು ಕೇಳಿಬರುತ್ತವೆ. ಆದರೆ ಭೈರಪ್ಪನವರು ಬರೆದಾಗ ಸಮಾಜ ಸ್ವೀಕರಿಸುತ್ತದೆ. ಕಾವ್ಯಗಳನ್ನು ಕಾದಂಬರಿಯಾಗಿಸುವಾಗ ಲೇಖಕನ ವೈಯಕ್ತಿಕ ಜೀವನವೂ ಗಣನೆಗೆ ಬರಬಹುದೇ?

    -ನವ್ಯ ಸಾಹಿತ್ಯ ಬಂದ ಮೇಲೆ ಲೇಖಕ ತನ್ನ ದೌರ್ಬಲ್ಯಗಳನ್ನು ಹೊರ ಪ್ರಪಂಚಕ್ಕೆ ತಿಳಿಯುವಂತೆ ಘೊಷಿಸಿಕೊಳ್ಳುವುದು ಹೆಚ್ಚಾಗಿದೆ. ತಮ್ಮಲ್ಲೇ ದೌರ್ಬಲ್ಯಗಳಿರುವ ಮನುಷ್ಯ ಶುದ್ಧತೆಗೆ ಹೆಸರಾದ ಸೀತೆಯ ಕಥೆ ಬರೆದಾಗ ಅವಳಲ್ಲಿಯೂ ಆ ದೌರ್ಬಲ್ಯಗಳನ್ನು ಆರೋಪಿಸುತ್ತಾನೆ. ಅವಳ ಘನತೆಯನ್ನು ನಾಶಪಡಿಸುತ್ತಾನೆ. ಇದನ್ನು ಜನತೆ ಒಪ್ಪುವುದಿಲ್ಲ. ಆದರೆ ನನ್ನ ಕೃತಿಗಳನ್ನು ಜನತೆ ಒಪ್ಪಿಕೊಂಡಿದೆ. ಕಾರಣ ನಾನು ನಮ್ಮ ದೇಶದ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದೇನೆ. ಸಮಾಜದ ಸಂಸ್ಕೃತಿ ಆಧುನಿಕ ಕಾಲಕ್ಕೆ ಯಾವ ರೀತಿ ಇರಬೇಕು ಎಂಬುದಷ್ಟನ್ನೇ ನಾನು ವಿವರಿಸಿ ಬರೆಯುತ್ತೇನೆ. ನಮ್ಮ ದೇಶದ ಸಂಸ್ಕೃತಿಯನ್ನು ಲೇಖಕ ಒಪ್ಪುವುದಾದರೆ ಅದರ ಆಧಾರದ ಮೇಲೆ ಅವನು ವಿಮರ್ಶೆಗಳನ್ನು ಮಾಡಲು ಯೋಗ್ಯ. ಆದ್ದರಿಂದ ವೈಯಕ್ತಿಕ ಜೀವನ, ಬರವಣಿಗೆಯ ಮೇಲೆ ಮತ್ತು ಓದುಗರು ಕೃತಿಗಳನ್ನು ಸ್ವೀಕರಿಸುವುದರ ಮೇಲೆ ಪ್ರಭಾವ ಬೀರುತ್ತದೆ.

    * ತಾವೇ ಒಮ್ಮೆ ಹೇಳಿದಂತೆ ‘ಅಂಚು’ ಕಾದಂಬರಿ ಕುರಿತು ಕರ್ನಾಟಕದಲ್ಲಿ ಚರ್ಚೆ ನಡೆಯಲೇ ಇಲ್ಲ. ಇತರ ಲೇಖಕರ ಕೃತಿಗಳೂ ಹೀಗೆ ಆಗುತ್ತಿವೆ. ಸಾಹಿತ್ಯ ವಲಯದಲ್ಲಿ ಈ ಮೌನದ ಕುರಿತು ತಮ್ಮ ಅಭಿಪ್ರಾಯ?

    -ನನ್ನ ಪುಸ್ತಕಗಳ ಮೇಲೆ 30ಕ್ಕೂ ಹೆಚ್ಚು ವಿಮರ್ಶಾತ್ಮಕ ಪುಸ್ತಕಗಳು ಬಂದಿವೆ. ‘ಅಂಚು’ ಕಾದಂಬರಿ ನನ್ನ ಬೇರೆಲ್ಲ ಕಾದಂಬರಿಗಳಿಗಿಂತ ಭಿನ್ನವಾಗಿದೆ. ಈ ಕಾದಂಬರಿ ತಕ್ಷಣಕ್ಕೆ ಅರ್ಥವಾಗದೆ ‘ಇದೊಂದು ಬೇರೆ ರೀತಿಯ ಕಾದಂಬರಿ’ ಎಂದು ಅನೇಕರು ಹೇಳಿದ್ದಾರೆ. ‘ಅದನ್ನು ಬೇರೆ ರೀತಿಯಲ್ಲೇ ಓದಿ ಅರ್ಥೈಸಿಕೊಳ್ಳಬೇಕು’. ಮುಂಬೈನ ಮನಃಶಾಸ್ತ್ರಜ್ಞೆ ಅಂಜಲಿ ಜೋಷಿ ಎಂಬುವವರು ‘ಅಂಚು’ ಕಾದಂಬರಿ ಗುಣಮಟ್ಟದ್ದೆಂದು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾರೂ ಈ ರೀತಿ ವಿಶ್ಲೇಷಣೆ ಮಾಡಲೇ ಇಲ್ಲ. ಕಾರಣ ಮನಃಶಾಸ್ತ್ರ ಓದಿರುವವರು ಕಡಿಮೆ ಇರಬಹುದೋ ಅಥವಾ ಕನ್ನಡ ಮನಃಶಾಸ್ತ್ರಜ್ಞರು ‘ಅಂಚು’ ಕಾದಂಬರಿಯನ್ನು ಓದಿಲ್ಲದೇ ಇರಬಹುದು.

    * ಸೀತಾರಾಮ, ರಾಜಾರಾಮನಾಗುವ ಸಂದರ್ಭದಲ್ಲಿ ಅವನಲ್ಲಿ ಬದಲಾವಣೆಗಳು ಕಂಡವು ಎಂದು ಹೇಳಿದ್ದೀರಿ. ರಾಜನಾಗಿಯೂ ರಾಮನು ಒಬ್ಬ ಪತಿಯಾಗಿಯೇ ನಡೆದುಕೊಂಡಿದ್ದರೆ, ರಾಮ ಪೂಜ್ಯನಾಗುತ್ತಿದ್ದನೇ?

    -ರಾಮನಿಗೆ ಸೀತೆ ಶುದ್ಧಳೆಂದು ಗೊತ್ತಿತ್ತು. ಕಾವಲು ಕಾಯುತ್ತಿದ್ದ ರಾಕ್ಷಸ ಹೆಂಗಸರು, ವಿಭೀಷಣನ ಹೆಂಡತಿ ಇವರೆಲ್ಲ ಸೀತೆಯ ಶುದ್ಧತೆಗೆ ಸಾಕ್ಷಿ ಹೇಳಿದರೂ ರಾಮ ಈ ಸಾಕ್ಷಿಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾನೆ. ಅದು ರಾಮನಿಗೆ ಸಲ್ಲುವಂಥ ಮಾತೇ ಎಂಬ ಪ್ರಶ್ನೆ ಹುಟ್ಟುತ್ತೆ. ಭರತನ ಆಡಳಿತದಲ್ಲಿ ಪ್ರಜೆಗಳು ತೆರಿಗೆ ಕಟ್ಟದೇ ಬೊಕ್ಕಸ ಬರಿದಾಗಿತ್ತು. ರಾಮ ಸುಸೂತ್ರವಾಗಿ ರಾಜ್ಯ ನಡೆಸಬೇಕಾದರೆ ಬೊಕ್ಕಸಕ್ಕೆ ಬರುವಂಥ ತೆರಿಗೆ ಸಲ್ಲಬೇಕು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಅನೇಕರು ಸೀತೆಯ ಶುದ್ಧತೆಯ ಪ್ರಶ್ನೆ ಎತ್ತುತ್ತಾರೆ. ರಾಜನಾಗಿದ್ದವನು ಗೂಢಚಾರರನ್ನು ಬಿಟ್ಟು ಅಂಥ ವದಂತಿ ಹಬ್ಬಿಸುವವರಿಗೆ ಶಿಕ್ಷೆ ಕೊಟ್ಟಿದ್ದರೆ ಜನರು ಸುಮ್ಮನಾಗುತ್ತಿದ್ದರು. ಆದರೆ ಸೀತೆಯನ್ನು ಕಾಡಿಗೆ ಕಳಿಸಿ, ಇಬ್ಬರೂ ದುಃಖ ಅನುಭವಿಸುವ ಮೂಲಕ ಜನತೆಗೆ ಆದರ್ಶವನ್ನು ತೋರಿಸಬೇಕೆಂದು ರಾಮ ಯೋಚಿಸಿದ. ವದಂತಿ ಹಬ್ಬಿಸಿದ ಪ್ರಜೆಗಳು ಸಹ ರಾಮ ಹೆಂಡತಿಯನ್ನು ತ್ಯಜಿಸಿದ್ದು ನೋಡಿ, ‘ಸೀತೆ ಶುದ್ಧಳಲ್ಲವೆಂದು ರಾಮನು ಒಪ್ಪಿದನು’ ಎಂದು ತಿಳಿಯಬಹುದಿತ್ತಲ್ಲವೇ? ‘ಜನಕನ ಹೆಂಡತಿಯ ಗರ್ಭಸಂಜಾತೆ ಅಲ್ಲದ ಸೀತೆಯನ್ನು ಮದುವೆ ಆಗಬಾರದು’ ಎಂದು ದಶರಥ ಹೇಳಿದ್ದನ್ನು ವಿರೋಧಿಸಿ, ‘ನಾನು ಬಿಲ್ಲು ಮುರಿದಿದ್ದೇನೆ, ಮದುವೆ ಆಗುವುದಾದರೆ ಸೀತೆಯನ್ನು ಮಾತ್ರವೇ’ ಎಂದು ತಿಳಿಸಿದ್ದ ರಾಮ. ಆದರ್ಶ ರಾಮನ ಗುಣಗಳು ರಾಜ್ಯಭಾರ ಮಾಡುವ ಹೊತ್ತಿಗೆ ಬದಲಾವಣೆಯಾಗಿದ್ದವು ಎಂಬುದು ನನ್ನ ಭಾವನೆ. ಆದ್ದರಿಂದ ಮೊದಲು ಸೀತಾರಾಮನಾಗಿದ್ದವನು ನಂತರದಲ್ಲಿ ರಾಜಾರಾಮನಾದ. ರಾಮನ ಅವತಾರವನ್ನು ಒಪ್ಪಿಕೊಂಡರೆ ‘ಪೂಜ್ಯ’ ಎನ್ನಬಹುದು. ಅವನೊಬ್ಬ ಸಾಮಾನ್ಯ ಮನುಷ್ಯ ಎಂದು ಭಾವಿಸಿದರೆ ‘ಒಳ್ಳೆಯ ಮನುಷ್ಯ’ ಎನ್ನಬಹುದು. ಪೂಜ್ಯ ಎಂಬ ಶಬ್ದ ಇಲ್ಲಿ ಹೊಂದುವುದಿಲ್ಲ.

    * ಉತ್ತಮ ಕಾದಂಬರಿಕಾರನಾಗಲು ಜನಸಂಪರ್ಕ, ಓದು, ಪ್ರವಾಸಗಳಲ್ಲಿ ಯಾವುದರ ಕುರಿತು ಹೆಚ್ಚು ಗಮನ ಕೇಂದ್ರೀಕರಿಸಬೇಕು?

    -ಪುಸ್ತಕದ ಓದು, ಪ್ರವಾಸ, ಜನಸಂಪರ್ಕ ಎಲ್ಲವೂ ಕಾದಂಬರಿಕಾರನಿಗೆ ಮುಖ್ಯ. ನನ್ನ ಅನುಭವದಲ್ಲಿ ವಸ್ತುವನ್ನು ನಾನಾಗಿಯೇ ಆಯ್ಕೆ ಮಾಡಲ್ಲ. ಅದು ತಾನೇ ಹುಟ್ಟುತ್ತೆ. ತಾನೇ ಬೆಳೆಯುತ್ತೆ. ನಂತರದಲ್ಲಿ ನಾನು ಬರೆಯಲು ತೊಡಗುತ್ತೇನೆ. ನನ್ನ ಅನುಭವದಿಂದಲೇ ಪಾತ್ರಗಳು ಸೃಷ್ಟಿಯಾಗುವುದು.

    * ಭಾರತದ ಮಹಾಕಾವ್ಯಗಳ ಆಧಾರಿತ ಕಾದಂಬರಿಗಳು ಕನ್ನಡದಿಂದ ಇಂಗ್ಲಿಷ್​ಗೆ ಭಾಷಾಂತರವಾಗುವಾಗಿನ ಸಂದರ್ಭದ ಕುರಿತು ಏನು ಹೇಳುತ್ತೀರಿ?

    -ಭಾರತದ ಯಾವುದೇ ಭಾಷೆಯ ಕಾದಂಬರಿಗಳು ಇಂಗ್ಲಿಷ್​ಗೆ ಅನುವಾದವಾಗುವುದು ಭಾರತದಲ್ಲಿರುವ ಓದುಗರಿಗಾಗಿಯೇ ಹೊರತು ಹೊರದೇಶದ ಜನಗಳಿಗಲ್ಲ. ಏಕೆಂದರೆ ಅನ್ಯದೇಶಗಳ ಜನಕ್ಕೆ ರಾಮಾಯಣ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಪರದೇಶದ ಮೂಲ ಅನುವಾದಕರು ಮತ್ತು ಭಾರತೀಯ ಇಂಗ್ಲಿಷ್ ಅನುವಾದಕರು ಸೇರಿ ಕೃತಿಗಳನ್ನು ಅನುವಾದ ಮಾಡಬೇಕು. ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಹೆಚ್ಚು ಕಷ್ಟವಲ್ಲ. ಇನ್ನೂರು ವರ್ಷ ಇಂಗ್ಲಿಷ್ ಭಾಷೆ ನಮ್ಮನ್ನು ಆಳಿದರೂ ಭಾಷೆಯ ಬೇರು ಆದ ಸಂಸ್ಕೃತಿಗಳು ದೂರದೂರಾದವು. ಆದ್ದರಿಂದ ಭಾರತೀಯ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಅನುವಾದ ಬಹಳ ಕಷ್ಟ.

    * ಅನ್ಯ ಭಾಷೆ, ಸಂಸ್ಕೃತಿಗಳ ಅನುವಾದಿತ ಕೃತಿ ಓದುವಾಗಿನ ನಮ್ಮ ಮಾನಸಿಕ ಸಿದ್ಧತೆ ಹೇಗಿರಬೇಕು?

    -ಉದಾಹರಣೆಗೆ ರಷ್ಯನ್ನಿನಿಂದ ಅನುವಾದ ಕೃತಿ ಓದುತ್ತೇವೆ ಎಂದಿಟ್ಟುಕೊಳ್ಳೋಣ. ಚಳಿ ಎಂದು ಅದರಲ್ಲಿ ಬರೆದಿದ್ದರೆ, ಅಲ್ಲಿನ ಚಳಿ ಎಂಥದ್ದು? ಎಂಬುದು ತಿಳಿದಿರಬೇಕು. ಅಲ್ಲಿನ ಚಳಿ ಮೈನಸ್ 15ರಿಂದ 20 ಡಿಗ್ರಿ ಸೆಲ್ಸಿಯಸ್​ವರೆಗೆ ಇರುತ್ತೆ. ರಷ್ಯಾ ಪ್ರವಾಸ ಮಾಡಿದ್ದರೆ ಸರಿ. ಇಲ್ಲದಿದ್ದರೆ ಆ ವಾತಾವರಣದ ಫೋಟೋ, ವಿವರಗಳನ್ನಾದರೂ ತಿಳಿದಿರಬೇಕು. ಸಂಸ್ಕೃತಿಯಲ್ಲಿನ ಭಿನ್ನತೆಯನ್ನು ಅರಿತು ಓದಬೇಕು.

    * ಇನ್ನು 20-30 ವರ್ಷ ನಂತರ ಸೀತೆಯನ್ನು ಮತ್ತೊಬ್ಬರು ಚಿತ್ರಿಸಲು ಮುಂದಾದರೆ ಅಂದಿನ ಸಮಾಜಕ್ಕೆ ಧ್ವನಿ ಬದಲಾಗುತ್ತದೆಯೇ? ಅಥವಾ ಕಾದಂಬರಿಯು ಮಾನವನ ಸಾರ್ವಕಾಲಿಕ ಸ್ವಭಾವವನ್ನು ಧ್ವನಿಸಿದೆಯೇ?

    -ಇದು ಸಾರ್ವಕಾಲಿಕ. ನಾನು ‘ವಂಶವೃಕ್ಷ’ಕ್ಕೆ ಹಿನ್ನುಡಿ ಬರೆದಿದ್ದೇನೆ. ಅದಕ್ಕೆ ‘ಯುಗಸಂಧಿ’ ಅಂತ ಹೆಸರಿಟ್ಟಿದ್ದೇನೆ. ಒಂದು ಸಮಾಜದ ನಂಬಿಕೆ ಯಾವಾಗ ಪೂರ್ತಿಯಾಗಿ ಬದಲಾಗುತ್ತೋ, ಆಗ ಮಾತ್ರ ಹೊಸ ಯುಗ ಎಂದು ಕರೆಯುವುದು. ರಾಮಾಯಣವನ್ನು ಹೊರತುಪಡಿಸಿ ನಮ್ಮ ಇಡೀ ಸಮಾಜದ ಆದರ್ಶ ಹೆಣ್ಣು ಎಂಬ ಕಲ್ಪನೆ ಬದಲಾದರೆ, ಮುಂದೆ ಬದಲಾದ ಸಮಾಜದಲ್ಲಿ ರಾಮಾಯಣ ಓದಿದರೆ ಸೀತೆ ಮತ್ತು ರಾಮನ ಪಾತ್ರ ಮತ್ತಷ್ಟು ಭಿನ್ನವಾಗಿ ಕಾಣಬಹುದು.

    * ಪ್ರಸ್ತುತ ಸಂದರ್ಭದ ಬಗ್ಗೆ ಕೇಳುವುದಾದರೆ, ಅಂತಧರ್ವಿುಯ/ ಅನ್ಯ ನಂಬಿಕೆಗಳ ನಡುವೆ ಮದುವೆ ಆಗುವುದನ್ನು ತಡೆಯುವುದು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎನ್ನಲಾಗುತ್ತಿದೆಯಲ್ಲ?

    -ಲವ್ ಜಿಹಾದ್ ಮೂಲಕವೂ ಮುಸ್ಲಿಮರು ಆಕ್ರಮಣ ನಡೆಸುತ್ತಿರುತ್ತಾರೆ. ಮುಸ್ಲಿಮರಲ್ಲಿ ಸ್ತ್ರೀಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲ. ಆದರೆ ಹಿಂದೂಗಳಲ್ಲಿ ಹೆಣ್ಣುಮಕ್ಕಳಿಗೆ ನಿರ್ಬಂಧಗಳು ಕಡಿಮೆ. ಇದನ್ನೇ ಬಳಸಿಕೊಳ್ಳುವ ಮುಸ್ಲಿಂ ಹುಡುಗರು ಅವರ ಸ್ನೇಹ ಸಂಪಾದಿಸಿ, ಹೋಟೆಲ್, ಪಾರ್ಕಗಳಲ್ಲಿ ಸುತ್ತಾಡುತ್ತಾರೆ. ಲೈಂಗಿಕ ಆಸಕ್ತಿ ಕೆರಳುವ ವಯಸ್ಸಿನಲ್ಲಿರುವ ಹೆಣ್ಣುಮಕ್ಕಳು ಇದನ್ನು ನಿಜವೆಂದು ನಂಬುತ್ತಾರೆ. ಫೋಟೋಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ. ಮದುವೆ ಆಗಲು ಹುಡುಗಿ ಒಪ್ಪದಿದ್ದಾಗ ಫೋಟೋಗಳನ್ನು ತೋರಿಸಿ ಬೆದರಿಸುತ್ತಾರೆ, ತಮ್ಮ ಮತಕ್ಕೆ ಮತಾಂತರವಾಗುವಂತೆ ಮನವೊಲಿಸುತ್ತಾರೆ. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಾನೂನು ರೂಪಿಸಿದೆ. 18 ವರ್ಷವಾದ ಹೆಣ್ಣು ಮಕ್ಕಳು, 21 ವರ್ಷವಾದ ಗಂಡು ಮಕ್ಕಳು ತಮಗಿಚ್ಛೆ ಬಂದವರನ್ನು ಮದುವೆಯಾಗಲು ಸಂವಿಧಾನಬದ್ಧ ಅಧಿಕಾರವಿದೆ. ನ್ಯಾಯಾಲಯದಲ್ಲಿ ಈ ಕಾನೂನು ಮಾನ್ಯತೆ ಕಳೆದುಕೊಳ್ಳಬಹುದು. ಹಿಂದೂ ಸಮಾಜ ಒಗ್ಗೂಡುವುದೊಂದೇ ಈ ಸಮಸ್ಯೆಗೆ ಪರಿಹಾರ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    35 ಲಕ್ಷ ರೂ. ವರೆಗಿನ ಫ್ಲ್ಯಾಟ್ ಖರೀದಿ ಮುದ್ರಾಂಕ ಶುಲ್ಕ ಶೇ. 2-3ರಷ್ಟು ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts