More

    ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಭರ್ತಿಗೆ ಒಂದೇ ಅಡಿ ಬಾಕಿ!; ಸೂಳೆಕೆರೆ ಸದ್ಯದಲ್ಲೇ ಕೋಡಿ ಬೀಳುವ ಸಾಧ್ಯತೆ

    ಟಿ.ಎನ್.ಜಗದೀಶ್ ಚನ್ನಗಿರಿ
    ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಶಾಂತಿಸಾಗರ (ಸೂಳೆಕೆರೆ) ಭರ್ತಿಗೆ ಕೇವಲ ಒಂದೇ ಅಡಿ ಬಾಕಿ ಇದ್ದು, ಕೋಡಿ ಬೀಳುವ ಸಾಧ್ಯತೆ ಇದೆ.

    ತಾಲೂಕಿನ ವಿವಿಧೆಡೆ ಒಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು, ಎಲ್ಲ ಕೆರೆ-ಕಟ್ಟೆಗಳು ತುಂಬಿವೆ. ಚನ್ನಗಿರಿಯ ಹರಿದ್ರಾವತಿ ಹಳ್ಳ ಮತ್ತು ಸಂತೇಬೆನ್ನೂರು ಬಳಿಯ ಹಿರೇಹಳ್ಳ ತುಂಬಿ ಹರಿದು ಸೂಳೆಕೆರೆ ಸೇರುತ್ತದೆ. ಅಲ್ಲದೇ ಭದ್ರಾ ನಾಲೆಯಿಂದಲೂ ನೀರು ಹರಿಯುತ್ತಿದೆ. ಎರಡೂ ಜಲಮೂಲಗಳಿಂದ ಕೆರೆ ತುಂಬಿ ಕೋಡಿ ಬೀಳುವ ಹಂತ ತಲುಪಿದೆ.

    ಅಂದಾಜು 650 ಹೆಕ್ಟೇರ್ ವಿಸ್ತೀರ್ಣದ ಸೂಳೆಕೆರೆಯಲ್ಲಿ 26 ಅಡಿ ನೀರು ಸಂಗ್ರಹವಾಗಿದೆ. 2013 ಮತ್ತು 2021ರಲ್ಲಿ ಕೆರೆ ಕೋಡಿ ಬಿದ್ದಿತ್ತು. 2018ರಲ್ಲಿ ಮಳೆ ಸರಿಯಾಗಿ ಬೀಳದೆ ಕೆರೆ ನೆಲ ಕಾಣುವಷ್ಟರ ಮಟ್ಟಿಗೆ ಬರಿದಾಗಿತ್ತು. ಈ ಸಾಲಿನಲ್ಲಿ ಉತ್ತಮ ಮಳೆಯಿಂದ ಕೆರೆಗೆ ಅಧಿಕ ಪ್ರಮಾಣದಲ್ಲಿ ನೀರು ಸೇರುತ್ತಿದೆ.

    ಕೆರೆ ತುಂಬಿರುವ ಕಾರಣ ತಾಲೂಕಿನ ಕೆರೆ ಬಿಳಚಿ, ಹೊಸೂರು, ಕಬ್ಬಳ, ಕಗತೂರು ಮತ್ತಿತರ ಕೆರೆ ಸುತ್ತಲಿನ ಗ್ರಾಮಗಳ 1600 ಎಕರೆಯಷ್ಟು ಪ್ರದೇಶ ಜಲಾವೃತವಾಗಿದೆ. ಕಗತೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಹಾಗೂ ಕೆಲ ಮನೆಗಳ ಬಳಿ ನೀರು ನಿಂತಿದೆ. ಮಳೆ ಹೀಗೇ ಮುಂದುವರಿದರೆ ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ಸುತ್ತಲಿನ ಜಮೀನುಗಳು ಕೆರೆ ಹಿನ್ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ.

    ಚನ್ನಗಿರಿ, ದುರ್ಗಕ್ಕೆ ನೀರು ಪೂರೈಕೆ: ಚನ್ನಗಿರಿ ಪಟ್ಟಣ ಮತ್ತು ತಾಲೂಕಿನ 72 ಗ್ರಾಮಗಳಿಗೆ ಕುಡಿಯುವ ನೀರು ಕೊಡಲಾಗಿದೆ. ಅಲ್ಲದೇ, ಹೊಳೆಲ್ಕೆರೆ, ಚಿತ್ರದುರ್ಗ, ಸಿರಿಗೆರೆ, ಭೀಮಸಮುದ್ರ ಮತ್ತಿತರ ಕಡೆಗೂ ಕುಡಿಯುವ ನೀರು ಒದಗಿಸಲಾಗುತ್ತದೆ.

    ಇನ್ನೊಂದು ದಿನದಲ್ಲಿ ಕೆರೆ ಕೋಡಿ ಬೀಳುತ್ತದೆ ಎಂದು ಕೆರೆಯಿಂದ ತೊಂದರೆ ಆಗುವಂತಹ ಜಮೀನಿನ ಮಾಲೀಕರು ಹಾಗೂ ಗ್ರಾಮದ ಮನೆ ಮಾಲೀಕರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಮೀನುಗಾರರು ಸ್ವಲ್ಪ ಸಮಯ ನೀರಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಕೇಳಲಾಗಿದೆ.
    ಡಾ.ಪಟ್ಟರಾಜಗೌಡ, ತಹಸೀಲ್ದಾರ್, ಚನ್ನಗಿರಿ

    ಗ್ರಾಮದ ಸುತ್ತಲಿನ 200ಕ್ಕೂ ಹೆಚ್ಚು ಎಕರೆ ಜಮೀನುಗಳಿಗೆ ನೀರು ಬಂದು ನಿಲ್ಲುತ್ತದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಮಾಹಿತಿ ಪಡೆಯಬೇಕು. ಕಳೆದ ಬಾರಿ ಕೆರೆ ತುಂಬಿದಾಗ 50ಕ್ಕೂ ಅಧಿಕ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
    ಮಲ್ಲಿಕಾರ್ಜುನ, ಕಗತೂರು ಗ್ರಾಮಸ್ಥ, ಚನ್ನಗಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts