More

    ಸಂಚಾರ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ಮುಳಗುಂದ: ಬಸಾಪೂರ ಕ್ರಾಸ್​ನಲ್ಲಿ ವಾಕರಸಾ ಸಂಸ್ಥೆಯ ಬಸ್ ನಿಲುಗಡೆ ಮಾಡಬೇಕು ಎಂದು ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಕೆಲಕಾಲ ಸಂಚಾರ ಬಸ್ ತಡೆ ನಡೆಸಿದರು.

    ಪಟ್ಟಣದ ಪದವಿ ಕಾಲೇಜ್​ನಲ್ಲಿ 480ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಲಕ್ಷ್ಮೇಶ್ವರ ಸೇರಿದಂತೆ ಸುತ್ತಲಿನ ಶಿಗ್ಲಿ, ಹೂವಿನ ಶಿಗ್ಲಿ, ಯಳವತ್ತಿ, ಮಾಡಳ್ಳಿ, ಕಲಿವಾಳ ಗ್ರಾಮಗಳಿಂದ ಮಕ್ಕಳು ಬರುತ್ತಾರೆ. ಈ ಗ್ರಾಮಗಳ ಮಾರ್ಗದಲ್ಲಿ ಗದಗ ಹಾಗೂ ಲಕ್ಷ್ಮೇಶ್ವರ ಡಿಪೋಗಳಿಗೆ ಸೇರಿದ ಸುಮಾರು 20 ಬಸ್​ಗಳು ನಿತ್ಯ ಸಂಚರಿಸುತ್ತವೆ. ಆದರೆ, ಒಂದೂ ಬಸ್ ನಿಲುಗಡೆಯಾಗುವುದಿಲ್ಲ. ಮುಂದೆ ಪಟ್ಟಣದ ನಿಲ್ದಾಣಕ್ಕೆ ಹೋಗಿ ನಿಲ್ಲಿಸುತ್ತಾರೆ. ಅಲ್ಲಿಂದ ಸುಮಾರು 3 ಕಿ.ಮೀ. ನಡೆದುಕೊಂಡು ಬರಬೇಕು. ನಂತರ ಬಸ್ ಹತ್ತಲು ದಾವಲ್​ವುಲಿಕ್ ಪಹಾಡದವರೆಗೆ ಒಂದು ಕಿ.ಮೀ. ನಡೆದು ಹೋಗಿ ಹತ್ತಬೇಕು. ಕೆಲ ಸಮಯ ನಿರ್ವಾಹಕ ನಿಲ್ಲುವಂತೆ ಸೀಟಿ ಹಾಕಿದರೂ ಚಾಲಕ ನಿಲ್ಲಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.

    ಆದೇಶವಿದ್ದರೂ ನಿಲುಗಡೆಗೆ ಮೀನಾ ಮೇಷ: ಈ ಹಿಂದೆ ಒಮ್ಮೆ ಹೋರಾಟ ಮಾಡಿದಾಗ ಅಧಿಕಾರಿಗಳು ಅಂತಾರಾಜ್ಯ ಹಾಗೂ ದೂರದ ಸಾರಿಗೆ ಬಸ್​ಗಳನ್ನು ನಿಲುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆದರೂ, ಚಾಲಕ- ನಿರ್ವಾಹಕರು ನಿಲುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳೇ ಮಾಡಿದ ಆದೇಶವನ್ನು ಸಿಬ್ಬಂದಿ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.

    ನಂತರ ಪಟ್ಟಣದ ನಿಲ್ದಾಣಾಧಿಕಾರಿ ಹಾಗೂ ಪಿಎಸ್​ಐ ಸಚಿನ್ ಅಲ್ಮೇಲ್ಕರ ಸ್ಥಳಕ್ಕಾಗಮಿಸಿ ಅಧಿಕಾರಿಗಳೊಂದಿಗೆ ರ್ಚಚಿಸಿ ಬಸ್ ನಿಲುಗಡೆಗೆ ನಿರ್ಧರಿಸಲಾಯಿತು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ವಿದ್ಯಾರ್ಥಿಗಳಾದ ವಿಜಯ ಮಡಿಕೇರಿ, ಮಹಾಂತೇಶ ಮಣಕವಾಡ, ಕಿರಣ ಬಾಳಿಕಾಯಿ, ಪ್ರವೀಣ ಶಿರಹಟ್ಟಿ, ಸಂತೋಷ ಕೊಟಗಿ, ಹಾಲಪ್ಪ ಶಿರಹಟ್ಟಿ, ಅಣ್ಣಪ್ಪ ಪಾಟೀಲ, ಅನಿತಾ ಪಾಟೀಲ, ರೇಷ್ಮಾ ಪಾಟೀಲ, ಮಹಾಲಕ್ಷ್ಮೀ ಪಾಟೀಲ, ಗಿರೀಶ ಇಟಗಿ, ರಾಜಶೇಖರ ಹಿರೇಮಠ, ಅರವಿಂದ ನಂದೆಣ್ಣವರ, ಬಸವರಾಜ ಮಳಲಿ, ಸಂತೋಷ ಕರಿಯಮ್ಮನವರ ಇತರರು ಇದ್ದರು.

    ಪ್ರತಿ ದಿನ ಬಸ್ ನಿಲ್ಲಿಸುವಂತೆ ನಿರ್ದೇಶನ ಮಾಡಲಾಗುವುದು. ಜತೆಗೆ ದಿನನಿತ್ಯ ಸಂಚರಿಸುವ ಬಸ್​ಗಳ ಹೆಚ್ಚುವರಿಯಾಗಿ 3 ಬಸ್​ಗಳನ್ನು ಲಕ್ಷ್ಮೇಶ್ವರ ಡಿಪೋದಿಂದ ಬಿಡಲಾಗುವುದು. ಅಲ್ಲದೆ, ಮತ್ತೆ ಇಂತಹ ಘಟನೆಗಳು ಸಂಭವಿಸದಂತೆ ಕ್ರಮ ವಹಿಸುತ್ತೇವೆ.
    | ವಿ.ಎಸ್. ಅಮರಶೆಟ್ಟಿ ನಿಲ್ದಾಣಾಧಿಕಾರಿ ಮುಳಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts