More

    ಗುರಿಯೆಡೆಗೆ ವಿದ್ಯಾರ್ಥಿಗಳ ನಡೆ


    ಚಾಮರಾಜನಗರ : ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಿ ಓದಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ವಿವಿಧ ಕ್ಷೇತ್ರದಲ್ಲಿನ ಸಾಧಕರ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಎಂ.ಆರ್. ಮಂಜುನಾಥ್ ಸಲಹೆ ನೀಡಿದರು.

    ಹನೂರು ತಾಲೂಕಿನ ರಾಮಾಪುರ ಜೆಎಸ್‌ಎಸ್ ಸಭಾಭವನದಲ್ಲಿ ಶನಿವಾರ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭರವಸೆ ತುಂಬುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಈ ವೇಳೆ ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಹಾಗಾಗಿ, ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಲು ಸಂಕಲ್ಪ ಮಾಡಬೇಕಿದೆ. ಈ ದಿಸೆಯಲ್ಲಿ ಗುರುಗಳ ಹಾಗೂ ಪಾಲಕರ ಮಾರ್ಗದರ್ಶನ ಅತಿ ಮುಖ್ಯ. ಜತೆಗೆ ಶಿಕ್ಷಣ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇರು ವ್ಯಕ್ತಿಗಳಿದ್ದಾರೆ.

    ಇವರ ಸಾಧನೆಯ ಹಿಂದೆ ಅಪಾರ ಶ್ರಮವಿದೆ. ಹಾಗಾಗಿ ಸಾಧಕರಿಗೆ ಇವರು ಸ್ಪೂರ್ತಿಯಾಗಿದ್ದಾರೆ. ಆದ್ದರಿಂದ ಓದು ಹಾಗೂ ವರ್ತಮಾನದ ವಿದ್ಯಾಮಾನದ ಜತೆಗೆ ಸಾಧಕರ ಬಗ್ಗೆ ತಿಳಿದುಕೊಳ್ಳುವುದರಿಂದ ಸಾಧನೆಗೆ ಪ್ರೇರಣೆ ಸಿಗುತ್ತದೆ. ಯಶಸ್ಸು ಲಭಿಸುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸುವುದರ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.


    ಶಾಸಕರ ಯಶಸ್ಸಿನ ಗುಟ್ಟು: ಈ ಹಿಂದೆ ಕೆಲಸ ಕಾರ್ಯಗಳ ನಿಮಿತ್ತ ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗುತ್ತಿದ್ದ ವೇಳೆ ನಾನು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಇದರಿಂದ ದೃಢ ನಿರ್ಧಾರ ಮಾಡಿ ಶಾಸಕನಾಗಬೇಕೆಂಬ ಗುರಿಯನ್ನು ಇಟ್ಟುಕೊಂಡು ಛಲ ಹಾಗೂ ಪರಿಶ್ರಮದಿಂದ ಕಾರ್ಯನಿರ್ವಹಿಸಿದೆ. ಜನರ ಮೆಚ್ಚುಗೆ ಗಳಿಸಿದೆ.

    ಅದರ ಫಲ ಇದೀಗ ಶಾಸಕನಾಗಿದ್ದೇನೆ. ಆದ್ದರಿಂದ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ದೊರೆಯುವುದಕ್ಕೆ ನಾನೇ ಸಾಕ್ಷಿ ಎಂದು ಶಾಸಕರು ತಮ್ಮ ಯಶಸ್ಸಿನ ಗುಟ್ಟನ್ನು ವಿದ್ಯಾರ್ಥಿಗಳಲ್ಲಿ ಹೇಳಿಕೊಂಡರು.


    ಹನೂರು ಪ್ರಥಮ ಸ್ಥಾನ ಪಡೆಯಬೇಕು: ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಕಳೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಾ.ನಗರ ಶೇಕಡ 93ರಷ್ಟು ಫಲಿತಾಂಶ ಪಡೆದುಕೊಂಡಿದೆ. ಆದರೆ, ಕಳೆದ 6 ಬಾರಿ ನಿರಂತರವಾಗಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದ ಹನೂರು ವಲಯ 3ನೇ ಸ್ಥಾನವನ್ನು ಪಡೆದಿರುವುದು ಬೇಸರದ ಸಂಗತಿ.

    ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರಿದ್ದಾರೆ. ಉತ್ತಮ ಶಿಕ್ಷಕರಿದ್ದಾರೆ. ಜತೆಗೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹನೂರು ಶೈಕ್ಷಣಿಕ ವಲಯ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಬೇಕು. ಈ ದಿಸೆಯಲ್ಲಿ ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.


    ಇದೇ ವೇಳೆ ಸಂಪನ್ಮೂಲ ಶಿಕ್ಷಕರಿಂದ ಆಯಾ ಭಾಷೆಯ ಪರೀಕ್ಷಾ ಕ್ರಮ, ಸ್ವ ಮೌಲ್ಯಮಾಪನ, ಹೆಚ್ಚು ಅಂಕ ಗಳಿಸುವ ರೀತಿ, ಓದುವ ಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಸಂಬಂಧ ಮಕ್ಕಳಿಗೆ ತಿಳಿಸಿ ಕೊಡಲಾಯಿತು.


    ಕಾರ್ಯಕ್ರಮದಲ್ಲಿ ಬಿಇಒ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಮಲ್‌ದಾಸ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಹಾಗೂ ತಾಲೂಕಿನ ವಿವಿಧ ಪ್ರಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts