More

    ಸುಂದರಿ ಸಕ್ಕರೆ ಕಾರ್ಖಾನೆಗೆ ತಿಂಗಳೊಳಗೆ ಕಾಯಕಲ್ಪ

    ಕಂಪ್ಲಿ: ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆಗೆ ತಿಂಗಳೊಳಗೆ ಕಾಯಕಲ್ಪ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

    ಇಲ್ಲಿನ ಚಪ್ಪರದಳ್ಳಿಯಲ್ಲಿ ಪ್ರಧಾನಮಂತ್ರಿ ಆವಾಸ್ ಹಾಗೂ ಸರ್ವರಿಗೂ ಸೂರು ಯೋಜನೆಯಡಿ ಕ.ಕೊ.ಅ.ಮಂಡಳಿಯಿಂದ ಮಂಜೂರಾದ 500 ಮನೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಯ 176 ಎಕರೆ ಭೂಮಿಯನ್ನು ನಾನು ಲೂಟಿ ಹೊಡೆದಿರುವ ಬಗ್ಗೆ ಕೆಲವರು ಮಾತನಾಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲವೆಂದು ಹಾಲಿ ಶಾಸಕರ ವಿರುದ್ಧ ಸೂಚ್ಯವಾಗಿ ಹರಿಹಾಯ್ದರು. ಉದ್ಯೋಗ ಮಿತ್ರ ಯೋಜನೆಯಡಿ ಕೇಂದ್ರದಿಂದ ಸಕ್ಕರೆ ಕಾರ್ಖಾನೆಗೆ ಪರವಾನಗಿ ದೊರಕಿದೆ. ಏಪ್ರಿಲ್‌ನೊಳಗೆ ಸಕ್ಕರೆ ಕಾರ್ಖಾನೆಗೆ ಅಗತ್ಯ ಕಬ್ಬು ಬೆಳೆಯಲು ರೈತರ ಸಭೆ ಕರೆದು ಬೀಜ, ಗೊಬ್ಬರ ಮತ್ತಿತರ ಪರಿಕರ ಒದಗಿಸಲಾಗುವುದು. ಕಾರ್ಖಾನೆ ಜಾಗದ ತೆರಿಗೆ 94 ಲಕ್ಷ ರೂ. ಪುರಸಭೆಗೆ ಪಾವತಿಸಲಾಗಿದ್ದು, ಕಾರ್ಖಾನೆಗೆ 176 ಎಕರೆ ಜಾಗ ಪಡೆದುಕೊಂಡಿರುವುದು ಅಧಿಕೃತವಾಗಿದೆ ಎಂದರು.

    ಕರೊನಾ ದೆಸೆಯಿಂದ ಬಜೆಟ್‌ನಲ್ಲಿ ಬಹಳಷ್ಟು ನಿರೀಕ್ಷಿಸುವುದು ಕಷ್ಟ ಎಂದ ಅವರು, ಬಿಇಒ ಕಚೇರಿ ಆರಂಭಕ್ಕೆ, ಎಪಿಎಂಸಿ ಉಪಮಾರುಕಟ್ಟೆಯನ್ನು ಸ್ವತಂತ್ರ ಮಾರುಕಟ್ಟೆಯನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದರು.

    ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ಜಿ. ಕೃಷ್ಣರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಲಾ 6.85 ಲಕ್ಷ ರೂ.ಗಳಂತೆ 360 ಚ.ಅಡಿಗಳಲ್ಲಿ 2909 ಮನೆಗಳ ನಿರ್ಮಾಣಗೊಳ್ಳಲಿವೆ. ಫಲಾನುಭವಿ 1.83 ಲಕ್ಷ ರೂ.ಗಳನ್ನು 20 ವರ್ಷಗಳಲ್ಲಿ ಪಾವತಿಸಲು ಅವಕಾಶವಿದೆ ಎಂದರು.

    ತಹಸೀಲ್ದಾರ್ ಗೌಸಿಯಾಬೇಗಂ, ಸಿಒ ಡಾ.ಎನ್. ಶಿವಲಿಂಗಪ್ಪ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ, ಉಪಾಧ್ಯಕ್ಷೆ ಕೆ.ನಿರ್ಮಲಾ, ಸದಸ್ಯರಾದ ವಿ.ಎಲ್. ಬಾಬು, ಎನ್. ರಾಮಾಂಜನೇಯಲು, ಸಿ.ಆರ್. ಹನುಮಂತ, ಟಿ.ವಿ. ಸುದರ್ಶನರೆಡ್ಡಿ, ಆರ್. ಆಂಜನೇಯ, ರಮೇಶ್ ಹೂಗಾರ್, ಹೇಮಾವತಿ, ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಮುಖರಾದ ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಜಿ. ಸುಧಾಕರ, ಬಿ.ಸಿದ್ದಪ್ಪ ಇತರರಿದ್ದರು.

    ಎರಡು ಬಾರಿ ಭೂಮಿಪೂಜೆ
    ತಾವು ಓಡಾಡಿ ಅನುದಾನ ತಂದಿರುವ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೂಮಿಪೂಜೆ ನೆರವೇರಿಸುವುದನ್ನು ಸಹಿಸಲಾರದೆ ಶಾಸಕ ಶಾಸಕ ಜೆ.ಎನ್. ಗಣೇಶ್ ಅವರು, ಸಚಿವ ಶ್ರೀರಾಮುಲು ಬುಧವಾರ ಕಾರ್ಯಕ್ರಮದ ಉದ್ಘಾಟನೆಗೆ ಬರುವ ವಿಚಾರ ತಿಳಿದು ಮಂಗಳವಾರವೇ 500 ಮನೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಇದೇ ಕಾಮಗಾರಿಗೆ ಮತ್ತೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಗಣೇಶ್ ವಹಿಸಬೇಕಿತ್ತು. ಈ ಕುರಿತು ಅವರಿಗೆ ಆಹ್ವಾನಪತ್ರಿಕೆ ಸಹ ತಲುಪಿಸಲಾಗಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಗಣೇಶ್ ಅವರು ಶಿಷ್ಟಾಚಾರ ಉಲ್ಲಂಘಿಸಿ 18 ಕಾರ್ಯಕ್ರಮ ಮಾಡಿದ್ದಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಡಿಸಿ ಗಮನಕ್ಕೆ ತಂದಿದ್ದೇನೆ ಎಂದು ಬಿ.ಶ್ರೀರಾಮುಲು ಹೇಳಿದರು. ಸಭೆಗೆ ಆಗಮಿಸಿದ್ದ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ವೇದಿಕೆಗೆ ಬರುವುದಿಲ್ಲ ಎಂದು ಮುಂದಿನ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts