More

    ವಿದ್ಯಾರ್ಥಿಗಳ ಬೆನ್ನು ಹತ್ತಿದ ಕರೊನಾ!

    ರಾಮದುರ್ಗ (ಬೆಳಗಾವಿ): ಶಾಲೆ ಪ್ರಾರಂಭಿಸಬೇಕಾ? ಬೇಡವಾ ಎಂಬ ಪ್ರಶ್ನೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರ ಶಾಲೆ ಉತ್ತರ ನೀಡಿದ್ದು, ಇಲ್ಲಿನ 30 ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾಗಿದೆ. ಈ ಭಯಾನಕ ವಿದ್ಯಮಾನ ಸದ್ಯ ಶಾಲೆ ಪ್ರಾರಂಭ ಮಾಡುವುದು ಬೇಡ ಎಂಬ ಮಾಹಿತಿಯನ್ನು ಪ್ರತ್ಯೇಕ್ಷವಾಗಿ ರವಾನಿಸಿದೆ.

    ಶಿಕ್ಷಕರು ಗ್ರಾಮದ ಸಮುದಾಯ ಭವನ ಸೇರಿದಂತೆ ವಿವಿಧೆಡೆ ಸಮಿತಿ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ವಟಾರ ಶಾಲೆ ಆರಂಭಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಹೀಗಾಗಿ ಮಕ್ಕಳು ಹಾಗೂ ಗ್ರಾಮಸ್ಥರನ್ನು ಕೋವಿಡ್-19 ಟೆಸ್ಟ್‌ಗೆ ಒಳಪಡಿಸಿದಾಗ ಸುಮಾರು 30 ವಿದ್ಯಾರ್ಥಿಗಳು ಹಾಗೂ 6 ಪಾಲಕರಿಗೆ ಸೋಂಕು ದೃಢವಾಗಿದೆ. ಒಟ್ಟು 190 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ, ಉಳಿದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೂ ಸೋಂಕು ತಗುಲಿರಬಹುದು ಎಂಬ ಆತಂಕ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ.

    ಆರೋಗ್ಯಾಧಿಕಾರಿಗಳಿಂದ ಪರಿಶೀಲನೆ: 30 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ ಹಾಗೂ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಮಾತನಾಡಿ, ಸೋಂಕು ದೃಢಪಟ್ಟ ವಿದ್ಯಾರ್ಥಿಗಳು, ಪಾಲಕರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಗ್ರಾಮಸ್ಥರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಿ ಸೋಂಕು ದೃಢವಾದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

    ಅಧಿಕಾರಿಗಳಿಗೆ ತಲೆಬಿಸಿ: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾಗಮ ಹೆಸರಿನಲ್ಲಿ ವಟಾರ ತರಗತಿ ಆರಂಭಿಸಿದೆ. ಆದರೆ, ಕರೊನಾ ಸೋಂಕು ವಿದ್ಯಾರ್ಥಿಗಳಿಗೂ ತಗುಲುತ್ತಿರುವುದರಿಂದ ಈ ಯೋಜನೆ ಮುಂದುವರಿಸಬೇಕೋ? ಬೇಡವೋ ಎಂಬ ಪ್ರಶ್ನೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನೂ ಇದೀಗ ಕಾಡುತ್ತಿದೆ.

    ಗ್ರಾಮದಲ್ಲಿ ಆರೋಗ್ಯ ಇಲಾಖೆ ಕರೊನಾ ಟೆಸ್ಟ್ ಮಾಡುವ ಸಂದರ್ಭದಲ್ಲಿ ವಿದ್ಯಾಗಮ ತರಗತಿಯಲ್ಲಿನ ವಿದ್ಯಾರ್ಥಿಗಳನ್ನೂ ಸಹ ಟೆಸ್ಟ್‌ಗೆ ಒಳಪಡಿಸಿದಾಗ 30 ವಿದ್ಯಾರ್ಥಿಗಳು ಹಾಗೂ 6 ಗ್ರಾಮಸ್ಥರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಸೋಂಕಿತ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಲಾಗಿದೆ.
    | ಎಂ.ಆರ್. ಅಲಾಸೆ ಬಿಇಒ, ರಾಮದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts