More

    ಇಟಲಿಯಿಂದ ಮಂಗಳೂರು ತಲುಪಿದ ವಿದ್ಯಾರ್ಥಿನಿ, ಊರಿಗೆ ಬರಲು ನೆರವಾಗಿದ್ದು ಶಾಸಕ ಖಾದರ್

    ಮಂಗಳೂರು: ಕರೊನಾ ಸೋಂಕಿನ ಮರಣ ಮೃದಂಗದಿಂದ ಸಾವಿನ ಮನೆಯಂತಾದ ಇಟಲಿಯಲ್ಲಿ ಬಾಕಿಯಾಗಿದ್ದ ಮಂಗಳೂರಿನ ವಿದ್ಯಾರ್ಥಿನಿ ಹಲವು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಿ ಕೊನೆಗೂ ಭಾನುವಾರ ಬೆಳಗ್ಗೆ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.

    ಸುರತ್ಕಲ್ ನಿವಾಸಿ, ವಾಯುಪಡೆ ನಿವೃತ್ತ ಅಧಿಕಾರಿ ಶಿವರಾಮ ಭಟ್ – ಪ್ರೊ.ಶೈಲಜಾ ಭಟ್ ಪುತ್ರಿ ಶ್ರೀಮಧು ಮಣಿಪಾಲದಲ್ಲಿ ಕ್ಲಿನಿಕಲ್ ವೈರಾಲಜಿ ಕಲಿತ ಬಳಿಕ ಉತ್ತರ ಇಟಲಿಯ ಟ್ಯುರಿನ್ ವಿವಿಯಲ್ಲಿ ಪಿಎಚ್‌ಡಿ ಮಾಡಲು 5 ತಿಂಗಳ ಹಿಂದೆ ತೆರಳಿದ್ದರು. ಮಾ.15ರಂದು ವಿಶೇಷ ವಿಮಾನದಲ್ಲಿ ಇತರ 21 ವಿದ್ಯಾರ್ಥಿಗಳ ಜತೆ ನವದೆಹಲಿಯಲ್ಲಿ ಬಂದಿಳಿದು, ಸರ್ಕಾರದ ಸೂಚನೆಯಂತೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಕ್ಯಾಂಪ್‌ನಲ್ಲಿ 24 ದಿನ ಕ್ವಾರಂಟೈನ್(ವಿಶೇಷ ನಿಗಾ) ಅವಧಿ ಪೂರ್ಣಗೊಳಿಸಿದರು.

    ವಿಮಾನ ನಿಲ್ದಾಣದಲ್ಲಿ ತಪಾಸಣೆ, ಐಟಿಬಿಪಿ ಕ್ಯಾಂಪ್‌ನಲ್ಲಿ 14 ದಿನ ಬಳಿಕ ಹಾಗೂ 24 ದಿನ ಬಳಿಕ ಗಂಟಲು ಸ್ರಾವದ ಪರೀಕ್ಷೆ ಸಹಿತ ಎಲ್ಲದರಲ್ಲೂ ನೆಗೆಟಿವ್ ಬಂದಿರುವ ಕಾರಣ ಶ್ರೀಮಧು ಊರಿಗೆ ತರಳಲು ಅನುಮತಿ ಪಡೆದರು. ಲಾಕ್‌ಡೌನ್ ನಡುವೆಯೇ ಸಂಸದ ತೇಜಸ್ವಿಸೂರ್ಯ ಮುತುವರ್ಜಿಯಿಂದ ವಿಶೇಷ ಪಾಸ್ ಜತೆ ಮಂಗಳೂರಿನ ವಿದ್ಯಾರ್ಥಿನಿ ಸಹಿತ ಕರ್ನಾಟಕದ ನಿವಾಸಿಗಳಿಗೆ ಬೆಂಗಳೂರು ತಲುಪಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ರಾತ್ರಿ ಸುಮಾರು ಒಂದು ಗಂಟೆಗೆ ಬಸ್ ಬೆಂಗಳೂರು ತಲುಪಿದೆ. ಆದರೆ ಬೆಂಗಳೂರಿನಿಂದ ಮಗಳನ್ನು ಸುರತ್ಕಲ್ನ ತಮ್ಮ ಮನೆಗೆ ಕರೆ ತರಲು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಅನುಮತಿ ಪಡೆಯುವ ಪ್ರಯತ್ನಗಳು ವಿಫಲವಾದವು. ಜಿಲ್ಲಾಧಿಕಾರಿ ಭೇಟಿಗೂ ಅವಕಾಶ ದೊರೆಯಲಿಲ್ಲ ಎಂದು ಯುವತಿ ತಂದೆ ಶಿವರಾಮ ಭಟ್ ಬೇಸರ ವ್ಯಕ್ತಪಡಿಸಿದರು.

    ಕೊನೆಗೆ ವಿದ್ಯಾರ್ಥಿನಿಯ ನೆರವಿಗೆ ಬಂದದ್ದು ಶಾಸಕ ಯು.ಟಿ.ಖಾದರ್. ವಕೀಲ ಮಿತ್ರ ಅರುಣ್ ಬಂಗೇರ ಮೂಲಕ ಸಮಸ್ಯೆ ವಿವರಿಸಿದ್ದು, ಭಾನುವಾರ ಖಾದರ್ ಖುದ್ದಾಗಿ ಮಗಳನ್ನು ಬೆಂಗಳೂರಿನಿಂದ ಮನೆಗೆ ಕರೆತಂದಿದ್ದಾರೆ. ಅವರ ಉಪಕಾರಕ್ಕೆ ಕೃತಜ್ಞತೆ ಹೇಳಲೇಬೇಕು ಎಂದು ಶಿವರಾಮ ಭಟ್ ತಿಳಿಸಿದರು.

    ಫೆಬ್ರವರಿಯಲ್ಲೇ ಕರೊನಾ: ಇಟಲಿಯಲ್ಲಿ ಫೆಬ್ರವರಿ ಮಧ್ಯದಲ್ಲಿ ಕರೊನಾ ಸೋಂಕು ಸಮಸ್ಯೆ ಆರಂಭವಾದಾಗ ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆರಂಭದಲ್ಲಿ ಅಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ರಜೆ ನೀಡಲಾಯಿತು. ಆದರೆ ಬರಬರುತ್ತಾ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯಿತು. ನಾವು ವಾಸ್ತವ್ಯದ ಕೊಠಡಿಗಳಲ್ಲೇ ಉಳಿಯುವಂತಾಯಿತು ಎಂದು ಶ್ರೀಮಧು ‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡಿದ್ದಾರೆ.

    ಭಾರತಕ್ಕೆ ತೆರಳಲು ಸಿದ್ಧರಾಗಿರುವವರು ಅರ್ಜಿ ಸಲ್ಲಿಸುವಂತೆ ಭಾರತೀಯ ರಾಯಭಾರ ಕಚೇರಿಯಿಂದ ಸೂಚನೆ ಬಂತು. ಮಾ.14ರಂದು ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲು ತಯಾರಾಗುವಂತೆ ಅಧಿಕಾರಿಗಳು ಸೂಚಿಸಿದರು. ಮಿಲಾನ್ ವಿಮಾನ ನಿಲ್ದಾಣದಿಂದ ಹೊರಡುವಾಗ ರಾಯಭಾರ ಕಚೇರಿಯು ನಮಗೆ ಸ್ಯಾನಿಟೈಸರ್, ಮಾಸ್ಕ್, ಸಾಬೂನು ಮತ್ತಿತರ ಅವಶ್ಯ ಸುರಕ್ಷಾ ವಸ್ತುಗಳನ್ನು ವ್ಯವಸ್ಥೆ ಮಾಡಿತ್ತು ಎಂದವರು ನೆನಪಿಸಿಕೊಂಡರು.

    ಅತ್ಯುತ್ತಮ ಕ್ವಾರಂಟೈನ್ ಅವಧಿ: ಐಟಿಬಿಪಿ ಕ್ಯಾಂಪ್‌ನಲ್ಲಿ ಕಳೆದ ಕ್ವಾರಂಟೈನ್ ಅವಧಿಯಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಸಾಬೂನು, ಬ್ರಷ್, ಟವೆಲ್, ಸ್ಯಾನಿಟೈಸರ್, ಮಾಸ್ಕ್ ಸಹಿತ ನಮ್ಮ ಸಣ್ಣಸಣ್ಣ ಅಗತ್ಯಗಳನ್ನು ಗಮನದಲ್ಲಿಟ್ಟು ಅಗತ್ಯ ವಸ್ತುಗಳನ್ನು ಪೂರೈಸಲಾಯಿತು. ನ್ಯೂಟ್ರಿಶಿಯನ್ ಆಹಾರ ಒದಗಿಸಲಾಯಿತು. ಬಳಕೆಗೆ ವಾಶಿಂಗ್ ಮಷಿನ್ ವ್ಯವಸ್ಥೆ ಇತ್ತು. ಬಸ್‌ನಲ್ಲಿ ಹೊರಡುವ ಸಂದರ್ಭ ಕೂಡ ನಮ್ಮ ಕ್ಯಾಂಪ್ ಅಧಿಕಾರಗಳು ಪ್ರತಿಯೋರ್ವರಿಗೂ ಎರಡು ದಿನಗಳಿಗೆ ಬೇಕಾಗುವಷ್ಟು ಫುಡ್ ಪಾರ್ಸೆಲ್ ಒದಗಿಸಿದ್ದರು ಎಂದು ಮಧು ನೆನಪಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts