More

    ಸಂಘರ್ಷಕ್ಕೆ ಕಾರಣವಾಗುತ್ತಿರುವ ಫ್ಲೆಕ್ಸ್‌ಗಳು

    ಹುಣಸೂರು: ರಾಷ್ಟ್ರ ನಾಯಕರ ಫ್ಲೆಕ್ಸ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ವೇಳೆ ಕಟ್ಟು ನಿಟ್ಟಿನ ಕ್ರಮ ಅನುಸರಿಸಬೇಕು, ಅಕ್ರಮ ಮದ್ಯ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಬೇಕು, ರಕ್ಷಣೆ ಕೇಳಿ ಬರುವ ದಲಿತ ಜನಾಂಗದ ಜನರ ಬಳಿ ಪೊಲೀಸರು ಲಂಚಕ್ಕೆ ಬೇಡಿಕೆ ಇಡುತ್ತಿದ್ದು, ಈ ಬಗ್ಗೆ ಪರಿಶೀಲಿಸಬೇಕು…

    ಹುಣಸೂರು ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟ ಪರಿ ಇದು.

    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ರಾಷ್ಟ್ರನಾಯಕರ ಫ್ಲೆಕ್ಸ್‌ಗಳನ್ನು ಎಲ್ಲೆಂದರಲ್ಲಿ ಬೀದಿ, ಸರ್ಕಲ್‌ಗಳಲ್ಲಿ ಅಳವಡಿಸಲಾಗುತ್ತಿದೆ. ಈ ರಾಷ್ಟ್ರ ನಾಯಕರ ಫ್ಲೆಕ್ಸ್‌ಗಳನ್ನು ಕೆಲವು ಕಿಡಿಗೇಡಿಗಳು ಹರಿದು ಹಾಕುವ ಜತೆಗೆ ಬೆಂಕಿ ಹಚ್ಚುವುದು, ಸಗಣಿ ಎರಚುವುದು ಮುಂತಾದ ಕೃತ್ಯಗಳನ್ನು ಮಾಡುತ್ತಾ ಜಾತಿ-ಜಾತಿಗಳ ನಡುವೆ ಗಲಾಟೆಗಳಾಗಲು ಕಾರಣರಾಗುತ್ತಿದ್ದಾರೆ. ಒಬ್ಬರು ಫ್ಲೆಕ್ಸ್ ಹಾಕಿದರೆ, ಮತ್ತೊಬ್ಬ ಆ ಫ್ಲೆಕ್ಸ್‌ಗೆ ಹಾನಿ ಮಾಡುತ್ತಾನೆ. ಈ ಸಂಬಂಧ ಮತ್ತೊಬ್ಬ ಪೊಲೀಸ್ ಠಾಣೆಗೆ ದೂರು ನೀಡುತ್ತಾನೆ. ಈ ಎಲ್ಲ ಬೆಳವಣಿಗೆಯಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ, ಫ್ಲೆಕ್ಸ್‌ಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಸವಾಲಾಗುತ್ತದೆ. ಇನ್ನೊಂದೆಡೆ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಪತ್ತೆ ಮಾಡದೆ ಇದ್ದಾಗ ದಲಿತರು ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

    ಒಂದು ಕಡೆ ಜಾತಿ ಜಾತಿ ನಡುವೆ ಅಶಾಂತಿ ಉಂಟಾದರೆ, ಮತ್ತೊಂದೆಡೆ ದಲಿತರು ಮತ್ತು ಪೊಲೀಸ್ ಇಲಾಖೆಗಳ ನಡುವೆ ಅಪನಂಬಿಕೆ ಉಂಟಾಗಿ, ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಕೆಲ ರಾಜಕೀಯ ನಾಯಕರು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಸ್ವಾರ್ಥ ರಾಜಕಾರಣಕ್ಕೆ ದಲಿತರನ್ನು ದಾಳವಾಗಿ ಬಳಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ವ್ಯಕ್ತಿ ಅಥವಾ ರಾಷ್ಟ್ರನಾಯಕರ ಫ್ಲೆಕ್ಸ್‌ಗಳನ್ನು ಹಾಕುವಾಗ ಸ್ಥಳೀಯ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆದು ಕಾಲಮಿತಿಯಲ್ಲಿ ಹಾಕಿ ಆತನೇ ತೆರವುಗೊಳಿಸಬೇಕು. ಹೀಗೆ ಮಾಡಿದರೆ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಗಲಾಟೆಯಾಗುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

    ಎಚ್.ಡಿ.ಕೋಟೆ ತಾಲೂಕಿನ ದಲಿತ ಮುಖಂಡ ನರಸಿಂಹಮೂರ್ತಿ, ಜೀವಿಕ ಸಂಸ್ಥೆಯ ಬಸವರಾಜು ಮುಂತಾದವರು ಅಕ್ರಮ ಮದ್ಯ ಮಾರಾಟದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ದಲಿತರ ಕೇರಿಗಳಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.

    ಪಿರಿಯಾಪಟ್ಟಣ ತಾಲೂಕಿನ ಹಿರಿಯ ಮುಖಂಡ ತಮ್ಮಣ್ಣಯ್ಯ ಮಾತನಾಡಿ, ದಲಿತರಾಗಲಿ ಅಥವಾ ಸವರ್ಣೀಯರಾಗಲಿ ಸುಳ್ಳು ದೂರುಗಳನ್ನು ಕೊಟ್ಟರೆ ಪೊಲೀಸ್ ಇಲಾಖೆ ಅವುಗಳನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಮನವಿ ಮಾಡಿದರು.

    ಬಿಳಿಕೆರೆ ಗ್ರಾಮದ ದೇವರಾಜು ಮಾತನಾಡಿ, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳು ರಕ್ಷಣೆ ಕೇಳಿ ಬರುವ ದಲಿತರಿಂದಲೇ ಹಣ ಕೀಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳು ವೃತ್ತಿಪರ ದಲ್ಲಾಳಿಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಇದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

    ಹುಣಸೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಗೋಪಾಲಕೃಷ್ಣ ಮಾತನಾಡಿ, ಮುಂದೆ ಲೋಕಸಭಾ ಚುನಾವಣೆ ನಡೆಯಲಿದ್ದು, ಫ್ಲೆಕ್ಸ್ ಸಂಬಂಧ ನಿಂಗರಾಜ ಮಲ್ಲಾಡಿ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಲಾಗುವುದು. ನೊಂದ ದಲಿತರಿಗೆ ಪೊಲೀಸ್ ಇಲಾಖೆ ಕಾನೂನು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಪೊಲೀಸರಿಗೆ ಎಷ್ಟಿದೆಯೋ, ಅಷ್ಟೇ ಜವಾಬ್ದಾರಿ ನಿಮ್ಮ ಮೇಲೆಯೂ ಇದೆ ಎಂದರು.

    ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ, ನಗರ ಠಾಣೆಯ ಪಿಎಸ್‌ಐ ತಾಜ್ ಉದ್ದೀನ್ ಬಿಳಿಕೆರೆ ಠಾಣೆ ಇನ್ಸ್‌ಪೆಕ್ಟರ್ ಲೋಲಾಕ್ಷಿ, ಪಿರಿಯಾಪಟ್ಟಣ ಇನ್ಸ್‌ಪೆಕ್ಟರ್ ರಾಘವೇಂದ್ರ, ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್ ಎತ್ತಿನಮನಿ, ದಲಿತ ಮುಖಂಡರಾದ ದೊಡ್ಡಹೆಜ್ಜೂರು ನಾಗೇಶ, ಪಿ.ಪುಟ್ಟರಾಜು, ಸಿದ್ದೇಶ, ಕೊಳಗಟ್ಟ ಕೃಷ್ಣ, ಪಿರಿಯಾಪಟ್ಟಣದ ತಮ್ಮಣ್ಣಯ್ಯ, ಚಾಮರಾಜಕೋಟೆ ಜಗದೀಶ, ಗಿರೀಶ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts