More

    ಸೋರುತಿಹುದು ಸುಬ್ರಹ್ಮಣ್ಯ ಠಾಣೆ

    ರತ್ನಾಕರ ಸುಬ್ರಹ್ಮಣ್ಯ

    ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಿಸುತ್ತಿರುವ ಪೋಲಿಸ್ ಠಾಣೆ ಮಳೆ ಸಂದರ್ಭ ಸೋರುತ್ತಿದೆ. ಇದಕ್ಕೆ ಪರ್ಯಾಯವಾಗಿ ಠಾಣೆಯ ಮೇಲ್ಛಾವಣಿಗೆ ಪ್ಲಾಸ್ಟಿಕ್ ಟಾರ್ಪಾಲ್ ಹೊದಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಿಸುತ್ತಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣೆ 49 ವರ್ಷಗಳ ಇತಿಹಾಸ ಹೊಂದಿದೆ. ಇದು 15 ವರ್ಷಗಳವರೆಗೆ ಕಡಬ ಪೊಲೀಸ್ ಠಾಣೆಯ ಹೊರಠಾಣೆಯಾಗಿ ಕಾರ್ಯನಿರ್ವಹಿಸಿತ್ತು. ಪ್ರಸ್ತುತ ಪೊಲೀಸ್ ಠಾಣೆಯಾಗಿ ಕಾರ್ಯಾಚರಿಸುತ್ತಿದೆ.

    ಸುಬ್ರಹ್ಮಣ್ಯ ಠಾಣೆಯನ್ನು 1972ರಲ್ಲಿ ತೆರೆಯಲಾಗಿದ್ದು, 1979ರಲ್ಲಿ ಹೊಸ ಕಟ್ಟಡದಲ್ಲಿ ಸೇವೆ ಆರಂಭವಾಯಿತು. 42 ವರ್ಷ ಹಳೆಯದಾದ ಹೆಂಚಿನ ಛಾವಣಿಯ ಈ ಕಟ್ಟಡ 3 ಕೊಠಡಿಗಳನ್ನು ಹೊಂದಿದೆ. ಠಾಣೆಗೆ ಕೊಠಡಿ ಸಮಸ್ಯೆಯಾದುದರಿಂದ 2001ರಲ್ಲಿ ಊರ ದಾನಿಗಳ ಸಹಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಯಿತು. ಸದ್ಯ ಇದೇ ಕಟ್ಟಡದಲ್ಲಿ ಠಾಣೆ ಕಾರ್ಯಾಚರಿಸುತ್ತಿದೆ. ಹಳೇ ಕಟ್ಟಡವಾಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದು, ಕೊಠಡಿಗಳ ಕೊರತೆ ಕಾಡುತ್ತಿದೆ.

    ವ್ಯವಸ್ಥಿತ ವಸತಿ ವ್ಯವಸ್ಥೆ: ಠಾಣೆಯು ಸುಬ್ರಹ್ಮಣ್ಯದ ಹೃದಯ ಭಾಗದಲ್ಲಿ 3 ಎಕರೆ ವಿಶಾಲವಾದ ಜಾಗ ಹೊಂದಿದ್ದು, ಸಿಬ್ಬಂದಿಗೆ ವ್ಯವಸ್ಥಿತ ವಸತಿ ವ್ಯವಸ್ಥೆ ಇದೆ. ಪ್ರಸ್ತುತ ಠಾಣೆಯಲ್ಲಿ 28 ಸಿಬ್ಬಂದಿ ಕರ್ತವ್ಯದಲ್ಲಿದ್ದು, ಮೂಲಸೌಕರ್ಯಕ್ಕೆ ಯಾವುದೇ ಕೊರತೆಗಳಿಲ್ಲ. ಸುಳ್ಯ ನ್ಯಾಯಾಲಯ ವ್ಯಾಪ್ತಿಯಲ್ಲಿರುವ ಠಾಣೆ, ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಳ್ಪ, ಕೇನ್ಯ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ನಾಲ್ಕೂರು, ಐವತ್ತೋಕ್ಲು, ಮರ್ಕಂಜ, ಕಲ್ಮಡ್ಕ ಮೊದಲಾದ ಸುಳ್ಯ ಹಾಗೂ ಕಡಬ ತಾಲೂಕಿನ 15 ಗ್ರಾಮಗಳನ್ನೊಳಗೊಂಡಿದೆ.

    ಬೇಕಿದೆ ಹೊಸ ಕಟ್ಟಡ: ಜಿಲ್ಲೆಯ ಹೆಚ್ಚಿನ ಪೊಲೀಸ್ ಠಾಣೆಗಳು ಸುಸಜ್ಜಿತ ಕಟ್ಟಡ ಹೊಂದಿದ್ದು, ಸುಬ್ರಹ್ಮಣ್ಯ ಠಾಣೆಗೂ ನೂತನ ಕಟ್ಟಡ ಭಾಗ್ಯ ಕೂಡಿಬರಲಿ ಎಂಬುದು ಸಾರ್ವಜನಿಕರ ಆಶಯ. ದಾಖಲೆಗಳ ಕೊಠಡಿ, ಉಪನಿರೀಕ್ಷಕರು, ಸಂದರ್ಶಕರು ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರತ್ಯೇಕ ಕೊಠಡಿ ಹಾಗೂ ಠಾಣಾಕಾರಿಗಳಿಗೆ ನೂತನ ಚೇಂಬರ್ ಬೇಕಾಗಿದೆ.

    ಶೀಘ್ರ ನೂತನ ಕಟ್ಟಡ: ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಬೇಕೆಂಬ ಬೇಡಿಕೆಯನ್ನು ಇಲಾಖೆಯಿಂದ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಕೂಡ ಸರ್ಕಾರದ ಗಮನ ಸೆಳೆದಿದ್ದೇನೆ. ಕೋವಿಡ್-19 ಕಾರಣದಿಂದ ನೂತನ ಕಟ್ಟಡ ನಿರ್ಮಾಣ ಯೋಜನೆ ಪ್ರಕ್ರಿಯೆ ವಿಳಂಬವಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯನ್ನು ಶೀಘ್ರ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಅನುದಾನ ಬಿಡುಗಡೆಗೊಂಡು ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭರವಸೆ ನೀಡಿದ್ದಾರೆ.

    ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿ ಚರ್ಚೆ ನಡೆದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಠಾಣೆಗೆ ಸಂಬಂಧಿಸಿ ಜಾಗ ಇದ್ದು, ಮುಂಬರುವ ದಿನಗಳಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬರಲಿದೆ.
    ರಿಷಿಕೇಶ್ ಸೋನಾವಾನೆ, ಪೊಲೀಸ್ ಅಧೀಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts