More

    ಸೋರುತ್ತಿವೆ ಪಪಂ ಮಳಿಗೆಗಳು

    ಸೋರುತ್ತಿವೆ ಪಪಂ ಮಳಿಗೆಗಳು

    ಮೂಡಿಗೆರೆ: ಪಟ್ಟಣದ ವಿವಿಧೆಡೆ ಇರುವ ಪಪಂ ಮಳಿಗೆಗಳು ಸೋರುತ್ತಿದ್ದು, ಮಳೆ ನೀರಿನಿಂದ ರಕ್ಷಣೆ ಪಡೆಯಲು ವರ್ತಕರು ಪರದಾಡುತ್ತಿದ್ದಾರೆ.

    ಬಸ್ ನಿಲ್ದಾಣದ ಬಳಿ 2 ವಾಣಿಜ್ಯ ಸಂಕೀರ್ಣ, ಎಸ್​ಬಿಐ ಬ್ಯಾಂಕ್ ಸಮೀಪ ಒಂದು ವಾಣಿಜ್ಯ ಸಂಕೀರ್ಣವಿದೆ. ಇವುಗಳಲ್ಲಿ ಸುಮಾರು 30 ಮಳಿಗೆಗಳಿವೆ. ಕೊನೇ ಅಂತಸ್ತಿನ ಎಲ್ಲ ಮಳಿಗೆಗಳ ಛಾವಣಿಯಿಂದ ನೀರು ಸೋರುತ್ತಿದೆ.

    ಈ ಮಳಿಗೆಗಳಲ್ಲಿ ಸೆಲೂನ್, ಫೋಟೋ ಸ್ಟೂಡಿಯೋ, ಕಂಪ್ಯೂಟರ್ ಅಂಗಡಿ, ದಿನಸಿ, ಮೆಡಿಕಲ್, ಫ್ಯಾನ್ಸಿ ಸ್ಟೋರ್, ಕ್ಯಾಂಟೀನ್, ಬೇಕರಿ ವಿವಿಧ ಅಂಗಡಿಗಳಿವೆ. ನೀರು ತೊಟ್ಟಿಕ್ಕುವುದರಿಂದ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ಛಾವಣಿಗೆ ಪ್ಲಾಸ್ಟಿಕ್ ಹೊದಿಸಿದ್ದರೆ, ಕೆಲ ಅಂಗಡಿಗಳಲ್ಲಿ ಬಕೆಟ್ ಇಟ್ಟಿದ್ದಾರೆ. ಛಾವಣಿ ಸೋರಿಕೆಯಿಂದ ಮಳಿಗೆ ವಿದ್ಯುತ್ ಸಂಪರ್ಕ ಹಾನಿಗೀಡಾಗಿದ್ದು, ಭಯದಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

    ಮಳೆ ನೀರು ಸೋರಿಕೆಯಿಂದ ಛಾವಣಿಯ ಸಿಮೆಂಟ್ ಚಕ್ಕಳ ಕಳಚಿಬೀಳುತ್ತಿದೆ. ಛಾವಣಿಗೆ ಹಾಕಿದ ಕಬ್ಬಿಣ ಕಾಣುತ್ತಿದೆ. ಅಂಗಡಿಯೊಳಗಿನ ಸರಕು ಸಾಮಗ್ರಿ ಸಂಪೂರ್ಣ ಹಾನಿಗೀಡಾಗಿದ್ದು, ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ. ಛಾವಣಿ ದುರಸ್ತಿಪಡಿಸುವಂತೆ ಪಪಂಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ನಿಯಮಿತವಾಗಿ ಬಾಡಿಗೆ ಪಡೆಯುವ ಪಪಂ ಆಡಳಿತ ಸವಲತ್ತು ನೀಡದೆ ವರ್ತಕರನ್ನು ವಂಚಿಸುತ್ತಿದೆ ಎಂಬು ವರ್ತಕ ಮಹೇಶ್ ಎಂಬುವರ ಆರೋಪ.

    ಮಳಿಗೆಗಳು ನಿರ್ವಣವಾಗಿ 35 ವರ್ಷ ಕಳೆದಿದೆ. ಹೊಸ ಕಟ್ಟಡ ನಿರ್ವಿುಸುವ ಯೋಜನೆ ಈವರೆಗೂ ರೂಪಿಸಿಲ್ಲ. 10 ವರ್ಷದ ಹಿಂದೆ ನಿರ್ವಿುಸಿದ ಎಸ್​ಬಿಐ ಬ್ಯಾಂಕ್ ಪಕ್ಕದ ವಾಣಿಜ್ಯ ಮಳಿಗೆ, 4 ವರ್ಷದ ಹಿಂದೆ ಮಾರ್ಕೆಟ್ ರಸ್ತೆಯಲ್ಲಿ ನಿರ್ವಿುಸಿದ ಮೀನು, ಕುರಿ, ಕೋಳಿ ಮಾಂಸದ ವಾಣಿಜ್ಯ ಮಳಿಗೆಗಳನ್ನು ಈವರೆಗೆ ತೆರೆದಿಲ್ಲ. ಕುಸಿಯುವ ಸ್ಥಿತಿಯಲ್ಲಿರುವ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ವಿುಸಬೇಕು ಎಂಬುದು ವರ್ತಕರ ಒತ್ತಾಯ.

    ಪಪಂನ 76 ವಾಣಿಜ್ಯ ಮಳಿಗೆಗಳ ಪೈಕಿ ಸುಸ್ಥಿತಿಯಲ್ಲಿರುವ 56 ಮಳಿಗೆಗಳನ್ನು ಕಳೆದ ವರ್ಷ ಹರಾಜು ನಡೆಸಲಾಗಿದೆ. 35 ವರ್ಷದ ಹಿಂದಿನ ಕಟ್ಟಡಗಳು ಶಿಥಿಲ ಆಗಿರುವುದರಿಂದ 20 ಮಳಿಗೆ ಹರಾಜು ನಡೆಸಿಲ್ಲ. ಅವುಗಳ ದುರಸ್ತಿಗೆ ಮುಂದಾದಾಗ ಕರೊನಾ ತುರ್ತು ಪರಿಸ್ಥಿತಿ ಎದುರಾಗಿದ್ದರಿಂದ ನನೆಗುದಿಗೆ ಬಿದ್ದಿದೆ. ಶೀಘ್ರವೇ ಮಳಿಗೆಗಳ ದುರಸ್ತಿಪಡಿಸಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts