More

    ವಿದ್ಯಾರ್ಥಿಗಳ ದಾಖಲೆ ವಿವರ ಸರಿಪಡಿಸಿ

    ಹಾನಗಲ್ಲ: ಆಧಾರ್ ಕಾರ್ಡ್, ಶಾಲಾ ದಾಖಲಾತಿ ಹಾಗೂ ಬ್ಯಾಂಕ್ ಖಾತೆಯಲ್ಲಿನ ವಿವರ ಹೊಂದಾಣಿಕೆಯಾಗದೇ ಸಮಸ್ಯೆಯಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ಬರುತ್ತಿಲ್ಲ. ಶಾಲೆ ದಾಖಲಾತಿಯಂತೆ ಎಲ್ಲ ವಿವರ ಸರಿಪಡಿಸಿ ಎಂದು ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವ ಮಕ್ಕಳ ಖಾತೆಗೆ ಹಣ ಜಮೆ ಆಗದಿರುವ ಕುರಿತು ಇಲಾಖೆ ಸಹಾಯಕ ನಿರ್ದೇಶಕಿ ಜಿ.ಬಿ. ಹಿರೇಮಠ ಪ್ರಸ್ತಾಪಿಸಿದಾಗ, ಬಿಇಒ ಅವರಿಗೆ ಸಂಸದರು ಸೂಚನೆ ನೀಡಿದರು.

    ತಾಲೂಕಿನ 21 ಗ್ರಾಮಗಳಲ್ಲಿ ಆದರ್ಶ ಗ್ರಾಮ ಯೋಜನೆ ತಲಾ 40 ಲಕ್ಷ ರೂಪಾಯಿಗಳಲ್ಲಿ ಜಾರಿಗೊಂಡಿದ್ದು, ಇವುಗಳಲ್ಲಿ 3 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದೆಡೆ ಕಾಮಗಾರಿ ನಡೆದಿವೆ ಎಂದು ಜಿ.ಬಿ. ಹಿರೇಮಠ ತಿಳಿಸಿದರು.

    ತಾಪಂ ಇಒ ಬಿ. ಸುನೀಲಕುಮಾರ, 5 ಗ್ರಾಪಂಗಳು ಅಮೃತ ಯೋಜನೆಗೆ ಆಯ್ಕೆಯಾಗಿದ್ದು, ತಲಾ 9 ಕೋಟಿ ರೂ.ನಂತೆ ಒಟ್ಟು 45 ಕೋಟಿ ರೂಪಾಯಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

    ಪ್ರತಿಕ್ರಿಯಿಸಿದ ಸಂಸದ ಉದಾಸಿ ಇತ್ತೀಚೆಗೆ ಕಬ್ಬಿಣ, ಸಿಮೆಂಟ್ ಸೇರಿದಂತೆ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ. ಅರ್ಧದಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಹಳೆಯ ಎಸ್​ಆರ್ ದರ ಬಿಟ್ಟು ಹೆಚ್ಚುವರಿಯಾದ ದರ ಹಾಕಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದು ಸೂಚಿಸಿದರು.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮಾತನಾಡಿ, ತಾಲೂಕಿನ ಒಟ್ಟು 8 ಲಂಬಾಣಿ ತಾಂಡಾಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸರ್ಕಾರ ಆದೇಶಿಸಿದ್ದು, ಸ್ವ-ಸಹಾಯ ಸಂಘಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.

    ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ಮದನಕುಮಾರ ಶಿಂಧೆ, ಜಲ ಜೀವನ ಮಿಷನ್ ಯೋಜನೆಯಡಿ 6 ಗ್ರಾಮಗಳಲ್ಲಿ ಕಾಮಗಾರಿ ನಡೆದಿದ್ದು, ಮೂರು ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಂಡಿವೆ. ಬಾಳೂರು ಗ್ರಾಮದಲ್ಲಿ ಗ್ರಾಮಸ್ಥರು ಮೀಟರ್ ಕಿತ್ತೊಗೆದಿದ್ದಾರೆ ಎಂದು ಮಾಹಿತಿ ನೀಡಿದರು.

    ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಮಾತನಾಡಿ, ಅತಿವೃಷ್ಟಿಯಿಂದಾದ ಅಡಕೆ, ಬಾಳೆ ತೋಟದ ಬೆಳೆಗಳಿಗೆ 17 ಲಕ್ಷ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ. ಮಾವು ಬೆಳೆಗಾರರಿಗೆ ಕಳೆದ ವರ್ಷದ ಪರಿಹಾರ ಜನವರಿ ಮಾಸಾಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದರು.

    ಸಭೆಯಲ್ಲಿ ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಶು ಸಂಗೋಪನ, ಜಿಲ್ಲಾ ಪಂಚಾಯತ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ದೇಶದಲ್ಲಿ ನಿರ್ವಿುಸುವ ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮಾರ್ಚ್ ನಂತರ ಅನುಮೋದನೆ ನೀಡುವುದಿಲ್ಲ. ಘಟಕಕ್ಕೆ ಸರಬರಾಜಾದ ಬಳಿಕ ಉಳಿಯುವ ಕಲ್ಮಶ ನೀರು ಬಹಳಷ್ಟು ಪೋಲು ಆಗುತ್ತಿದ್ದು, ಇನ್ನು ಮುಂದೆ ಯಾವುದೇ ಘಟಕಗಳಿಗೆ ಅನುಮೋದನೆ ನೀಡಲಾಗುವುದಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆದಿದೆ.

    | ಶಿವಕುಮಾರ ಉದಾಸಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts