More

    ವಸತಿ ಶಾಲೆಯತ್ತ ಸುಳಿಯದ ವಿದ್ಯಾರ್ಥಿಗಳು

    ರೋಣ: ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆ ಪುನರಾರಂಭವಾಗಿ 16 ದಿನಗಳೇ ಕಳೆದಿವೆ. ಆದರೆ, ಇದುವರೆಗೆ ಒಬ್ಬ ವಿದ್ಯಾರ್ಥಿಯೂ ಶಾಲೆಗೆ ಬಂದಿಲ್ಲ!

    ಕರೊನಾ ಹಾವಳಿ ಕಡಿಮೆಯಾಗಿರುವುದರಿಂದ ಇಲ್ಲಿನ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಿಗೆ ಫೆ. 1ರಿಂದ ವಸತಿ ಸಹಿತ ತರಗತಿಗಳನ್ನು ಆರಂಭಿಸುವಂತೆ ಮೇಲಧಿಕಾರಿಗಳು ಆದೇಶ ಹೊರಡಿಸಿದ್ದರು. ಆದೇಶದ ಮೇರೆಗೆ ಎಲ್ಲ ಶಿಕ್ಷಕರು ವಸತಿ ಶಾಲೆಗೆ ಹಾಜರಾಗಿದ್ದಾರೆ. ಆದರೆ, ವಿದ್ಯಾಮಂದಿರದಲ್ಲಿ ಮಕ್ಕಳ ಸುಳಿವೇ ಇಲ್ಲ.

    ವಿಶೇಷವಾಗಿ ಹೊಳೆಆಲೂರ ಭಾಗದ ನೆರೆ ಸಂತ್ರಸ್ತ ಗ್ರಾಮಗಳ ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ರೋಣ ಪಟ್ಟಣದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ತೆರೆದಿದೆ. ಇಲ್ಲಿ 6 ರಿಂದ 9ನೇ ತರಗತಿವರೆಗಿನ 130 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಇದರಲ್ಲಿ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ನೀಡಲಾಗುತ್ತಿದೆ. 9ನೇ ತರಗತಿಯ 45 ವಿದ್ಯಾರ್ಥಿಗಳಿದ್ದಾರೆ.

    ವಿದ್ಯಾರ್ಥಿಗಳ ಗೈರಿನ ಬಗ್ಗೆ ಮುಖ್ಯೋಪಾಧ್ಯಾಯ ಎಸ್. ಎಚ್. ಬಂಡಿವಡ್ಡರ ಅವರನ್ನು ಕೇಳಿದರೆ, ಫೆ. 1ರಿಂದಲೇ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸೂಚಿಸಿದ್ದೇವೆ. ಆದರೆ, ವಿದ್ಯಾರ್ಥಿಗಳು ಬಂದಿಲ್ಲ. ಕಾರಣ ಕೇಳಿದರೆ ಕೋವಿಡ್ ಪರೀಕ್ಷೆಯ ವರದಿ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು.

    ಯಾವುದೇ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಪಟ್ಟ ಬಳಿಕ ಪಾಸಿಟಿವ್ ಅಥವಾ ನೆಗೆಟಿವ್ ಪ್ರಮಾಣ ಪತ್ರವನ್ನು ಮೂರ್ನಾಲ್ಕು ದಿನಗಳಲ್ಲಿ ಕೊಡುತ್ತೇವೆ.
    | ಡಾ. ಎಚ್.ಎಲ್. ಗಿರಡ್ಡಿ, ರೋಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ

    ಫೆ. 1ರಿಂದ 9ನೇ ತರಗತಿಯ ಕ್ಲಾಸ್​ಗಳನ್ನು ಆರಂಭಿಸುವಂತೆ ಎಲ್ಲ ವಸತಿ ಶಾಲೆಗಳಿಗೆ ನಿರ್ದೇಶನ ನೀಡಿದ್ದೇವೆ. ಆದರೆ, ರೋಣ ಪಟ್ಟಣದ ಇಂದಿರಾಗಾಂಧಿ ವಸತಿ ಶಾಲೆಯ 9ನೇ ತರಗತಿಗೆ ಇನ್ನೂ ಕ್ಲಾಸ್ ಪ್ರಾರಂಭವಾಗಿಲ್ಲ. ಮುಖ್ಯೋಪಾಧ್ಯಾಯರು ಕೋವಿಡ್ ಪರೀಕ್ಷೆಯ ವರದಿಯ ಕಾರಣ ಹೇಳುತ್ತಿದ್ದಾರೆ. ಆದರೆ, ಇದು ಸಮರ್ಪಕ ಉತ್ತರವಲ್ಲ. ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋದರೆ ಎರಡ್ಮೂರು ದಿನಗಳಲ್ಲಿ ಕೋವಿಡ್ ಪರೀಕ್ಷೆಯ ವರದಿ ಬರುತ್ತದೆ. ಈ ಬಗ್ಗೆ ತಕ್ಷಣವೇ ಜಾಗೃತಗೊಂಡು ಮಕ್ಕಳು ವಸತಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ನಾನು ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
    | ಪ್ರಶಾಂತ ವರಗಪ್ಪನವರ, ಗದಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts