More

    ಸಹಾಯಧನಕ್ಕೂ ವಸೂಲಿ ದಂಧೆ

    ಬೆಳಗಾವಿ: ಲಾಕ್‌ಡೌನ್‌ನಿಂದ ಉದ್ಯೋಗ, ಆದಾಯ ಸೇರಿ ಮತ್ತಿತರ ಸಮಸ್ಯೆಗಳಿಂದ ತತ್ತರಿಸಿರುವ ಆಟೋ, ಟ್ಯಾಕ್ಸಿ ಚಾಲಕರ ಸಂಕಟವನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು, ಸರ್ಕಾರದ ನೆರವು ಕೊಡಿಸುವುದಾಗಿ ಲಾನುಭವಿಗಳಿಂದ 250 ರಿಂದ 500 ರೂ. ವರೆಗೆ ವಸೂಲಿ ಮಾಡತೊಡಗಿದ್ದಾರೆ.

    ಕೋವಿಡ್-19 ಸಂಕಷ್ಟಕ್ಕೆ ಸಿಲುಕಿದ್ದ ವಿವಿಧ ವಲಯಗಳ ಕಾರ್ಮಿಕರಿಗಾಗಿ ಸರ್ಕಾರ ಮೊನ್ನೆಯಷ್ಟೇ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ. ಜಿಲ್ಲಾಧಿಕಾರಿ, ಆರ್‌ಟಿಒ ಸೇರಿ ಹಲವು ಅಧಿಕಾರಿಗಳಿಗೆ ಸರ್ಕಾರದ ಸಹಾಯಧನವನ್ನು ಅರ್ಹರಿಗೆ ಯಾವ ರೀತಿ ತಲುಪಿಸಬೇಕು ಎಂಬುದರ ಕುರಿತು ಮಾಹಿತಿಯೂ ಬಂದಿಲ್ಲ. ಆಗಲೇ ಕೆಲ ಏಜೆಂಟರು, ಚಾಲಕರಿಗೆ ಸರ್ಕಾರದ ಧನ ಸಹಾಯ ಕೊಡಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ, ಅರ್ಜಿ ತುಂಬಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಯನ್ನು ಮಧ್ಯವರ್ತಿಗಳು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.

    ಹೀಗಿದೆ ವಸೂಲಿ ಚಾರ್ಜ್: ಮಧ್ಯವರ್ತಿಗಳು ಸರ್ಕಾರದ ಸಹಾಯಧನ ಕೊಡಿಸುವುದಾಗಿ ಬ್ಯಾಂಕ್ ಖಾತೆ ನಂಬರ್, ವಾಹನ ಸಂಖ್ಯೆ, ಚಾಲನಾ ಪರವಾನಗಿ ಸಂಖ್ಯೆ, ಆಧಾರ್ ಕಾರ್ಡ್ ಮಾಹಿತಿ ಒಳಗೊಂಡಿರುವ ಅರ್ಜಿಗೆ 200 ರೂ., ಅರ್ಜಿ ಭರ್ತಿ ಮಾಡಲು 50 ರೂ. ಸೇರಿ 250 ರೂ.ಗಳನ್ನು ಅರ್ಜಿದಾರ ನೀಡಬೇಕು. ಅಲ್ಲದೆ, ಭರ್ತಿ ಮಾಡಿದ ಅರ್ಜಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ತಲಾ ಅರ್ಜಿಗೆ 250 ರೂ. ಹಣವನ್ನೂ ಏಜೆಂಟರು ಕೇಳುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಚಾಲಕರು ತಿಳಿಸಿದ್ದಾರೆ.

    ಚಾಲಕರ ಖಾತೆಗೆ ನೇರವಾಗಿ ಸಹಾಯಧನ ವರ್ಗಾಯಿಸಿ: ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ 21 ಸಾವಿರಕ್ಕೂ ಅಧಿಕ ಆಟೋ, 1 ಲಕ್ಷಕ್ಕೂ ಅಧಿಕ ಟ್ಯಾಕ್ಸಿ ಕಾರ್ಯ ನಿರ್ವಹಿಸುತ್ತಿವೆ. 1 ಲಕ್ಷಕ್ಕೂ ಅಧಿಕ ಚಾಲಕರಿದ್ದಾರೆ. ಆದರೆ, ಅರ್ಧಕ್ಕೂ ಹೆಚ್ಚು ಚಾಲಕರ ಬಳಿ ಸ್ವಂತ ವಾಹನಗಳಿಲ್ಲ. ಬಾಡಿಗೆ ರೂಪದಲ್ಲಿ ವಾಹನ ಓಡಿಸುತ್ತಿದ್ದಾರೆ. ಸರ್ಕಾರವು ವಾಹನಗಳ ನೋಂದಣಿ ಸಂಖ್ಯೆ ಅಧಾರದ ಮೇಲೆ ಪರಿಹಾರ ನೀಡಿದರೆ ಮಾಲೀಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆಯೇ ವಿನಹ ಚಾಲಕರಿಗೆ ಸಿಗುವುದಿಲ್ಲ. ಹೀಗಾಗಿ ಸರ್ಕಾರ ಚಾಲಕರ ಖಾತೆಗೆ ನೇರವಾಗಿ ಸಹಾಯಧನ ನೀಡಲು ಕ್ರಮ ವಹಿಸಬೇಕು ಎಂದು ಬೆಳಗಾವಿಯ ಟ್ಯಾಕ್ಸಿ ಚಾಲಕ ಸುರೇಶ ಎಸ್. ನಾಯಕ, ಬಾಬುರಾಮ ಒತ್ತಾಯಿಸಿದ್ದಾರೆ.

    ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕದಲ್ಲಿರುವ ಚಾಲಕರಿಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಕೆಲವರು ಸಹಾಯಧನದ ಹೆಸರಿನಲ್ಲಿ ಚಾಲಕರಿಂದ ಹಣ ವಸೂಲಿ ಮಾಡುವುದು, ನಕಲಿ ಅರ್ಜಿ ಭರ್ತಿ ಮಾಡಿಕೊಳ್ಳುತ್ತಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಹಾಯಧನಕ್ಕಾಗಿ ಯಾವುದೇ ಅರ್ಜಿ ವಿತರಣೆ ಮಾಡಿಲ್ಲ. ಚಾಲಕರು ಎಚ್ಚರ ವಹಿಸಬೇಕು.
    | ಶಿವಾನಂದ ಬಿ.ಮಗದುಮ್ಮ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಳಗಾವಿ ವಿಭಾಗ

    ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ 7,75,000 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5,000 ರೂ. ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಚಾಲಕರಿಗೆ ಪರಿಹಾರ ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕೆಲ ಚಾಲಕರು ಅರ್ಜಿ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸುವುದು, ಅಂಚೆ ಮೂಲಕ ಅರ್ಜಿ ಸಲ್ಲಿಸುವುದ ನ್ನು ಮಾಡಬೇಡಿ. ಸರ್ಕಾರದ ಮಾರ್ಗಸೂಚಿ ಅನ್ವಯ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ವಾಹನ ಚಾಲಕರು ಅನಗತ್ಯವಾಗಿ ಮೋಸ ಹೋಗಬೇಡಿ.
    | ಲಕ್ಷ್ಮಣ ಸವದಿ ಡಿಸಿಎಂ, ಸಾರಿಗೆ ಸಚಿವ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts