More

    ಕಬ್ಬು ಅರೆಯುವ ಕಾರ್ಯ ಪೂರ್ಣ

    ಕೆ.ಎಂ.ದೊಡ್ಡಿ : ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಚಾಂಶುಗರ್ಸ್‌ ಕಾರ್ಖಾನೆ ಪೂರ್ಣಗೊಳಿಸಿದೆ.
    ಕಾರ್ಖಾನೆಯ ಆಡಳಿತ ಮಂಡಳಿ 2023-24ನೇ ಸಾಲಿಗೆ 10 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿತ್ತು. ಆದರೆ ಮಳೆ ಅಭಾವ ಮತ್ತು ನೀರಿನ ಕೊರತೆಯಿಂದ 9,32,594 ಟನ್ ಕಬ್ಬು ಅರೆಯಲು ಮಾತ್ರ ಸಾಧ್ಯವಾಯಿತು. ಕಳೆದ ಬಾರಿ 10,50,000 ಟನ್ ಕಬ್ಬು ಅರೆದು ದಾಖಲೆ ನಿರ್ಮಿಸಿತ್ತು. ಆದರೆ, ಈ ಬಾರಿ ಆ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ ಎನ್ನುವುದು ಆಡಳಿತ ಮಂಡಳಿಯ ಕೊರಗಾಗಿದೆ.
    ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಜೂನ್‌ನಿಂದ ಆರಂಭವಾಗುತ್ತದೆ. ಆದರೆ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಗೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ವಾಡಿಕೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಂಪ್‌ಸೆಟ್ ಆಧಾರಿತ ರೈತರು ಮಾತ್ರ ಕಬ್ಬಿನ ಬೆಳೆ ಉಳಿಸಿ ಕೊಳ್ಳಲು ಸಾಧ್ಯವಾಯಿತು.
    ಕಾರ್ಖಾನೆಗೆ ಆರ್ಥಿಕ ಹೊರೆ, ರೈತರಿಗೆ ಸಂಕಷ್ಟ: ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ನೀರು ಮತ್ತು ವಿದ್ಯುತ್ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕುಂಠಿತವಾಗಿದ್ದು, ಕಾರ್ಖಾನೆಯ ಕಬ್ಬು ಅರೆಯುವಿಕೆಗೂ ಪೆಟ್ಟು ಬಿದ್ದು ಕಾರ್ಖಾನೆ ಆರ್ಥಿಕ ಹೊರೆ ಅನುಭವಿಸಿದರೆ ರೈತರೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು.
    ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಜೀವನಾಡಿಯಾಗಿದ್ದ ಕನ್ನಂಬಾಡಿ ಕಟ್ಟೆ ತುಂಬಲಿಲ್ಲ. ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಕಬ್ಬಿನ ಬೆಳೆ ಹಾಕಿದ್ದರು. ಆದರೆ ಮಳೆ ಇಲ್ಲದೆ ಕೆಆರ್‌ಎಸ್ ತುಂಬಲಿಲ್ಲ, ಇದ್ದ ನೀರನ್ನೂ ಸುಪ್ರೀಂ ಕೋರ್ಟ್ ಆದೆೇಶದಂತೆ ಸರ್ಕಾರ ತಮಿಳುನಾಡಿಗೆ ಧಾರೆ ಎರೆಯಿತು. ಇದರಿಂದ ರೈತರಿಗೆ ಬರ ಸಿಡಿಲು ಬಡಿದಂತಾಗಿ ನಿರೀಕ್ಷೆಯಂತೆ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು.
    ಕೂಲಿ ಕಾರ್ಮಿಕರ ಕೊರತೆ: ಕಬ್ಬು ಕಟಾವು ಮಾಡಲು ಸ್ಥಳೀಯ ಕೂಲಿ ಕಾರ್ಮಿಕರ ಅಭಾವ ಹೆಚ್ಚಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಕೂಲಿ ಕಾರ್ಮಿಕರನ್ನು ಕರೆ ತರಲಾಗಿತ್ತು. ಕಬ್ಬಿನ ಅಭಾವ ಎದುರಾದ ಹಿನ್ನೆಲೆಯಲ್ಲಿ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರು ಬೇರೆ ಕಾರ್ಖಾನೆ ವ್ಯಾಪ್ತಿಗೆ ತೆರಳಿದ್ದರಿಂದ ಕಬ್ಬು ಕಟಾವು ಮಾಡಲು ಕಾರ್ಮಿಕರು ಇಲ್ಲದಿರುವುದು ಕಬ್ಬು ಕೊರತೆಗೆ ಮತ್ತೊಂದು ಕಾರಣವಾಗಿದ್ದು, ಆಡಳಿತ ಮಂಡಳಿ ಇವನ್ನೆಲ್ಲ ಸಹಿಸಿಕೊಂಡು 9 ಲಕ್ಷ ದಾಟಿ 10 ಲಕ್ಷ ಟನ್‌ನತ್ತ ಹೆಜ್ಜೆ ಹಾಕಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

    ಈ ಬಾರಿ ನಡೆದಿಲ್ಲ ಪ್ರತಿಭಟನೆ : ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಆದರೆ ರೈತರಿಗೆ ಪಾವತಿಸಬೇಕಾದ ಕಬ್ಬಿನ ಹಣವನ್ನು ಈ ಸಾಲಿನಲ್ಲಿ ಯಾವುದೇ ಪ್ರತಿಭಟನೆ ಮಾಡಿಸಿ ಕೊಳ್ಳದೆ ಬಟವಾಡೆ ಮಾಡಿದ್ದು ಮಾತ್ರ ಕಾರ್ಖಾನೆ ಆಡಳಿತ ಮಂಡಳಿಯ ಹೆಗ್ಗಳಿಕೆ ಎನ್ನಬಹುದು.
    ಪ್ರತಿ ಬಾರಿಯೂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಹಣ ಪಡೆಯಲು ಕಾರ್ಖಾನೆಯ ಆಡಳಿತ ಮಂಡಳಿಯ ಜತೆ ಹಗ್ಗಜಗ್ಗಾಟವಾಡಿ ಪ್ರತಿಭಟನೆಯ ಮೂಲಕ ಹಣ ಪಡೆದುಕೊಳ್ಳಬೇಕಾಗಿತ್ತು. ಆದರೆ ಈ ಸಾಲಿನಲ್ಲಿ ಯಾವುದೇ ಪ್ರತಿಭಟನೆಯೂ ಜರುಗಲಿಲ್ಲ, ರೈತರಿಗೆ ಕಾಲ ಕಾಲಕ್ಕೆ ಕಬ್ಬಿನ ಹಣ ಪಾವತಿಸಿ ಸೈ ಎನಿಸಿಕೊಂಡಿದೆ.
    ಕಾರ್ಖಾನೆಗೆ 32 ಬ್ಯಾಚ್‌ಗಳಲ್ಲಿ 9,32,594 ಟನ್ ಕಬ್ಬು ಸಾಗಿಸಿದ್ದು, ಇದರಲ್ಲಿ 25 ಬ್ಯಾಚ್‌ಗಳಿಗೆ ಹಣ ಪಾವತಿಯಾಗಿದ್ದು, ಇನ್ನು 7 ಬ್ಯಾಚ್‌ಗಳು ಬಾಕಿ ಇದೆ. ಅಂದರೆ ರೈತರಿಗೆ ಇನ್ನು 35 ಕೋಟಿ ರೂ. ಬಾಕಿ ನೀಡಬೇಕಾಗಿದ್ದು, ಫೆಬ್ರವರಿ 20ರೊಳಗೆ ಬಾಕಿ ಪಾವತಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ. ಒಟ್ಟಾರೆ, ಈ ಬಾರಿ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಕಾರ್ಖಾನೆ ಸಾಂಗವಾಗಿ ನಡೆದಿದೆ ಎನ್ನುತ್ತಾರೆ ಕಾರ್ಖಾನೆಯ ಕಾರ್ಮಿಕ ವೃಂದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts