More

    ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಸೋಂಕು ದೃಢ

    ಮಂಗಳೂರು: ಕ್ವಾರಂಟೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಓರ್ವ ವ್ಯಕ್ತಿ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಶುಕ್ರವಾರ 2 ಕರೊನಾ ಪಾಸಿಟಿವ್ ವರದಿಯಾಗಿದೆ.

    ಮುಂಬೈಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ 55ರ ಹರೆಯದ ಕಡಂದಲೆ ನಿವಾಸಿಯೊಬ್ಬರು ಬುಧವಾರ ತಡರಾತ್ರಿ ಕ್ವಾರಂಟೈನ್ ಕೇಂದ್ರದಲ್ಲೇ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರ್ಥಿಕ ಸಂಕಷ್ಟ ಹಾಗೂ ತೀವ್ರ ಖಿನ್ನತೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿತ್ತು. ಅವರ ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿ ಬುಧವಾರ ರಾತ್ರಿಯೇ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ತರಲಾಗಿತ್ತು. ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ಇರುವುದು ದೃಡಫಟ್ಟಿದೆ.

    ಕ್ವಾರಂಟೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಜಿಲ್ಲಾಡಳಿತ ನಿಗದಿ ಪಡಿಸಿದ ಚೆಕ್‌ಪೋಸ್ಟ್ ಮೂಲಕ ಒಳಬರದೆ ಸಚ್ಚರಿಪೇಟೆ ಒಳರಸ್ತೆ ಮೂಲಕ ಕಡಂದಲೆ ಗ್ರಾಮಕ್ಕೆ ಬಂದಿದ್ದರು. ಬಳಿಕ ಅವರನ್ನು ಕಡಂದಲೆ ಹಿರಿಯ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೃತರ ಕುಟುಂಬದ ಅನುಮತಿ ಪಡೆದು ಅಂತ್ಯ ಸಂಸ್ಕಾರವನ್ನು ಬೋಳೂರು ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.

    ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಕೋವಿಡ್ ಆಸ್ಪತ್ರೆಗೆ
    ಬೆಳ್ತಂಗಡಿ: ಮೇ 18ರಂದು ಮುಂಬೈಯ ದೊಂಬಿವಿಲಿಯಿಂದ ಬೆಳ್ತಂಗಡಿಗೆ ಆಗಮಿಸಿದ ಆರಂಬೋಡಿ ನಿವಾಸಿ 29 ವರ್ಷದ ಮಹಿಳೆಯ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ. ಬೆಳ್ತಂಗಡಿಯಲ್ಲಿ ಜಿಲ್ಲಾಡಳಿತ ನಿಗದಿ ಪಡಿಸಿದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಅವರನ್ನು ಈಗ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಯುವತಿ ಸೇರಿದಂತೆ 9 ಮಂದಿ ಮುಂಬೈನಿಂದ ನಾಲ್ಕು ದಿನಗಳ ಹಿಂದೆ ಬಂದಿದ್ದರು. ಎಲ್ಲರನ್ನೂ ಆರಂಬೋಡಿಯ ಹನ್ನೆರಡು ಕವಲು ಶಾಲೆಯಲ್ಲಿ ಜಿಲ್ಲಾಡಳಿತ ಸ್ಥಾಪಿಸಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.

    ಸೀಲ್‌ಡೌನ್ ಇಲ್ಲ: ಹೊರರಾಜ್ಯದಿಂದ ಬಂದವರನ್ನು ನೇರವಾಗಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸ್ಥಳೀಯವಾಗಿ ಸುತ್ತಾಡದ ಕಾರಣ ಆತಂಕವಿಲ್ಲ. ಶಾಲೆಯ ಸುತ್ತಮುತ್ತ ಮನೆಗಳು ಇಲ್ಲ, ಹಾಗಾಗಿ ಸೀಲ್‌ಡೌನ್ ಮಾಡುವ ಅವಶ್ಯಕತೆ ಇಲ್ಲ. ಒಬ್ಬರ ಸಂಬಂಧಿಕರೊಬ್ಬರು ಇತ್ತೀಚೆಗೆ ಇಲ್ಲಿ ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದ ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲರೂ ಹೋಟೆಲ್ ವೃತ್ತಿಯವರಾಗಿದ್ದರಿಂದ ಅವರೇ ಅಹಾರ ತಯಾರಿಸುತ್ತಿದ್ದು, ಅಗತ್ಯ ಸಾಮಗ್ರಿಗಳನ್ನು ಪಂಚಾಯಿತಿ ಮೂಲಕ ನೀಡಲಾಗುತ್ತಿದೆ.

    ಇದು ತಾಲೂಕಿನಲ್ಲಿ ಎರಡನೇ ಪ್ರಕರಣ. ಈ ಮೊದಲು ತಣ್ಣೀರುಪಂಥ ಗ್ರಾಪಂ ವ್ಯಾಪ್ತಿಯ ಕರಾಯ ನಿವಾಸಿಗೆ ಸೋಂಕು ತಗುಲಿದ್ದು, ಗುಣಮುಖರಾಗಿ ಬಿಡುಗಡೆಯಾಗಿದ್ದರು.

    3 ಲಕ್ಷ ರೂ. ಪರಿಹಾರ: ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ 3 ಲಕ್ಷ ರೂ. ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಈ ಬಗ್ಗೆ ಮನವಿ ಮಾಡಿದ್ದರು.

    ಒಟ್ಟು ಸಂಖ್ಯೆ 63ಕ್ಕೇ ಏರಿಕೆ
    ದ.ಕ. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಸೋಂಕಿತರ ಒಟ್ಟು ಸಂಖ್ಯೆ 63ಕ್ಕೇರಿದೆ. ಈ ಪೈಕಿ 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಒಟ್ಟು 84 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. 198 ಸ್ಯಾಂಪಲ್ ಕಳುಹಿಸಲಾಗಿದ್ದು , ಲಭ್ಯವಾದ 26 ಸ್ಯಾಂಪಲ್ ಟೆಸ್ಟ್ ವರದಿಯಲ್ಲಿ 2 ಪಾಸಿಟಿವ್, 24 ನೆಗೆಟಿವ್. ಇನ್ನೂ 580 ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ಗುರುವಾರ ಉಸಿರಾಟದ ತೊಂದರೆ ಇರುವ 4 ಪ್ರಕರಣ ಪತ್ತೆಯಾಗಿದೆ. 13 ಮಂದಿಯನ್ನು ತೀವ್ರ ನಿಗಾ ವಹಿಸಲು ಆಸ್ಪತೆಗೆ ದಾಖಲಿಸಲಾಗಿದೆ.

    ಕಾಸರಗೋಡಿನ 7 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಏಳು ಮಂದಿ ಸಹಿತ ಕೇರಳದಲ್ಲಿ ಒಟ್ಟು 42 ಮಂದಿಯಲ್ಲಿ ಶುಕ್ರವಾರ ಸೋಂಕು ಕಾಣಿಸಿಕೊಂಡಿದೆ. ಪುತ್ತಿಗೆ ನಿವಾಸಿ 57 ವರ್ಷದ ವ್ಯಕ್ತಿ, ಮುಳಿಯಾರು ನಿವಾಸಿ 42 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 36, 38, 42, 56, 46 ವರ್ಷದ ಪ್ರಾಯದ ವ್ಯಕ್ತಿಗಳಿಗೆ ಸೋಂಕು ಖಚಿತಗೊಂಡಿದೆ. ಇವರಲ್ಲಿ 6 ಮಂದಿ ಪುರುಷರು. ಪುತ್ತಿಗೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದವರು. ಕುಂಬಳೆ ನಿವಾಸಿಗಳು ಒಂದೇ ವಾಹನದಲ್ಲಿ ಸಂಚರಿಸಿದ್ದು, ಆ ಮೂಲಕ ಸೋಂಕು ತಗುಲಿಸಿಕೊಂಡವರು. ಇವರಲ್ಲಿ ಇಬ್ಬರು ಸಹೋದರರು. ಇವರೆಲ್ಲರೂ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts