More

    ಪ್ರೇಕ್ಷಾ ಆತ್ಮಹತ್ಯೆ ಕೇಸ್​: ಲವ್ವರ್​ ಜತೆಗಿನ ಸಂಭಾಷಣೆ ಆಡಿಯೋದಲ್ಲಿದೆ ಸ್ಫೋಟಕ ಮಾಹಿತಿ!

    ವಿಜಯವಾಣಿ ಸುದ್ದಿಜಾಲ ಉಳ್ಳಾಲ/ಮಂಗಳೂರು: ಕುಂಪಲ ಆಶ್ರಯ ಕಾಲನಿ ನಿವಾಸಿ, ಮಂಗಳೂರು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಪ್ರೇಕ್ಷಾ ಸಾವು ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದ ಎರಡು ತಂಡಗಳು ಪ್ರತ್ಯೇಕವಾಗಿ ಮಹಜರು ನಡೆಸಿವೆ. ಎರಡೂ ತಂಡಗಳು ಇದೊಂದು ಆತ್ಮಹತ್ಯೆ ಎಂಬುದನ್ನು ತಿಳಿಸಿವೆ. ಈ ಸಂಬಂಧ ಆಡಿಯೋ ಕೂಡ ವಶಕ್ಕೆ ಪಡೆಯಲಾಗಿದೆ. ಅಂತಿಮವಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಸ್ಪಷ್ಟವಾಗಿ ಗೊತ್ತಾಗಲಿದೆ. ವರದಿ ಬರಲು ಸಮಯಾವಕಾಶ ಇದೆ ಎಂದು ಮಾಹಿತಿ ನೀಡಿದ್ದಾರೆ.

    ಆಗಿದ್ದೇನು?: ಮಾಡೆಲಿಂಗ್ ಕ್ಷೇತ್ರದತ್ತ ಆಸಕ್ತಿ ಹೊಂದಿದ್ದ ಪ್ರಥಮ ಪಿಯು ವಿದ್ಯಾರ್ಥಿನಿ ಪ್ರೇಕ್ಷಾ ಕಾಲೇಜಿನಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಹಾಡುಗಾರಿಕೆ, ಡ್ಯಾನ್ಸ್‌ನಲ್ಲೂ ಮುಂದಿದ್ದಳು. ಮಾಡೆಲಿಂಗ್ ಹವ್ಯಾಸ ಆಗಿದ್ದರಿಂದ ಹಲವು ಫೋಟೊ ಶೂಟ್‌ಗಳಲ್ಲಿ ಭಾಗಿಯಾಗಿದ್ದಳು. ಬುಧವಾರ ಫೋಟೊ ಶೂಟ್‌ಗಾಗಿ ಬೆಂಗಳೂರಿಗೆ ತೆರಳಬೇಕಿತ್ತು. ಅದಕ್ಕೆಂದೇ ಕಾಲೇಜಿಗೆ ರಜೆ ಹಾಕಿ ಬ್ಯೂಟಿ ಪಾರ್ಲರ್‌ಗೆ ಹೋಗಿ ಮನೆಗೆ ಬಂದಿದ್ದಳು.

    ಪ್ರೇಕ್ಷಾ ಮಾಡೆಲಿಂಗ್ ಫೋಟೊ ಶೂಟ್‌ಗೆ ಬೆಂಗಳೂರಿಗೆ ಹೋಗುವುದು ಆಕೆಯ ಸ್ನೇಹಿತ ಮುಂಡೋಳಿಯ ಯತೀನ್ ರಾಜ್‌ಗೆ ಇಷ್ಟವಿರಲಿಲ್ಲ. ಬುಧವಾರ ಬೆಳಗ್ಗೆಯಿಂದಲೇ ಈ ಬಗ್ಗೆ ಅವರಿಬ್ಬರು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ. ಅವರ ನಡುವೆ ಮಾತಿಗೆ ಮಾತು ಕೂಡ ಬೆಳೆದಿದೆ. ‘ನನಗೆ ಮಾಡೆಲಿಂಗ್‌ಗೆ ಹೋಗಲು ಯಾರೂ ಸಪೋರ್ಟ್ ಮಾಡುತ್ತಿಲ್ಲ. ನಾನು ಸಾಯುತ್ತೇನೆ’ ಎಂದು ಹೇಳಿರುವ ಆಡಿಯೋ ಪೊಲೀಸರಿಗೆ ದೊರೆತಿದೆ. ಆಕೆ ಹಾಗೆ ಹೇಳಿದ ಬಳಿಕ ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ.

    ಆತಂಕಗೊಂಡ ಯತೀನ್ ತನ್ನ ಗೆಳೆಯರಾದ ಆಶ್ರಯ ಕಾಲನಿಯ ಸೌರಭ್ ಮತ್ತು ಸುಹಾನ್ ಎಂಬವರೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಬಂದಿದ್ದು, ಹಿಂಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದರು. ಅಷ್ಟರಲ್ಲಿ ಪ್ರೇಕ್ಷಾ ನೇಣು ಬಿಗಿದುಕೊಂಡಿದ್ದಳು ಎಂದು ಪೊಲೀಸರು ಇದುವರೆಗಿನ ತನಿಖೆಯಲ್ಲಿ ಕಂಡುಕೊಂಡಿರುವ ಮಾಹಿತಿ ನೀಡಿದ್ದಾರೆ.

    ಯುವತಿಯ ಫೋನ್ ರ‌್ಯಾಕ್‌ನಲ್ಲಿ ಪತ್ತೆಯಾಗಿದೆ. ಶಂಕೆಯ ಆಧಾರದ ಮೇಲೆ ಮೂವರು ಯುವಕನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರ ಎರಡು ತಂಡಗಳು ತನಿಖೆ ಮುಂದುವರಿಸಿವೆ.

    ಫೋಟೊಗಳು ವೈರಲ್: ಯತೀನ್ ರಾಜ್ ಮತ್ತು ಪ್ರೇಕ್ಷಾ ಜೊತೆಯಾಗಿದ್ದ ಫೋಟೊ, ಬರ್ತ್‌ಡೇ ಪಾರ್ಟಿ ಮಾಡಿದ್ದ ವಿಡಿಯೋಗಳು ಸಿಕ್ಕಿವೆ. ಪ್ರೇಕ್ಷಾ ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದು, ಇದು ಯತೀನ್‌ಗೆ ಇಷ್ಟವಿರಲಿಲ್ಲ. ಆ ಕಾರಣಕ್ಕಾಗಿಯೇ ಭಾನುವಾರ ಪಿಲಾರ್ ಜಾತ್ರೆಗೆ ಹೋಗಿ ಪ್ರೇಕ್ಷಾಳ ಜತೆ ಜಗಳವಾಡಿದ್ದು, ಇದು ಸ್ಥಳೀಯರ ಗಮನಕ್ಕೂ ಬಂದಿತ್ತು.

    ಗಾಂಜಾ ಹಾವಳಿಗೆ ಕಂಗಾಲು: ಕುಂಪಲ ಆಶ್ರಯ ಕಾಲನಿ ಪ್ರದೇಶದಲ್ಲಿ ಗಾಂಜಾ ಮಾರಾಟ, ವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಹೆಣ್ಮಕ್ಕಳ ಚುಡಾವಣೆ ನಿರಂತರವಾಗಿದೆ. ಗಾಂಜಾ ಹಾವಳಿ ಕುರಿತು ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರೇಕ್ಷಾ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸುವ ಜೊತೆಗೆ ಗಾಂಜಾ ಹಾವಳಿಗೂ ಶಾಶ್ವತ ತಡೆ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಆಗ್ರಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts