More

    ಮನೆಯವರಿಗೆ ನಿದ್ರೆ ಮಾತ್ರೆ ನೀಡಿ ಮಹಿಳೆ ಆತ್ಮಹತ್ಯೆ

    ಮಂಗಳೂರು: ನಗರದ ಹೊರ ವಲಯದ ಶಕ್ತಿನಗರ ಪೊಲೀಸ್ ವಸತಿಗೃಹದ ಬಳಿ ಮಹಿಳೆಯೊಬ್ಬರು ತನ್ನ 10 ತಿಂಗಳ ಹೆಣ್ಣು ಮಗು, ಪುತ್ರ ಹಾಗು ತಾಯಿಗೆ ನಿದ್ರೆ ಮಾತ್ರೆ ನೀಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾತ್ರೆಯ ಪರಿಣಾಮದಿಂದ ಮಗು ಕೂಡ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
    ಪ್ರಮೀಳಾ ಶೆಟ್ಟಿ(38) ಆತ್ಮಹತ್ಯೆಗೆ ಶರಣಾದವರು. 10 ತಿಂಗಳ ಹೆಣ್ಣು ಮಗು ಐಶಾನಿ ಮೃತಪಟ್ಟಿದೆ. ಪತಿ ರವಿ(45) ಅವರು ಕೊಟ್ಟಾರದಲ್ಲಿ ಗ್ಯಾರೇಜ್ ಹೊಂದಿದ್ದು, ಕೆಲಸಕ್ಕೆ ಹೋಗಿದ್ದರು. ಪುತ್ರ ಆಶಿಶ್(14), ತಾಯಿ ಶಶಿಕಲಾ(60) ಹಾಗೂ ಮಗು ಮನೆಯಲ್ಲಿದ್ದರು. ಬೆಳಗ್ಗೆ 11ರ ವೇಳೆಗೆ ಅವರಿಗೆ ಪ್ರಮೀಳಾ ಮಾತ್ರೆ ಬೆರೆಸಿದ ಆಹಾರ ನೀಡಿದ್ದು, ಸೇವಿಸಿದವರು ಗಾಢ ನಿದ್ರೆಗೆ ಜಾರಿದ್ದರು. ಬಳಿಕ ಮನೆಯ ಕೋಣೆಯಲ್ಲಿ ಪ್ರಮೀಣಾ ನೇಣಿಗೆ ಶರಣಾಗಿದ್ದಾರೆ.

    ಸಂಜೆ 4ರ ವೇಳೆಗೆ ಶಶಿಕಲಾ ಅವರಿಗೆ ಎಚ್ಚರವಾಗಿದೆ. ನಿದ್ರೆಯ ಮಂಪರಿನಲ್ಲಿ ಎದ್ದು ನೋಡಿದಾಗ ಮಗಳು ನೇಣು ಬಿಗಿದುಕೊಂಡಿರುವುದು ಗಮನಕ್ಕೆ ಬಂದಿದೆ. ಎಳೆಯ ಮಗು ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ತಕ್ಷಣ ಕೂಗಿಕೊಂಡ ಅವರು ಸ್ಥಳೀಯರ ಸಹಕಾರದಲ್ಲಿ ಮಗುವನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ನಿದ್ರೆ ಮಂಪರಿನಲ್ಲಿದ್ದ ಉಳಿದಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಕಂಕನಾಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಡೆತ್ ನೋಟ್ ಪತ್ತೆ: ಮನೆಯಲ್ಲಿ ಪ್ರಮೀಳಾ ಶೆಟ್ಟಿ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಮನೆಯವರೆಲ್ಲರೂ ಒಳ್ಳೆಯವರು ಎಂಬುದಾಗಿ ಬರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಡೆತ್‌ನೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮೀಳಾ ಶೆಟ್ಟಿ ಮಗು ಸಹಿತ ಮನೆಯವರಿಗೆ ನಿದ್ರೆ ಮಾತ್ರೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆ ಇರಲಿಲ್ಲ. ಮನೆಯವರೆಲ್ಲರೂ ಅನ್ಯೋನ್ಯವಾಗಿದ್ದರು. ನೆರೆಹೊರೆ, ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಚುರುಕಿನ ಮಹಿಳೆಯಾಗಿದ್ದರು. ಯಾಕೆ ಇಂತಹ ನಿರ್ಧಾರ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರ ಸ್ನೇಹಿತೆಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts