More

    ಪ್ರಯಾಣಕ್ಕೆ ವಿದ್ಯಾರ್ಥಿಗಳ ಹರಸಾಹಸ

    ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುವಾಗ ಹಾಗೂ ವಾಪಸ್ ಬರುವಾಗ ಬಸ್‌ಗಳು ಕಿಕ್ಕಿರಿದು ತುಂಬಿಕೊಂಡು ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ತಾಲೂಕಿನ ಅನೇಕ ಗ್ರಾಮಗಳಿಂದ ಸಾವಿರಾರು ವಿದ್ಯಾಥಿಗಳು ಕಲಘಟಗಿ, ಧಾರವಾಡ, ಹುಬ್ಬಳ್ಳಿಗೆ ಶಾಲಾ-ಕಾಲೇಜ್‌ಗಳಿಗೆ ತೆರಳುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ನೋಡಿದರೆ, ಪ್ರತಿ ಮಾರ್ಗಕ್ಕೂ 3ರಿಂದ 4 ಬಸ್‌ಗಳು ಬೇಕು. ಆದರೆ, 1ರಿಂದ-2 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

    ಶಕ್ತಿ ಯೋಜನೆ ಜಾರಿ ಬಂದಾಗಿನಿಂದ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಇದರಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟ್ ಸಿಗುವುದು ದುಸ್ತರವಾಗುತ್ತಿದೆ. ಕೆಲವೊಮ್ಮೆ ನಿಂತು ಪ್ರಯಾಣಿಸಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತದೆ. ಇರುವ ಬಸ್ ಬಿಟ್ಟರೆ ಮತ್ತೆ ಗಂಟೆಗಟ್ಟಲೇ ಮತ್ತೊಂದು ಬಸ್‌ಗೆ ಕಾಯಬೇಕಾಗುತ್ತದೆ. ಹೀಗಾಗಿ, ಇದ್ದ ಬಸ್‌ನಲ್ಲಿಯೇ ಒದ್ದಾಡಿಕೊಂಡು ತೆರಳಬೇಕಾಗಿದೆ.

    ಹುಣಸಿಕಟ್ಟಿ, ದ್ಯಾವನಕೊಂಡ, ಮುಕ್ಕಲ, ತಾವರಗೇರಿ, ಅರಳಿಹೊಂಡ, ಬಮ್ಮಿಗಟ್ಟಿ, ಹಿಂಡಸಗೇರಿ, ತಂಬೂರು, ಸಂಗೇದೇವರಕೊಪ್ಪ, ಹುಲ್ಲಂಬಿ, ಮುತ್ತಗಿ, ಶಿಗಿಗಟ್ಟಿ, ಗಳಗಿ ಹುಲಕೊಪ್ಪ, ತುಮರಿಕೊಪ್ಪ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ, ಈ ಗ್ರಾಮಗಳ ವಿದ್ಯಾರ್ಥಿಗಳಿಗೆ ನಿತ್ಯವೂ ಗೋಳಾಟ ತಪ್ಪಿದ್ದಲ್ಲ.

    ಹುಣಸಿಕಟ್ಟಿ ಹಾಗೂ ದ್ಯಾವನಕೊಂಡ ಗ್ರಾಮದ ಬಸ್‌ಗಳು ಜು. 10ರಂದು ಸಮಯಕ್ಕೆ ಸರಿಯಾಗಿ ಬಾರದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜ್‌ಗಳಿಗೆ ಹೋಗಲು ತೊಂದರೆ ಉಂಟಾಗಿತ್ತು. ಹೀಗಾಗಿ, ಮಕ್ಕಳು ಬಸ್‌ಗಳನ್ನ ತಡೆದು ಪ್ರತಿಭಟನೆ ಮಾಡಿದ್ದರು. ಆದರೂ, ಬಸ್ ಸೇವೆಯಲ್ಲಿನ ಸಮಸ್ಯೆಗಳು ಕೊಂಚವೂ ಸರಿಯಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಹಿಂಡಸಗೇರಿ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿನಿ ನೀಲಮ್ಮ ಹಾಗೂ ತಂಬೂರು ಗ್ರಾಮದ ಸವಿತಾ ಬಸ್‌ನಲ್ಲಿ ಹೋಗಲು ಆಗದ್ದಕ್ಕೆ ನಡೆದುಕೊಂಡು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ದಾರಿ ಮಧ್ಯೆ ಬೈಕ್ ಸವಾರರು ವಿದ್ಯಾರ್ಥಿನಿಯರನ್ನು ಮಾತನಾಡಿಸಿ, ಅವರನ್ನು ಮನೆಯವರೆಗೆ ಬಿಟ್ಟು ಬಂದ ಘಟನೆ ಕಳೆದ ಶುಕ್ರವಾರ ನಡೆದಿದೆ.

    ಕಲಘಟಗಿ ಡಿಪೋಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಹೆಚ್ಚಿನ ಬಸ್‌ಗಳು ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ನಮ್ಮ ಮೇಲಧಿಕಾರಿಗಳು ತಿಳಿಸಿದ್ದೇವೆ. ಬಸ್‌ಗಳು ಬಂದರೆ ಕೂಡಲೇ ಈ ಸಮಸ್ಯೆ ಬಗೆಹರಿಸಲಾಗುವುದು.

    ಬಿ. ಮಹೇಶ್ವರಿ, ಘಟಕ ವ್ಯವಸ್ಥಾಪಕಿ ಕಲಘಟಗಿ

    ದಿನನಿತ್ಯ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಾರೆ. ಮಕ್ಕಳು ಬಸ್ ಹತ್ತುತ್ತಿರುವಾಗಲೇ ಮಹಿಳೆಯರು ಸಣ್ಣ ಮಕ್ಕಳು ಎಂದು ನೋಡದೇ, ಮಕ್ಕಳನ್ನು ತಳ್ಳಿ ಬಸ್ ಹತ್ತುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಆದ್ದರಿಂದ ಸಚಿವ ಸಂತೋಷ ಲಾಡ್ ಅವರು ಮಕ್ಕಳ ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು.

    ನಾರಾಯಣ ಶಿಂಧೆ, ಪೋಷಕ

    ಮಂಗಳವಾರ ದಿನ ನನಗೆ ಬಸ್‌ನಲ್ಲಿ ನಿಂತುಕೊಳ್ಳಲು ಜಾಗ ಸಿಗದಿರುವಷ್ಟು ಮಹಿಳೆಯರು ತುಂಬಿದ್ದರು. ತಂಬೂರಿಗೆ ಹೋಗಲು ಬಸ್ ಸಿಗದ್ದರಿಂದ ಪರಿಚಯದವರೊಬ್ಬರು ನನ್ನನ್ನು ಬೈಕ್‌ನಲ್ಲಿ ಊರಿಗೆ ಬಿಟ್ಟು ಬಂದಿದ್ದಾರೆ. ದಿನಂಪ್ರತಿ ಈ ಸಮಸ್ಯೆ ನಾವು ಎದುರಿಸುತ್ತಿದ್ದೇವೆ.

    ಶೈಲಜಾ ನೆಲಮಾಳಗಿ, 9ನೇ ತರಗತಿ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts